Advertisement

ತೀರ್ಪು ಬರುವವರೆಗೆ ವಿಶ್ವಾಸಮತ ಮುಂದೂಡಿ

12:35 AM Jul 23, 2019 | Team Udayavani |

ಬೆಂಗಳೂರು: ಶಾಸಕರ ರಾಜೀನಾಮೆ ಪ್ರಕರಣ ಕುರಿತು ಸುಪ್ರೀಂ ಕೋರ್ಟ್‌ನಿಂದ ಅಂತಿಮ ತೀರ್ಪು ಬರುವವರೆಗೂ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿಯವರು ವಿಶ್ವಾಸಮತ ಯಾಚನೆ ಮುಂದೂಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

Advertisement

ವಿಧಾನಸೌಧದ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಸರ್ಕಾರ ರಚಿಸಲು ಹಾಗೂ ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ಅವಕಾಶ ಸಿಗಬಾರದು. ರಾಜ್ಯಪಾಲರು ಈಗಾಗಲೇ ಮಧ್ಯಪ್ರವೇಶ ಮಾಡಿದ್ದು, ಸುಪ್ರೀಂ ಕೋರ್ಟ್‌ ನಮ್ಮ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನ ಮಾಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸುಪ್ರಿಂ ಕೋರ್ಟ್‌ ಶಾಸಕರಿಗೆ ಸದನದಲ್ಲಿ ಹಾಜರಿರಲೇಬೇಕೆಂದು ಒತ್ತಾಯ ಮಾಡುವ ಹಾಗಿಲ್ಲ ಎಂದು ಹೇಳಿತ್ತು. ಆದರೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿಪ್‌ ಉಲ್ಲಂಘನೆ ಬಗ್ಗೆ ಸದನದಲ್ಲಿ ಕ್ರಿಯಾಲೋಪ ಎತ್ತಿದ್ದನ್ನು ಸ್ಪೀಕರ್‌ ರಮೇಶ್‌ ಕುಮಾರ್‌ ಎತ್ತಿ ಹಿಡಿದು ರೂಲಿಂಗ್‌ ನೀಡಿದ್ದಾರೆ. ಶಾಸಕರು ವಿಪ್‌ ಉಲ್ಲಂಘನೆ ಮಾಡಿರುವ ವಿಚಾರದಲ್ಲಿ ಸ್ಪಷ್ಟನೆ ಸಿಗಬೇಕಿದೆ. ಸ್ಪೀಕರ್‌ ರೂಲಿಂಗ್‌ ನೀಡಿದ ಮೇಲೆ ನಮ್ಮ ಶಾಸಕರಿಗೆ ಈ ಬಗ್ಗೆ ಮಾಹಿತಿ ನೀಡಬೇಕು.

ಕೆಲವು ಶಾಸಕರು ಬೇರೆ ಊರಿನಲ್ಲಿದ್ದಾರೆ. ಅವರಿಗೂ ಈ ಬಗ್ಗೆ ಮಾಹಿತಿ ಕೊಡಬೇಕಾಗಿದೆ. ಹೀಗಾಗಿ ವಿಶ್ವಾಸಮತ ಒಂದು ದಿನ ತಡವಾದಲ್ಲಿ ಆಕಾಶವೇನೂ ಕಳಚಿ ಬೀಳುವುದಿಲ್ಲ. ಸುಪ್ರೀಂ ಕೋರ್ಟ್‌ ಸಹ ಸದನದಲ್ಲಿ ನಡೆಯುತ್ತಿರುವ ಕಲಾಪದ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ಕೋರ್ಟ್‌ ಕೂಡ ಆತುರದ ನಿರ್ಧಾರ ಪ್ರಕಟಿಸುತ್ತಿಲ್ಲ ಎಂದರು.

ಸಂವಿಧಾನದ 10ನೇ ಪರಿಚ್ಛೇದದನ್ವಯ ಸಂವಿಧಾನದಲ್ಲಿರುವ ಅವಕಾಶವನ್ನು ಕೇಳಿದ್ದು, ಇದು ಅತೃಪ್ತರಿಗೆ ರಕ್ಷಣೆ ಎಂದು ಭಾವಿಸುವ ಹಾಗಿಲ್ಲ. ಪಕ್ಷೇತರ ಶಾಸಕ ನಾಗೇಶ್‌ ಹಾಗೂ ಕಾಂಗ್ರೆಸ್‌ ಶಾಸಕ ಆರ್‌.ಶಂಕರ್‌ ಸೋಮವಾರವೇ ವಿಶ್ವಾಸ ಮತ ಯಾಚನೆ ನಡೆಯಬೇಕು ಎಂದು ಕೇಳಿಕೊಂಡಿದ್ದು, ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ಇದು ವಿಚಾರಣೆಗೆ ಬರಲಿದೆ ಎಂದರು.

Advertisement

ಸಾಂವಿಧಾನಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಶಾಸಕರಿಗೆ ವಿಪ್‌ ಬಗ್ಗೆ ಸ್ಪಷ್ಟ ಮಾಹಿತಿ ಹೊರ ಬರಬೇಕಿದೆ. ಹೀಗಾಗಿ, ಸುಪ್ರೀಂ ಕೋರ್ಟ್‌ನಿಂದ ತೀರ್ಪು ಹೊರಬರುವವರೆಗೆ ವಿಶ್ವಾಸಮತ ಯಾಚನೆ ಮಾಡುವುದು ಸರಿಯಲ್ಲ ಎಂದರು. ಅತೃಪ್ತ ಶಾಸಕರನ್ನು ಬಿಜೆಪಿ ನಾಯಕರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.

ಸ್ಪೀಕರ್‌ ನೀಡಿರುವ ರೂಲಿಂಗ್‌ನಿಂದಾಗಿ ಶಾಸಕರಿಗೆ ವಿಪ್‌ ಅನ್ವಯವಾಗುತ್ತದೆ ಎನ್ನುವುದು ಸ್ಪಷ್ಟವಾಗಿದೆ. ಶಾಸಕರು ವಿಪ್‌ ಉಲ್ಲಂಘಿಸಿದರೆ ಅವರ ಸದಸ್ಯತ್ವ ಅನರ್ಹಗೊಳ್ಳುತ್ತದೆ. ಶಾಸಕ ಸ್ಥಾನವೇ ಹೋದ ಮೇಲೆ ಬಿಜೆಪಿಯವರು ಅವರನ್ನು ಬೀದಿ ಪಾಲು ಮಾಡುವುದು ಖಚಿತ. ಹೀಗಾಗಿ ಈಗಲೇ ಎಚ್ಚೆತ್ತುಕೊಂಡು ಶಾಸಕರು ತಮ್ಮ ರಾಜೀನಾಮೆ ಹಿಂಪಡೆಯಬೇಕು ಎಂದು ದಿನೇಶ್‌ ಗುಂಡೂರಾವ್‌ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next