ಬೆಂಗಳೂರು: ಇದುವರೆಗೂ ಪತ್ರಗಳ ಜತೆಗೆ ಮಾವಿನ ಹಣ್ಣುಗಳನ್ನು ಹೊತ್ತು ತರುತ್ತಿದ್ದ ನಿಮ್ಮ ಅಂಚೆ ಅಣ್ಣ ಮುಂದಿನ ದಿನಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ನೀವು ಬಯಸಿದ ತಾಜಾ ಹಣ್ಣುಗಳನ್ನು ತಂದು ಕೊಡಲಿದ್ದಾನೆ.
ಈಗಾಗಲೇ ಮಾವು ಬೆಳೆಗಾರರಿಗೆ ಅಂಚೆ ಮೂಲಕ ಮಾರುಕಟ್ಟೆ ಸೃಷ್ಟಿಸಿದ್ದ ರಾಜ್ಯ ಮಾವು ಅಭಿವೃದ್ಧಿ ಮಂಡಳಿ ಮತ್ತು ಮಾರುಕಟ್ಟೆ ನಿಗಮ, ಸಾರ್ವಜನಿಕರ ಮೆಚ್ಚುಗೆ ಗಳಿಸಿದೆ. ಇದೀಗ ವಿವಿಧ ಹಣ್ಣು ಬೆಳೆಗಾರರಿಗೆ ಅಂಚೆ ಮಾರುಕಟ್ಟೆ ಪ್ರಯೋಜನ ನೀಡಲು ಮುಂದಾಗಿದೆ.
ಸದ್ಯದಲ್ಲೇ ಮಾವಿನ ಹಣ್ಣಿನ ಸೀಜನ್ ಮುಗಿಯಲಿದ್ದು, ಇದಾದ ಬಳಿಕ ವಿವಿಧ ಹಣ್ಣುಗಳನ್ನು ಅಂಚೆ ಮೂಲಕ ಮಾರಾಟ ಮಾಡುವ ಪ್ರಕ್ರಿಯೆ ನಡೆಯಲಿದೆ. ಆಗಸ್ಟ್‌ನಲ್ಲಿ ಬೆಂಗಳೂರು, ತುಮಕೂರು, ಮೈಸೂರು, ಬಳ್ಳಾರಿ ಮತ್ತು ಹುಬ್ಬಳ್ಳಿ-ಧಾರವಾಡಗಳಲ್ಲಿ ಪ್ರಯೋಗಿಕವಾಗಿ ಮಾರಾಟ ಆರಂಭವಾಗಲಿದೆ. ಇದು ಯಶಸ್ವಿಯಾದರೆ ಮುಂದಿನ ದಿಗಳಲ್ಲಿ ರಾಜ್ಯಾದ್ಯಂತ ವಿಸ್ತರಣೆ ಮಾಡುವ ಆಲೋಚನೆಯಿದೆ.
ಮಂಡಳಿ ಸಭೆಯಲ್ಲಿ ಚರ್ಚೆ: ಇತ್ತೀಚೆಗೆ ನಡೆದ ರಾಜ್ಯ ಮಾವು ಅಭಿವೃದ್ಧಿ ಮಂಡಳಿ ಮತ್ತು ಮಾರುಕಟ್ಟೆ ನಿಗಮದ ಆಡಳಿತ ಮಂಡಳಿ ಸಭೆಯಲ್ಲಿ ಅಂಚೆ ಮೂಲಕ ಹಣ್ಣುಗಳನ್ನು ಗ್ರಾಹಕರಿಗೆ ತಲುಪಿಸುವ ಕುರಿತಂತೆ ಚರ್ಚೆ ನಡೆದಿದೆ. ಯಾವ ಹಣ್ಣುಗಳನ್ನು ಮಾರಾಟ ಮಾಡಬಹುದು ಎಂಬ ವಿಷಯ ಕೂಡ ಪ್ರಸ್ತಾಪವಾಗಿದೆ. ಈಗಾಗಲೇ ಕೆಲವು ಹಣ್ಣುಗಳ ಪಟ್ಟಿ ಮಾಡಲಾಗಿದ್ದು, ಅಂಜೂರ, ಸೇಬು, ಲಿಚಿ, ಪೇರಲೆ ಹಣ್ಣುಗಳು ಈ ಪಟ್ಟಿಯಲ್ಲಿವೆ. ಮತ್ತಷ್ಟು ಹಣ್ಣುಗಳು ಪಟ್ಟಿ ಸೇರಲಿದ್ದು, ಸದ್ಯದಲ್ಲೇ ನಿಗಮವು ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ಪ್ರಕಟಿಸಲಿದೆ.
Advertisement
ಅಂಚೆಯಣ್ಣನ ಮುಲಕ ಹಣ್ಣು ತರಿಸಿಕೊಳ್ಳಲು ಬಯಸುವವರು ‘ರಾಜ್ಯ ಮಾವು ಅಭಿವೃದ್ಧಿ ಮಂಡಳಿ ಮತ್ತು ಮಾರುಕಟ್ಟೆ ನಿಗಮ’ದ ವೆಬ್‌ಸೈಟ್‌ಗೆ ಭೇಟಿ ನೀಡಿ, ತಮಗೆ ಬೇಕಾದ ಹಣ್ಣುಗಳನ್ನು ಆರ್ಡರ್ ಮಾಡಿದರೆ ಒಂದೆರಡು ದಿನಗಳಲ್ಲಿ ತಾಜಾ ಹಣ್ಣುಗಳೊಂದಿಗೆ ಪೋಸ್ಟ್ ಮ್ಯಾನ್ ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ.
Related Articles
Advertisement
ಪಾರ್ಸೆಲ್ ಎಷ್ಟು ಕೆ.ಜಿ. ಇರಬೇಕು?: ಈ ಹಿಂದೆ ಕನಿಷ್ಠ ಮೂರು ಕೆ.ಜಿ ಹಾಗೂ ಮೇಲ್ಪಟ್ಟ ತೂಕದ ಆರ್ಡರ್‌ಗಳನ್ನು ಮಾತ್ರ ನಿಗಮ ಸ್ವೀಕರಿಸಿ ಅಂಚೆ ಮೂಲಕ ಗ್ರಾಹಕರಿಗೆ ತಲುಪಿಸುತ್ತಿತ್ತು. ಈಗ ಅಂಜೂರ, ಪೇರಲೆ, ಒಣ ದ್ರಾಕ್ಷಿ ಸೇರಿದಂತೆ ಇನ್ನಿತರ ಹಣ್ಣುಗಳನ್ನು ಕನಿಷ್ಠ ಥವಾ ಗರಿಷ್ಠ ಎಷ್ಟು ಕೆ.ಜಿ ಕೊಳ್ಳಬೇಕು ಎಂಬ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಈ ಕುರಿತು ಸದ್ಯದಲ್ಲೇ ಒಂದು ತೀರ್ಮಾನಕ್ಕೆ ಬರಲಾಗುವುದು ಎಂದು ನಿಗಮದ ಪ್ರಧಾನ ವ್ಯವಸ್ಥಾಪಕರಾದ ಎಲ್.ಲಲಿತಾ ಮಾಹಿತಿ ನೀಡಿದ್ದಾರೆ.
‘ಉದಯವಾಣಿ’ ಜತೆ ಮಾತನಾಡಿದ ಲಲಿತಾ ಅವರು, ಈಗಾಗಲೇ ಅಂಚೆ ಮೂಲಕ ಗ್ರಾಹಕರಿಗೆ ಮಾವಿನ ಹಣ್ಣುಗಳನ್ನು ಪೂರೈಸಲಾಗಿದೆ. ಆ ಯಶಸ್ಸಿನ ಹಿನ್ನೆಲೆಯಲ್ಲಿ ವಿವಿಧ ಹಣ್ಣುಗಳ ಮಾರಾಟಕ್ಕೆ ಆಲೋಚನೆ ನಡೆಸಲಾಗಿದೆ. ಈ ಬಗ್ಗೆ ಹಣ್ಣು ಬೆಳೆಗಾರರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಬೆಲ್ಲ, ಒಣ ದ್ರಾಕ್ಷಿ ಮಾರಾಟ:
ಬೆಲ್ಲ, ಒಣ ದಾಕ್ಷಿ ಸೇರಿದಂತೆ ಇನ್ನಿತರ ಒಣ ಹಣ್ಣಿನ ಉತ್ಪನ್ನಗಳನ್ನು ಅಂಚೆ ಪಾರ್ಸಲ್ ಸೇವೆ ಮೂಲಕ ಗ್ರಾಹಕರಿಗೆ ತಲುಪಿಸುವ ಚಿಂತನೆ ನಡೆದಿದೆ. ಅಂಚೆ ಅಧಿಕಾರಿಗಳೊಂದಿಗೂ ಮಾತುಕತೆ ನಡೆಸಿದ್ದು, ಅವರು ಕೂಡ ಒಲವು ತೋರಿದ್ದಾರೆ ಎಂದು ನಿಗಮದ ಹಿರಿಯ ಅಧಿಕಾರಿ ಜಯರಾಂ ಹೇಳಿದ್ದಾರೆ.
● ದೇವೇಶ ಸೂರಗುಪ್ಪ