Advertisement

ಪೋಸ್ಟ್‌ಮನ್‌ನಿಂದ ಲಕ್ಷಾಂತರ ರೂ. ಪಂಗನಾಮ

05:18 PM Jan 08, 2020 | Suhan S |

ಮುಂಡಗೋಡ: ತಾಲೂಕಿನ ಹನುಮಾಪುರ ಗ್ರಾಮದ ಪೋಸ್ಟಮನ್‌ ಸಾರ್ವಜನಿಕರ ಲಕ್ಷಾಂತರ ರೂ. ದುರ್ಬಳಕೆ ಮಾಡಿಕೊಂಡು ಪರಾರಿಯಾಗಿ ಮೂರು ತಿಂಗಳಾದರೂ ಅಂಚೆ ಇಲಾಖೆ ಅಧಿಕಾರಿಗಳು ಪೊಲೀಸ್‌ ದೂರು ದಾಖಲಿಸದೆ ಮೌನ ವಹಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಕಳೆದ ಐದು ವರ್ಷಗಳಿಂದ ಹನುಮಾಪುರದ ಯುವಕನೊಬ್ಬ ಗ್ರಾಮದ ಅಂಚೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದನು. ಗ್ರಾಮದ ವ್ಯಕ್ತಿ ಎಂಬ ನಂಬಿಕೆಯಿಂದ ಜನ ಈತನ ಕೈಯಲ್ಲಿ ಉಳಿತಾಯ ಖಾತೆ ಮತ್ತು ಮರುಕಳಿಸುವ ಠೇವಣಿ ಖಾತೆಗೆ ಜಮಾ ಮಾಡಲು ಪಾಸ್‌ಬುಕ್‌ ಮತ್ತು ಹಣ ಕೊಡುತ್ತಿದ್ದರು. ಆದರೆ ಈತ ಹಣವನ್ನು ಜಮಾ ಮಾಡದೆ ಕೇವಲ ಪಾಸ್‌ಬುಕ್‌ ನಲ್ಲಿ ಮಾತ್ರ ಕೈ ಬರಹದಿಂದ ನಮೂದಿಸಿ ಮೊಹರು ಹಾಕಿ ಕೆಲವು ಜನರಿಗೆ ಪಾಸ್‌ ಬುಕ್‌ ಕೊಟ್ಟು ಇನ್ನು ಕೆಲವರ ಪಾಸ್‌ಬುಕ್‌ ಗಳನ್ನು ತನ್ನ ಬಳಿಯೆ ಇಟ್ಟುಕೊಳ್ಳುತ್ತಿದ್ದ. ಹಾಗೂ ವಿಧವಾ ವೇತನ, ವೃದ್ಧಾಪ್ಯವೇತನ ಮತ್ತು ಅಂಗವಿಕಲರಿಗೆಬರುವ ವೇತನದಲ್ಲಿಯೂ ಕೆಲವರಿಗೆ ವಂಚಿಸಿದ್ದಾನೆ.

ಅಂಚೆ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಬಂದು ಮನೆ ಮನೆಗೆ ತೆರಳಿ ವಂಚನೆಗೆ ಒಳಗಾದವರ ಮಾಹಿತಿ ಪಡೆದುಕೊಂಡು ಹೋಗಿ ಮೂರು ತಿಂಗಳು ಕಳೆದಿವೆ. ಆದರೆ ಅಂಚೆ ಇಲಾಖೆಯವರು ಇದೂವರೆಗೂ ಪೋಸ್ಟ್‌ಮನ್‌ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಹಾಗೂ ಅವರ ವಿರುದ್ಧ ಪೊಲೀಸ್‌ ದೂರು ಸಹ ದಾಖಲಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ತಹಶೀಲ್ದಾರ್‌ಗೆ ದೂರು: ತಾಲೂಕಿನ ಹನುಮಾಪುರ ಗ್ರಾಮದ ಕೆಲವು ಮಹಿಳೆಯರು ತಹಶೀಲ್ದಾರ್‌ ಶ್ರೀಧರ ಮುಂದಲಮನೆ ಅವರನ್ನು ಭೇಟಿಯಾಗಿ ತಮಗಾದ ಅನ್ಯಾಯದ ಕುರಿತು ಮಾಹಿತಿ ನೀಡಿದರು. ಹಾಗೂ ಅಂಚೆ ಇಲಾಖೆಯಿಂದ ನಮಗೆ ಹಣ ಮರಳಿ ಕೊಡಿಸುವಂತೆ ವಿನಂತಿಸಿದರು. ಈ ಕುರಿತು ಅಂಚೆ ಇಲಾಖೆಯವರೊಂದಿಗೆ ಮಾತನಾಡಿ ಹಣ ಮರಳಿಸಲು ಕ್ರಮ ವಹಿಸುತ್ತೇನೆ ಎಂದು ಮಹಿಳೆಯರಿಗೆ ಭರವಸೆ ನೀಡಿದರು. ಅಂಚೆ ಇಲಾಖೆ ಹಿರಿಯ ಅಧಿಕಾರಿಗಳು ಇನ್ನಾದರೂ ಇತ್ತ ಗಮನ ಹರಿಸಿ ಬಡ ಜನರಿಗೆ ನ್ಯಾಯ ಒದಗಿಸುವರೆ ಎಂಬುದನ್ನು ಕಾದೂ ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next