ಗುವಾಹಟಿ: ಟೀಂ ಇಂಡಿಯಾದ ಈ ವರ್ಷದ ಮೊದಲ ಪಂದ್ಯ ಆಯೋಜಿಸಲು ಗುವಾಹಟಿಯ ಬಾರಸ್ಪರಾ ಕ್ರಿಕೆಟ್ ಸ್ಟೇಡಿಯಂ ಸಜ್ಜಾಗಿದೆ. ಲಂಕಾ ವಿರುದ್ಧದ ಮೊದಲ ಟಿ ಟ್ವೆಂಟಿಗೆ ಮುನ್ನಾ ಅಸ್ಸಾಂ ಕ್ರಿಕೆಟ್ ಮಂಡಳಿ ಕೆಲವು ನಿರ್ಧಾರಗಳನ್ನು ಕೈಗೊಂಡಿದೆ.
ಭಾರತ- ಶ್ರೀಲಂಕಾ ನಡುವಿನ ಮೊದಲ ಟಿ ಟ್ವೆಂಟಿ ಪಂದ್ಯ ವೀಕ್ಷಣೆಗೆ ಗುವಾಹಟಿ ಮೈದಾನಕ್ಕೆ ಆಗಮಿಸುವವರು ಯಾವುದೇ ಪೋಸ್ಟರ್, ಬ್ಯಾನರ್ ಗಳನ್ನು ತಮ್ಮ ಜೊತೆ ಕೊಂಡೊಯ್ಯುವಂತಿಲ್ಲ. ‘4’, ‘6’ ಬರೆದಿರುವ ಪ್ಲೆಕಾರ್ಡ್ ಗಳು, ಮಾರ್ಕರ್ ಗಳನ್ನು ಕೂಡಾ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.
ಪಂದ್ಯ ವೀಕ್ಷಣೆಗೆ ಬರುವ ಅಭಿಮಾನಿಗಲು ಪರ್ಸ್, ಮಹಿಳೆಯರ ಹ್ಯಾಂಡ್ ಬ್ಯಾಗ್, ಮೊಬೈಲ್ ಫೋನ್ ಮತ್ತು ವಾಹನದ ಕೀ ಬಿಟ್ಟು ಮತ್ಯಾವುದನ್ನು ಸ್ಟೇಡಿಯಂಗೆ ಒಳಗೆ ಕೊಂಡೊಯ್ಯುವಂತಿಲ್ಲ ಎಂದು ಅಸ್ಸಾಂ ಕ್ರಿಕೆಟ್ ಅಸೋಸಿಯೇಶನ್ ನ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ.
ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ಹಿನ್ನಲೆಯಲ್ಲಿ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.
ಶ್ರೀಲಂಕಾ- ಭಾರತ ನಡುವಿನ ಮೊದಲ ಟಿ ಟ್ವೆಂಟಿ ಪಂದ್ಯ ರವಿವಾರ ಸಂಜೆ ಏಳು ಗಂಟೆಗೆ ಆರಂಭವಾಗಲಿದೆ.