Advertisement

ಪೋಸ್ಟ್‌ ಕೋವಿಡ್‌-19 ಅನಾರೋಗ್ಯ ಹಾವಳಿ !

10:00 AM Oct 14, 2020 | mahesh |

ಬೆಂಗಳೂರು: ಕೋವಿಡ್‌ ಆಯ್ತು, ಈಗ ಅದು ಸೃಷ್ಟಿಸುತ್ತಿರುವ “ಕೋವಿಡ್‌ ಅನಂತರದ ಅನಾರೋಗ್ಯ’ದ ಹಾವಳಿ ಶುರುವಾಗಿದೆ. ಸದ್ಯ ರಾಜ್ಯದಲ್ಲಿ ಗುಣಮುಖರ ಪೈಕಿ ಮೂವರಲ್ಲಿ ಒಬ್ಬರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

Advertisement

ರಾಜ್ಯದಲ್ಲಿ ಮಂಗಳವಾರ ಗುಣಮುಖರ ಸಂಖ್ಯೆ ಆರು ಲಕ್ಷಕ್ಕೆ ತಲುಪಿದೆಯಾದರೂ ಸೋಂಕಿನಿಂದ ಗುಣಮುಖರಾದ ಶೇ. 33ರಷ್ಟು ಮಂದಿಯಲ್ಲಿ ಪ್ರಮುಖವಾಗಿ ಶ್ವಾಸಕೋಶ ಸೋಂಕು, ರಕ್ತ ಹೆಪ್ಪು ಗಟ್ಟುವಿಕೆ ಹಾಗೂ ತೀವ್ರ ಆಯಾಸದಂತಹ ಮೂರು ಸಮಸ್ಯೆಗಳು ಕಾಣಿಸಿ ಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಕಾರಣಕ್ಕಾಗಿ ಈ ರೀತಿಯ ಆರೋಗ್ಯ ಸಮಸ್ಯೆ ಹೊಂದಿ ರುವವರಿಗಾಗಿಯೇ ಪೋಸ್ಟ್‌ ಕೋವಿಡ್‌ ಕ್ಲಿನಿಕ್‌ಗಳನ್ನು ತೆರೆಯಲು ಚಿಂತನೆ ಮಾಡಲಾಗಿದೆ.

ಆರಂಭದ ದಿನಗಳಲ್ಲಿ ಕೊರೊನಾ ಕೇವಲ ಫ್ಲ್ಯೂ ಮಾದರಿಯ ಸೋಂಕು ಎಂದು ಭಾವಿಸಲಾಗಿತ್ತು. ಆದರೆ, ಕಳೆದ ಎಂಟು ತಿಂಗಳ ಅನುಭವ ಮತ್ತು ಸಂಶೋಧನೆಗಳ ಅನಂತರ ಸೋಂಕಿನ ಹೊಸ ಆಯಾಮಗಳು ಬೆಳಕಿಗೆ ಬರುತ್ತಿವೆ. ಸೋಂಕಿನಿಂದ ಗುಣಮುಖರಾದ ಬಳಿಕ ವ್ಯಕ್ತಿಯಲ್ಲಿ
ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಯು ಅತ್ಯಂತ ಪ್ರಮುಖವಾಗಿದೆ.

ವೈರಸ್‌ ಮನುಷ್ಯನ ದೇಹ ಸೇರಿದ ಬಳಿಕ ಕೇವಲ ಜ್ವರ, ಶೀತ, ಉಸಿರಾಟ ಸಮಸ್ಯೆಯನ್ನು ಮಾತ್ರ ಉಂಟು ಮಾಡುವುದಿಲ್ಲ. ವೈರಸ್‌ ಪ್ರಮಾಣ ಹೆಚ್ಚಿದ್ದಾಗ ಶ್ವಾಸಕೋಶ, ಹೃದಯ, ಕಿಡ್ನಿ ಸೇರಿದಂತೆ ಕೆಲ ಅಂಗಾಂಗಗಳ ಚಟುವಟಿಕೆಗಳಿಗೂ ತೊಂದರೆ ಮಾಡುತ್ತದೆ. ರಕ್ತದ ಹೆಪ್ಪುಗಟ್ಟುವಿಕೆ ಆರಂಭವಾಗುತ್ತದೆ. ರೋಗ ನಿರೋಧಕ ಅಂಶಗಳನ್ನು ನಾಶ ಮಾಡುತ್ತದೆ. ಇದರಿಂದಲೇ ಸೋಂಕಿತರು ಗುಣಮುಖರಾದ ಬಳಿಕ ಹೃದ್ರೋಗ, ಉಸಿರಾಟ ಸಮಸ್ಯೆಗಳು ಕಾಣಿಸಿಕೊಳ್ಳತೊಡಗಿವೆ ಎಂದು ಆರೋಗ್ಯ ತಜ್ಞ ಡಾ| ಸುದರ್ಶನ್‌ ಬಲ್ಲಾಳ್‌ ಹೇಳುತ್ತಾರೆ.

ಪರೀಕ್ಷೆಗಳಿಂದ ಖಚಿತ
ಸೋಂಕಿನ ಲಕ್ಷಣ ಇದ್ದವರಲ್ಲಿ ಮಾತ್ರ ಈ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿಯೇ, ಲಕ್ಷಣಗಳೊಂದಿಗೆ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುವವರಿಗೆ ಐದು ದಿನದ ಬಳಿಕ ಡಿ ಡೈಮರ್‌, ಸೇರಮ್‌ ಫೆರಿಟಿನ್‌, ಇಸಿಜಿ, ಸಿಟಿ ಸ್ಕ್ಯಾನ್‌ ಸೇರಿದಂತೆ 14 ವಿವಿಧ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಬಳಿಕ ವ್ಯತ್ಯಾಸ ಕಂಡುಬಂದರೆ ಆ ಪ್ರಕಾರ ಚಿಕಿತ್ಸೆ ಮುಂದುವರಿಸ ಲಾಗುತ್ತದೆ. ಇನ್ನು ಗುಣಮುಖರಾಗಿ ಮನೆಗೆ ತೆರಳಿದ ಬಳಿಕ ಏನಾದರೂ ಸಮಸ್ಯೆ ಕಂಡು ಬಂದರೆ ಈ ಪರೀಕ್ಷೆಗಳನ್ನು ಸೂಚಿಸಲಾಗುತ್ತಿದೆ.

Advertisement

ನಿರ್ಲಕ್ಷ್ಯ ಬೇಡ
ಕೊರೊನಾ ಸೋಂಕು ಬಂದು ಹೋಗಿದೆ, ಇಮ್ಯುನಿಟಿ ಪವರ್‌ ಹೆಚ್ಚಾಗಿದೆ. ಇನ್ನೆರಡು ತಿಂಗಳು ನನಗೆ ಯಾವ ಆರೋಗ್ಯ ಸಮಸ್ಯೆ ಇರುವುದಿಲ್ಲ ಎಂದು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಬೇಡ. ಯಾಕೆಂದರೆ ಗುಣಮುಖರಾದ ಅರ್ಧದಷ್ಟು ಮಂದಿಗೆ ಆ್ಯಂಟಿ ಬಾಡಿಸ್‌ ಉತ್ಪತ್ತಿಯಾಗದ ಕಾರಣ ಇಮ್ಯುನಿಟಿ ಹೆಚ್ಚಾಗಿರುವುದಿಲ್ಲ. ಈ ರೀತಿಯ ಮನಃಸ್ಥಿತಿಯಿಂದ ಹೊರಬಂದು ಎರಡರಿಂದ ಮೂರು ತಿಂಗಳು ಮುಂಜಾಗ್ರತೆ ವಹಿಸುವಂತೆ ಆರೋಗ್ಯ ತಜ್ಞರು ಸೂಚಿಸಿದ್ದಾರೆ.

ಗುಣಮುಖರಾದ ಶೇ.30ಕ್ಕೂ ಹೆಚ್ಚು ಮಂದಿಯಲ್ಲಿ ಪೋಸ್ಟ್‌ ಕೋವಿಡ್‌ ಇಲ್‌ನೆಸ್‌ ಕಾಣಿಸಿಕೊಳ್ಳುತ್ತಿವೆ. ಸಮಸ್ಯೆ ಕಾಣಿಸಿಕೊಂಡರೇ ಪರೀಕ್ಷೆಗೊಳಗಾಗಿ ಚಿಕಿತ್ಸೆ ಪಡೆಯಬೇಕು. ಗುಣಮುಖರಾದವರು ಎರಡರಿಂದ ಮೂರು ತಿಂಗಳು ಸೂಕ್ತ ಆಹಾರ ಕ್ರಮಗಳೊಂದಿಗೆ ಮುಂಜಾಗ್ರತೆ ವಹಿಸಬೇಕು.
– ಡಾ| ಸುದರ್ಶನ್‌ ಬಲ್ಲಾಳ್‌, ಅಧ್ಯಕ್ಷರು ಮಣಿಪಾಲ್‌ ಆಸ್ಪತ್ರೆ.

 

ವರದಿ- ಜಯಪ್ರಕಾಶ್ ಬಿರಾದಾರ್

Advertisement

Udayavani is now on Telegram. Click here to join our channel and stay updated with the latest news.

Next