ಸೂರತ್ : “ಮುಸ್ಲಿಮ್ ಬಾಂಧವರೇ, ಅಹ್ಮದ್ ಪಟೇಲರನ್ನು ಗುಜರಾತ್ ಮುಖ್ಯ ಮಂತ್ರಿಯನ್ನಾಗಿ ಮಾಡಲು ನೀವೆಲ್ಲ ಜತೆಗೂಡಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ’ ಎಂದು ಕರೆ ನೀಡುವ ಪೋಸ್ಟರ್‌ಗಳು ಸೂರತ್‌ನ ಕೆಲವು ಭಾಗಗಳಲ್ಲಿ ರಾರಾಜಿಸುತ್ತಿರುವುದು ಕಂಡು ಬಂದಿದೆ.
ಆದರೆ ಇದಕ್ಕೆ ವ್ಯತಿರಿಕ್ತವಾಗಿ ಸ್ವತಃ ಅಹ್ಮದ್ ಪಟೇಲರೇ, “ನಾನು ಗುಜರಾತ್ ಸಿಎಂ ಅಭ್ಯರ್ಥಿ ಅಲ್ಲ; ಮತ್ತು ಭವಿಷ್ಯದಲ್ಲಿ ಕೂಡ ಸಿಎಂ ಆಗಲು ಬಯಸುವುದಿಲ್ಲ” ಎಂದು ಸ್ಪಷ್ಟೀಕರಣ ನೀಡಿದ್ದಾರೆ.
“ಇದು ಬಿಜೆಪಿಯವರದ್ದೇ ಅಪಪ್ರಚಾರದ ಅಭಿಯಾನ; ಏಕೆಂದರೆ ತಾವು ಗುಜರಾತ್ ಚುನಾವಣೆಯನ್ನು ಸೋಲುವುದು ನಿಶ್ಚಿತ ಎಂಬ ಅರಿವು ಅವರಲ್ಲಿ ಮೂಡತೊಡಗಿದೆ. ನಾನೆಂದೂ ಗುಜರಾತ್ ಸಿಎಂ ಅಭ್ಯರ್ಥಿಯಾಗಿರಲಿಲ್ಲ ಮತ್ತು ಮುಂದೆಂದೂ ಆಗಬಯಸುವುದಿಲ್ಲ” ಎಂದು ಪಟೇಲ್ ಹೇಳಿದರು.
ಗುಜರಾತ್ ಚುನಾವಣಾ ಪ್ರಚಾರಾಭಿಯಾನದ ಉಸ್ತುವಾರಿ ಹೊಣೆಗಾರಿಕೆಯನ್ನು ಸ್ವತಃ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೇ ವಹಿಸಿಕೊಂಡಿದ್ದಾರೆ. ಒಂದೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದರೆ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದನ್ನು ಅವರಾಗಲೀ, ಪಕ್ಷವಾಗಲೀ ಈ ವರೆಗೂ ಬಾಯಿ ಬಿಟ್ಟಿಲ್ಲ.
ಅನೇಕ ಕಾಂಗ್ರೆಸಿಗರಲ್ಲಿ ಈ ಬಾರಿಯ ಚುನಾವಣೆಯಲ್ಲಿ ಪಕ್ಷವು ಬಿಜೆಪಿಯನ್ನು ಪ್ರಧಾನಿ ಮೋದಿ ಅವರ ಹುಟ್ಟೂರಲ್ಲೇ ಹಣಿಯುವುದು ಬಹುತೇಕ ಖಚಿತ ಎಂಬ ಅಭಿಪ್ರಾಯವಿದೆ. ಗುಜರಾತ್‌ನಲ್ಲಿ ಬಿಜೆಪಿ 1998ರಿಂದಲೂ ಅಧಿಕಾರದಲ್ಲಿದೆ.