Advertisement

ಖಾಸಗೀಕರಣ ವಿರೋಧಿಸಿ ಅಂಚೆ ನೌಕರರ ಪ್ರತಿಭಟನೆ

05:39 PM Jul 23, 2022 | Shwetha M |

ವಿಜಯಪುರ: ಅಂಚೆ ಇಲಾಖೆ ಖಾಸಗೀಕರಣ ವಿರೋಧ, ಗ್ರಾಮೀಣ ಅಂಚೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖೀಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ನೇತೃತ್ವದಲ್ಲಿ ಗ್ರಾಮೀಣ ಅಂಚೆ ನೌಕರರು ವಿಜಯಪುರ ಅಂಚೆ ಅಧೀಕ್ಷಕರ ಕಚೇರಿ ಎದುರು ಧರಣಿ ನಡೆಸಿದರು.

Advertisement

ಈ ವೇಳೆ ಸಂಘದ ಕಾರ್ಯದರ್ಶಿ ವಿಠ್ಠಲಸಿಂಗ್‌ ರಜಪೂತ ಮಾತನಾಡಿ, ಕೇಂದ್ರ ಸರ್ಕಾರ ಅಂಚೆ ಇಲಾಖೆಯನ್ನು ಖಾಸಗೀಕರಣಗೊಳಿಸಲು ಹುನ್ನಾರ ನಡೆಸುತ್ತಿದೆ. ಕೇಂದ್ರ ಸರ್ಕಾರದ ಈ ಹುನ್ನಾರ ವಿರೋಧಿಸಿ ಅಂಚೆ ನೌಕರರ ಸಂಘಟನೆಗಳು ಒಟ್ಟಾಗಿ ಹೋರಾಟಕ್ಕೆ ಮುಂದಾಗಿವೆ. ಈ ಹೋರಾಟದಲ್ಲಿ ಇಲಾಖೆ ಉಳಿವಿಗಾಗಿ ಬೃಹತ್‌ ಹೋರಾಟ ಸಂಘಟಿಸಲಾಗುತ್ತಿದೆ ಎಂದರು.

ಕೇಂದ್ರ ಸರ್ಕಾರ ಕಮಲೇಶಚಂದ್ರ ಸಮಿತಿ ನೀಡಿರುವ ವರದಿ ಅನುಷ್ಠಾನದ ಬಾಕಿ ಬೇಡಿಕೆ ಈಡೇರಿಸುವ ಬದಲು ಅಂಚೆ ಇಲಾಖೆಯನ್ನು ಖಾಸಗೀಕರಣ ಮಾಡಲು ಹೊರಟಿದೆ. ಹೀಗಾಗಿ ಅಂಚೆ ನೌಕರರು ಸಂಘಟಿತ ಹೋರಾಟದ ಮೂಲಕ ಇಂಥ ಹುನ್ನಾರಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಮನವಿ ಮಾಡಿದರು.

ಸಂಘಟನೆ ಕಾರ್ಯಾಧ್ಯಕ್ಷ ಗುರು ಬೆಳ್ಳುಬ್ಬಿ ಮಾತನಾಡಿ, ಜಿಡಿಎಸ್‌ ನೌಕರರಿಗೆ ಸಿಗಬೇಕಾದ ಸೌಲಭ್ಯಗಳಿಗೆ ಸಂಬಂಧಿಸಿದ ಕಡತಗಳನ್ನು ಹಣಕಾಸು ಇಲಾಖೆಯಿಂದ ತಿರಸ್ಕರಿಸಿ ಹಿಂದಕ್ಕೆ ಕಳುಹಿಸಲಾಗಿದೆ. ಈಗ ನಾವು ಎಚ್ಚೆತ್ತುಕೊಂಡು ಹೋರಾಟ ಮಾಡದಿದ್ದರೆ ಖಂಡಿತ ಸರ್ಕಾರ ನಮಗೆ ಅನ್ಯಾಯ ಮಾಡುತ್ತದೆ. ಕೂಡಲೇ ಅಂಚೆ ನೌಕರರ ಎಲ್ಲ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಬೇಡಿಕೆಗಳ ಹಕ್ಕೊತ್ತಾಯ ಮಂಡಿಸಿದ ಎಸ್‌.ಆರ್‌. ನರಳೆ, ಗ್ರಾಮೀಣ ಅಂಚೆ ನೌಕರರನ್ನು ಕಾಯಂ ಮಾಡಬೇಕು. ಅಂಚೆ ಸೇವೆಗಳ ಖಾಸಗೀಕರಣ ಪ್ರಕ್ರಿಯೆ ನಿಲ್ಲಿಸಬೇಕು. ಜಿಡಿಎಸ್‌ ಸಮಿತಿಯು ಶಿಫಾರಸು ಮಾಡಿದ ಮೊತ್ತಕ್ಕೆ ಜಿಡಿಎಸ್‌ ಗ್ರಾಚ್ಯೂಟಿ ಮೊತ್ತ ನೀಡಬೇಕು. ಜಿಡಿಎಸ್‌ ನೌಕರರು ಮತ್ತು ಅವರ ಕುಟುಂಬಕ್ಕೆ ವೈದ್ಯಕೀಯ ಸೌಲಭ್ಯದ ಅನುದಾನ ಒದಗಿಸಬೇಕು. ನಿವೃತ್ತಿ ರಜೆಯಲ್ಲಿ 180 ದಿನಗಳವರೆಗೆ ಎನ್‌ ಕ್ಯಾಶ್‌ ಮಾಡಬಹುದಾದ ಶೇಖರಣೆಯ ಸೌಲಭ್ಯದೊಂದಿಗೆ ವಾರ್ಷಿಕ 30 ದಿನಗಳ ರಜೆಯ ಅನುದಾನ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

Advertisement

ಸಂಘಟನೆ ಅಧ್ಯಕ್ಷ ಬಿ.ಎನ್‌. ಬಿರಾದಾರ, ಸಾಯಿ ಪಾಟೀಲ, ಐ.ಸಿ. ಹಂಚಿನಾಳ, ಪಿ.ವಿ. ಪಾಟೀಲ, ಸಹ ಕಾರ್ಯದರ್ಶಿ ಓಂಕಾರ ಕೆ.ಎಸ್‌, ಎಸ್‌.ಆರ್‌. ಮೋರೆ, ಎಸ್‌. ವೈ. ತೋರತ, ಎಸ್‌.ಎಂ. ಹಿರೇಮಠ, ಮಹಾದೇವ ಚಿಪ್ಪರಕಟ್ಟಿ, ಆರ್‌.ಜಿ. ಕಂಬಾರ, ಚನ್ನು ಬಿರಾದಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next