Advertisement

ಅಂಚೆ ನೌಕರರ ಮುಷ್ಕರಕ್ಕೆ ಹತ್ತು ದಿನ​​​​​​​

06:00 AM May 31, 2018 | Team Udayavani |

ಬೆಂಗಳೂರು: ವೇತನ ತಾರತಮ್ಯ ವಿರೋಧಿಸಿ ಹಾಗೂ ಕಮಲೇಶ್‌ಚಂದ್ರ ವರದಿ ಜಾರಿಗೊಳಿಸಲು ಆಗ್ರಹಿಸಿ ದೇಶಾದ್ಯಂತ ಗ್ರಾಮೀಣ ಅಂಚೆ ನೌಕರರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಇದರಿಂದ ಗ್ರಾಮಾಂತರ ಭಾಗದಲ್ಲಿ ಅಂಚೆ ಬಟವಾಡೆಯಲ್ಲಿ ವ್ಯತ್ಯಯವಾಗಿರುವ ಪ್ರಕರಣಗಳು ವರದಿಯಾಗಿದೆ.

Advertisement

ಈ ಮಧ್ಯೆ ಈಗಾಗಲೇ ಕರ್ನಾಟಕದ ಬೀದರ್‌ ಮತ್ತು ಬಳ್ಳಾರಿಯಲ್ಲಿ ತಲಾ ಒಬ್ಬರು ಸೇರಿದಂತೆ ದೇಶಾದ್ಯಂತ ನಾಲ್ಕು ನೌಕರರು ಪ್ರತಿಭಟನೆ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಬೆಂಗಳೂರಿನ ವಿವಿಧ ಅಂಚೆ ಕಚೇರಿ ಮುಂದೆ ಪ್ರತಿನಿತ್ಯ ಪ್ರತಿಭಟನೆ ನಡೆಯುತ್ತಿದ್ದು, ಬುಧವಾರ ನಗರದ ಬಸವನಗುಡಿ ಮುಖ್ಯ ಅಂಚೆ ಕಚೇರಿ ಬಳಿ ಮುಷ್ಕರನಿರತರು ಧರಣಿ ನಡೆಸಿದರು. ನೌಕರಿ ಕಾಯಂ, ಕನಿಷ್ಠ ವೇತನ ಪಡೆಯುತ್ತಿರುವ ನೌಕರರ ವೇತನ ಹೆಚ್ಚಳ, ಹಿರಿಯ ನೌಕರರ ಸಂಬಳ ಹಾಗೂ ಭತ್ಯೆ ಹೆಚ್ಚಳ, ಕನಿಷ್ಠ ಮಾಸಿಕ ಸಂಬಳ ಏರಿಕೆ, ವಾರ್ಷಿಕ ಶೇ. 3ರಷ್ಟು ವೇತನ ಹೆಚ್ಚಳ, ವಿಮೆ ಸೌಲಭ್ಯದಂತಹ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಗ್ರಾಮೀಣ ಅಂಚೆ ನೌಕರರ ಸಂಘದ ರಾಜ್ಯಕಾರ್ಯದರ್ಶಿ ಕೆ.ಎಸ್‌.ರುದ್ರೇಶ್‌, ಗ್ರಾಮೀಣ ಭಾಗದ ಅಂಚೆ ನೌಕರರ ಸ್ಥಿತಿಗತಿ ಅಧ್ಯಯನಕ್ಕೆಂದು ರಚಿಸಿದ್ದ ಕಮಲೇಶ್‌ಚಂದ್ರ ಆಯೋಗವು ಈಗಾಗಲೇ ವರದಿ ಸಲ್ಲಿಸಿ 18 ತಿಂಗಳಾಗಿದ್ದರೂ ಕೇಂದ್ರ ಸರ್ಕಾರ ವರದಿ ಜಾರಿ ಮಾಡಲು ಹಿಂದೇಟು ಹಾಕುತ್ತಿದೆ. ಹೀಗಾಗಿ ನೇರವಾಗಿ ಕೇಂದ್ರ ಸರ್ಕಾರದ ಗಮನ ಸೆಳೆಯಲೆಂದು ಮೇ 22ರಿಂದ ಅಂಚೆ ನೌಕರರು ಆಯಾ ಜಿಲ್ಲಾ ಮುಖ್ಯ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು.

ಭಾರತದಾದ್ಯಂತ ಸುಮಾರು 2.85 ಲಕ್ಷ ಗ್ರಾಮೀಣ ಅಂಚೆ ಸಿಬ್ಬಂದಿಯಿದ್ದು, ವೇತನ ತಾರತಮ್ಯ ವಿರೋಧಿಸಿ ಲಕ್ಷಕ್ಕೂ ಅಧಿಕ ಸಂಖ್ಯೆಯ ನೌಕರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇನ್ನು ರಾಜ್ಯ ನೌಕರರ ಸಂಘದ ವತಿಯಿಂದ ಮೇ 28ರಂದು ರಾಜಭವನಕ್ಕೆ 4 ಸಾವಿರ ನೌಕರರು ತೆರಳಿ ಮನವಿ ಸಲ್ಲಿಸಿದ್ದೇವೆ. ರಾಜ್ಯಪಾಲರು ಭೇಟಿಯಾಗದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಮನವಿ ಸಲ್ಲಿಸಿದ್ದೇವೆ. ಅಲ್ಲದೆ, ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ ಹಾಗೂ ಅನಂತಕುಮಾರ್‌ ಅವರಿಗೂ ಮನವಿ ಸಲ್ಲಿಸಿದ್ದೇವೆ ಎಂದರು.

Advertisement

ಗ್ರಾಮೀಣ ಅಂಚೆ ನೌಕರರ ಪ್ರತಿಭಟನೆಯಲ್ಲಿ ಮೇ 22ರಂದು ಬೀದರ್‌ ಜಿಲ್ಲೆಯ ಔರಾದ್‌ ತಾಲೂಕಿನ ಬೋರ್ಗಿ ಗ್ರಾಮದ ಅಂಚೆ ಕಚೇರಿ ನೌಕರ ಮೆಹತಾಬ್‌ ಅಲಿ (52) ಹಾಗೂ ಮೇ 30 ರಂದು ಬಳ್ಳಾರಿ ಸಂಜಯ್‌ನಗರ ಅಂಚೆ ಕಚೇರಿ ನೌಕರ ನಾಗೇಂದ್ರ(55) ಎಂಬುವವರು ಪ್ರತಿಭಟನಾ ಸ್ಥಳದಲ್ಲಿಯೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

ಜೂ. 4ರಿಂದ ಅಂಚೆ ಸಂಪೂರ್ಣ ಬಂದ್‌
ಈಗಾಗಲೇ ಗ್ರಾಮೀಣ ನೌಕರರು ಕೆಲಸ ಬಿಟ್ಟು ಬಿದಿಗಿಳಿದು ಪ್ರತಿಭಟಿಸುತ್ತಿದ್ದು, ಇವರಿಗೆ ಬೆಂಬಲ ಸೂಚಿಸಿ ಹಾಗೂ 7ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ನಗರ ಭಾಗದ ಎಲ್ಲಾ ನೌಕರರು ಪ್ರತಿಭಟನೆ ಭಾಗವಹಿಸಲು ನಿರ್ಧರಿಸಿದ್ದಾರೆ. ಹಾಗಾಗಿ ಜೂ. 4ರಿಂದ ದೇಶಾದ್ಯಂತ ಅಂಚೆ ಸೌಲಭ್ಯದಲ್ಲಿ ಪೂರ್ಣ ವ್ಯತ್ಯಯಗಳಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next