Advertisement

ಭರವಸೆ ತ್ವರಿತವಾಗಿ ಈಡೇರಲಿ; ಗ್ರಾಮೀಣ ಅಂಚೆ ನೌಕರರ ಮುಷ್ಕರ

04:24 PM Jun 08, 2018 | Sharanya Alva |

ಗ್ರಾಮೀಣ ಅಂಚೆ ನೌಕರರು 16 ದಿನ ನಡೆಸಿದ ಮುಷ್ಕರದ ಫ‌ಲವಾಗಿ ಕೇಂದ್ರ ಸರಕಾರ ಅವರ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿದೆ. 2016ರಿಂದ ಪೂರ್ವಾನ್ವಯವಾಗುವಂತೆ ಅವರ ವೇತನದಲ್ಲಿ ಮೂರು ಪಟ್ಟು ಏರಿಕೆಯಾಗಲಿದೆ. ಹಾಗೆಂದು ಇದು ಭಾರೀ ಎನ್ನುವ ಮೊತ್ತವೇನಲ್ಲ. ಆದರೂ ಒಂದು ಗೌರವಯುತವಾದ ವೇತನ ಗ್ರಾಮೀಣ ಅಂಚೆ ನೌಕರರಿಗೆ ಸಿಗಲಿದೆ ಎನ್ನುವುದು ಸಮಾಧಾನ ಕೊಡುವ ಸಂಗತಿ.ಇದಕ್ಕಾಗಿ ಮೇ 22ರಿಂದೀಚೆಗೆ ದೇಶದ ಸುಮಾರು ಮೂರು ಲಕ್ಷ ಗ್ರಾಮೀಣ ಅಂಚೆ ನೌಕರರು ಪಟ್ಟು ಬಿಡದೆ ಮುಷ್ಕರ ಹೂಡಿದ್ದರು.

Advertisement

ನಮ್ಮ ದೇಶದಲ್ಲಿ ಸರಕಾರಕ್ಕೆ ಅರ್ಥವಾಗುವುದು ಮುಷ್ಕರದ ಭಾಷೆಯೊಂದೇ ಎನ್ನುವುದು ಇದರಿಂದ ಮತ್ತೂಮ್ಮೆ ಸಾಬೀತಾಗಿದೆ. ಅರೆ ಸರಕಾರಿ ನೌಕರರು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು 16 ದಿನ ಮುಷ್ಕರ ಹೂಡುವುದು ಆರೋಗ್ಯಕರ ಬೆಳವಣಿಗೆಯಂತೂ ಅಲ್ಲ. ಆದರೆ ಕೆಲವೊಮ್ಮೆ ಪರಿಸ್ಥಿತಿಯ ಎದುರು ಅವರು ಅಸಹಾಯಕರಾಗುತ್ತಾರೆ. ಹಾಗೆಂದು ಅಂಚೆ ನೌಕರರು ಮುಷ್ಕರ ಹೂಡುತ್ತಿರುವುದು ಇದೇ ಮೊದಲೇನಲ್ಲ. 22 ವರ್ಷಗಳ ಹಿಂದೆ ಸಂಬಳ ಏರಿಕೆಗಾಗಿ 13 ದಿನ ಮುಷ್ಕರ ಹೂಡಿದ್ದರು.

ದೇಶದಲ್ಲಿ ತೀರಾ ಕಡೆಗಣಿಸಲ್ಪಟ್ಟ ಇಲಾಖೆಯೊಂದಿದ್ದರೆ ಅಂಚೆ ಇಲಾಖೆ. ಆಧುನಿಕ ಸಂವಹನ ಆವಿಷ್ಕಾರಗಳಿಂದಾಗಿ ಅಂಚೆ ಇಲಾಖೆ ಅಪ್ರಸ್ತುತವಾಗುತ್ತಿದೆ ಎನ್ನುವುದು ನಿಜ. ಆದರೆ ಜನೋಪಯೋಗಿ ಸೇವೆಯೊಂದನ್ನು ಸರಕಾರ ಈ ದೃಷ್ಟಿಯಿಂದ ನೋಡಬಾರದು. ಅದೇ ರೀತಿ ಅತೀ ಕಡಿಮೆ ವೇತನ ಪಡೆಯುವ ಸರಕಾರಿ ನೌಕರರಿದ್ದರೆ ಅವರು ಅಂಚೆ ನೌಕರರು ಎಂಬ ಅಭಿಪ್ರಾಯವಿದೆ.

ಈ ಪೈಕಿ ನಗರ ಭಾಗದ ಅಂಚೆ ನೌಕರರಿಗೆ ಕಳೆದ ವರ್ಷವೇ ವೇತನ ಏರಿಕೆ ಮಾಡಲಾಗಿತ್ತು. ಆದರೆ ಗ್ರಾಮೀಣ ಅಂಚೆ ನೌಕರರ ವೇತನ ಏರಿಕೆಯನ್ನು ತಡೆ ಹಿಡಿಯಲಾಗಿತ್ತು. ಹೀಗಾಗಿ ಗ್ರಾಮೀಣ ಅಂಚೆ ನೌಕರರು ವೇತನ ಏರಿಕೆಗಾಗಿ ಹೂಡಿದ ಮುಷ್ಕರ ನ್ಯಾಯಯುತವೇ ಆಗಿತ್ತು. ಈ ಕಾಲದಲ್ಲೂ ಅವರಿಗೆ ಗರಿಷ್ಠ ಎಂದರೆ 4115 ರೂ. ವೇತನ ನೀಡಲಾಗುತ್ತಿದೆ. 2295 ರೂ. ಕನಿಷ್ಠ ವೇತನ ಪಡೆಯುವ ಅಂಚೆ ನೌಕರರೂ ಇದ್ದಾರೆ. ಒಬ್ಬ ವ್ಯಕ್ತಿ ಇಷ್ಟು ಕಡಿಮೆ ಸಂಬಳದಲ್ಲಿ ಬದುಕಲು ಸಾಧ್ಯವೇ ಎನ್ನುವುದನ್ನಾದರೂ ಆಡಳಿತ ಮಾಡುವವರು ಚಿಂತಿಸಬೇಕು.ಇದೀಗ ಕನಿಷ್ಠ ವೇತನ 10,000 ರೂ. ಮತ್ತು ಗರಿಷ್ಠ ವೇತನ 35,480 ರೂ. ಎಂದು ನಿಗದಿಪಡಿಸಿ, ಜತೆಗೆ ಭತ್ತೆ ಹಾಗೂ ವಾರ್ಷಿಕ ಶೇ. 3 ವೇತನ ಏರಿಕೆಗೂ ಒಪ್ಪಿಕೊಳ್ಳಲಾಗಿದೆ.

ಇದೊಂದು ಯೋಗ್ಯ ನಿರ್ಧಾರ. ಈ ಮೂಲಕ ಕಮಲೇಶ್‌ ಚಂದ್ರ ಆಯೋಗದ ವರದಿಯನ್ನು ಆಂಶಿಕವಾಗಿಯಾದರೂ ಅನುಷ್ಠಾನಗೊಳಿಸಿದಂತಾಗಿದೆ. ಮಹಿಳಾ ನೌಕರರಿಗೆ ಆರು ತಿಂಗಳ ಹೆರಿಗೆ ರಜೆ,180 ದಿನಗಳ ರಜೆ ಒಟ್ಟುಗೂಡಿಸಿ ನಗದೀಕರಿಸುವಂಥ ಇನ್ನಿತರ ಕೆಲವು ಶಿಫಾರಸುಗಳನ್ನು ಸರಕಾರ ಇನ್ನಷ್ಟೇ ಪರಿಗಣಿಸಬೇಕಿದೆ. ಆದರೆ ಇಷ್ಟಕ್ಕೆ ಅಂಚೆ ನೌಕರರ ಸಮಸ್ಯೆ ಮುಗಿಯಿತು ಎಂದು ಭಾವಿಸುವಂತಿಲ್ಲ. ನಗರ, ಪಟ್ಟಣಗಳಲ್ಲಿ ಅಂಚೆಗೆ ಪರ್ಯಾಯವಾಗಿ ಬೇರೆ ಸೇವೆಗಳು ಲಭ್ಯವಿರಬಹುದು. ಆದರೆ ಗ್ರಾಮೀಣ ಭಾಗಗಳಲ್ಲಿ ಈಗಲೂ ಅಂಚೆ ಸೇವೆ ಅನಿವಾರ್ಯ ಅಂಗ. ಪತ್ರ ಬಟವಾಡೆ ಮಾತ್ರವಲ್ಲದೆ, ಮಾಸಾಶನ, ಪಿಂಚಣಿ ವಿತರಣೆ ಇತ್ಯಾದಿ ಸೇವೆಗಳೆಲ್ಲ ಅಂಚೆ ಮೂಲಕವೇ ಆಗಬೇಕು. 16 ದಿನಗಳ ಮುಷ್ಕರದ ಪರಿಣಾಮವಾಗಿ ಈ ಸೇವೆಗಳೆಲ್ಲ ಸ್ಥಗಿತಗೊಂಡು ಜನರಿಗೆ ಸಮಸ್ಯೆಯಾಗಿತ್ತು. ಆದರೆ ಇಂಥ ಪ್ರಮುಖ ಸೇವೆ ಒದಗಿಸುವ ನೌಕರರ ಪರಿಸ್ಥಿತಿ ಎಷ್ಟು ಹೀನಾಯವಾಗಿದೆ ಎಂಬ ಅಂದಾಜು ಜನರಿಗಿರಲಿಲ್ಲ.

Advertisement

ಗ್ರಾಮೀಣ ಭಾಗಗಳಲ್ಲಿ ಈಗಲೂ ಎಷ್ಟೋ ಅಂಚೆ ಕಚೇರಿಗಳು ನಡೆಯುತ್ತಿರುವುದು ಬಾಡಿಗೆ ಕಟ್ಟಡಗಳಲ್ಲಿ. ಇದನ್ನೂ ಅಂಚೆ ನೌಕರರೇ ವ್ಯವಸ್ಥೆ ಮಾಡಿಕೊಳ್ಳಬೇಕೇ ಹೊರತು ಸರಕಾರ ಯಾವುದೇ ನೆರವು ನೀಡುವ ಸ್ಥಿತಿಯಲ್ಲಿಲ್ಲ. ಎಷ್ಟೋ ಕಡೆ ಪಂಚಾಯಿತಿಯೋ ಅಥವಾ ಯಾರಾದರೂ ಖಾಸಗಿಯವರು ಉದಾರವಾಗಿ ನೀಡಿದ ಜಾಗದಲ್ಲಿ ಅಂಚೆ ನೌಕರರು ದೇಣಿಗೆ ಎತ್ತಿ ನಿರ್ಮಿಸಿದ ಕಟ್ಟಡಗಳಲ್ಲಿ ಅಂಚೆ ಕಚೇರಿಗಳು
ಕಾರ್ಯನಿರ್ವಹಿಸುವ ಪರಿಸ್ಥಿತಿಯೂ ಇದೆ. ಶೌಚಾಲಯ, ಕುಡಿಯುವ ನೀರಿನಂತಹ ಕನಿಷ್ಠ ಮೂಲಸೌಕರ್ಯಗಳು ಹೆಚ್ಚಿನ ಅಂಚೆ  ಕಚೇರಿಗಳಲ್ಲಿಲ್ಲ.

ಈಗ ತುರ್ತಾಗಿ ಆಗಬೇಕಿರುವುದು ಅಂಚೆ ಕಚೇರಿಗಳಿಗೆ ಸ್ವಂತ ಕಟ್ಟಡ ಮತ್ತು ಮೂಲಸೌಕರ್ಯ ಒದಗಿಸುವ ಕೆಲಸ. ಇದರ ಜತೆಗೆ ಅಂಚೆ ಕಚೇರಿಗಳನ್ನು ಇನ್ನಿತರ ಕಾರ್ಯಕ್ರಮಗಳಿಗೆ ಬಳಸಿಕೊಂಡು ಜನಸ್ನೇಹಿಯಾಗಿಸುವುದು ಸೂಕ್ತ. ಇದಕ್ಕೂ ಮೊದಲು ಇದೀಗ ನೀಡಿರುವ ವೇತನ ಏರಿಕೆಯ ಭರವಸೆಯನ್ನು ವಿಳಂಬವಿಲ್ಲದೆ ಜಾರಿಗೊಳಿಸಿ ಅಂಚೆ ನೌಕರರ ಬಾಳಿನಲ್ಲಿ ಅಚ್ಛೇದಿನ ಬರುವಂತೆ ಮಾಡಬೇಕು. 

Advertisement

Udayavani is now on Telegram. Click here to join our channel and stay updated with the latest news.

Next