Advertisement

ಬೋಳಾರದ ಲೀವೆಲ್‌ ಪರಿಶೀಲನೆಗೆ ಪುರಾತತ್ವ ಇಲಾಖೆ ತಂಡ ಆಗಮನ ಸಾಧ್ಯತೆ

02:19 AM Feb 17, 2020 | Team Udayavani |

ಮಹಾನಗರ: ಹಲವಾರು ದಶಕಗಳ ಹಿಂದೆ ಮುಚ್ಚಿದ್ದ ಶತಮಾನಗಳ ಇತಿಹಾಸವಿರುವ ಬಾವಿಯೊಂದು ಅಕ್ಟೋಬರ್‌ನಲ್ಲಿ ದಿಢೀರ್‌ ಆಗಿ ಪ್ರತ್ಯಕ್ಷಗೊಂಡು ಸುದ್ದಿಯಾಗಿದ್ದ ನಗರದ ಬೋಳಾರ ಲೀವೆಲ್‌ನ ಪರಿಶೀಲನೆಗಾಗಿ ಪುರಾತತ್ವ ಇಲಾಖೆಯ ತಜ್ಞರ ತಂಡವೊಂದು ಮಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ.

Advertisement

ಬೋಳಾರದಲ್ಲಿ ಪತ್ತೆಯಾದ ಬ್ರಿಟೀಷರ ಕಾಲದ ಬಾವಿಯ ಕುರಿತು ಉನ್ನತ ಮಟ್ಟದ ಪರಿಶೀಲನೆಗೆ ಕ್ರಮ ಕೈಗೊಳ್ಳುವಂತೆ ಮಂಗಳೂರು ಪಾಲಿಕೆ ಆಯುಕ್ತ ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ ಪುರಾತತ್ವ ಇಲಾಖೆಗೆ ಪತ್ರ ಬರೆದಿದ್ದರು. ಜತೆಗೆ, ಮಂಗಳೂರಿನ ಶ್ರೀಮಂತಿ ಬಾಯಿ ಮೆಮೋರಿಯಲ್‌ ಸರಕಾರಿ ಮ್ಯೂಸಿಯಂನ ಮೇಲ್ವಿಚಾರಕರು ಕೂಡ ವಿವರವಾದ ವರದಿಯನ್ನು ಪುರಾತತ್ವ ಇಲಾಖೆಗೆ ಸಲ್ಲಿಸಿದ್ದಾರೆ. ಇದರ ಆಧಾರದ ಮೇಲೆ ಇದೀಗ ಪುರಾತತ್ವ ಇಲಾಖೆಯ ಮೈಸೂರಿನ ತಜ್ಞರು ಮಂಗಳೂರಿಗೆ ಆಗಮಿಸಲಿದ್ದಾರೆ. ಪ್ರಾರಂಭದಲ್ಲಿ ಪುರಾತತ್ವ ಇಲಾಖೆಯ ಎಂಜಿನಿಯರ್‌ಗಳ ತಂಡ ಆಗಮಿಸಿ ಪರಿಶೀಲನೆ ನಡೆಸಲಿದೆ ಎಂದು ತಿಳಿದುಬಂದಿದೆ.

ಬಾವಿ ಬ್ರಿಟಿಷರ ಕಾಲಕ್ಕೆ ಸೇರಿದ್ದಾಗಿದೆ. ಆದರೆ ಈ ಬಗ್ಗೆ ಯಾವುದೇ ಲಿಖೀತ ಸಾಕ್ಷಿಗಳಿಲ್ಲ. ಈ ಬಗ್ಗೆ ಪೂರ್ಣ ಅಧ್ಯಯನ ಅಗತ್ಯವಿದೆ ಎಂದು ಸರಕಾರಿ ಮ್ಯೂಸಿಯಂನ ಮೇಲ್ವಿಚಾರಕರು ಸಿದ್ಧಪಡಿಸಿದ ವರದಿಯಲ್ಲಿ ಉಲ್ಲೇಖೀಸಿದ್ದಾರೆ ಎಂದು ತಿಳಿದುಬಂದಿದೆ.

ಬ್ರಿಟಿಷರ ಆಡಳಿತ ಸಮಯದಲ್ಲಿ ಬೋಳಾರ ಜಂಕ್ಷನ್‌ನಲ್ಲಿ ಬಾವಿ ನಿರ್ಮಿಸಲಾಗಿತ್ತು. ಬ್ರಿಟಿಷ್‌ ಅಧಿಕಾರಿ ಲೀ ಅವರು ಇದನ್ನು ನಿರ್ಮಿಸಿದ್ದರು ಎನ್ನಲಾಗುತ್ತಿದೆ. ಇದಕ್ಕಾಗಿ ಈ ಪ್ರದೇಶಕ್ಕೆ ಲೀ ವೆಲ್‌ ಎಂಬ ಹೆಸರು ಬಂದಿತ್ತು. ಆದರೆ ಹಲವು ವರ್ಷಗಳ ಅನಂತರ ಈ ಬಾವಿಯನ್ನು ಕಸ ಹಾಗೂ ಮಣ್ಣು ಹಾಕಿ ಮುಚ್ಚಲಾಗಿತ್ತು. ಕಾಲಾನಂತರ ಇದೇ ಜಾಗದಲ್ಲಿ ಡಾಮರು ರಸ್ತೆ ನಿರ್ಮಿಸಲಾಗಿತ್ತು. ಹಾಗೂ ಪಕ್ಕದಲ್ಲಿ ಬಸ್‌ನಿಲ್ದಾಣವನ್ನು ಹಲವು ವರ್ಷದ ಹಿಂದೆ ಮಂಗಳೂರು ಪಾಲಿಕೆ ನಿರ್ಮಿಸಿತ್ತು ಎಂದು ಸ್ಥಳೀಯರು ನೆನಪು ಮಾಡುತ್ತಾರೆ.

ಆಗಿದ್ದೇನು?
ಬೋಳಾರ ಮಾರಿಗುಡಿ ದೇವಸ್ಥಾನದ ಸಮೀಪದ ಬೋಳಾರ ಜಂಕ್ಷನ್‌ನಲ್ಲಿ ಅಕ್ಟೋಬರ್‌ 23ರಂದು ರಸ್ತೆ ಕಾಂಕ್ರೀಟ್‌ ಕಾಮಗಾರಿ ನಡೆಸುತ್ತಿದ್ದ ಸಂದರ್ಭ ದಿಢೀರಾಗಿ ಬಾವಿಯೊಂದು ಪ್ರತ್ಯಕ್ಷಗೊಂಡಿತ್ತು. ಬಾವಿಯಿರುವ ಜಾಗದ ಒಂದು ಪಾರ್ಶ್ವದ ಕೊಂಚ ಭೂಮಿ ಒಳಕ್ಕೆ ಕುಸಿದ ಪರಿಣಾಮ ದಶಕಗಳ ಹಿಂದೆ ಇಲ್ಲಿ ಇತ್ತು ಎನ್ನಲಾದ ಬಾವಿಯ ಬಗ್ಗೆ ಎಲ್ಲೆಡೆ ಮಾತು ಕೇಳಿಬಂದು ಕುತೂಹಲಕ್ಕೆ ಕಾರಣವಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next