Advertisement
“ಮಣ್ಣಿನ ಹಣತೆಯ ಸಾಲು ಸಾಲು ಬೆಳಗಲಿ ಮನೆಯಂಗಳದಲ್ಲಿ, ಮನದ ತಿಮಿರವ ಸರಿಸುತ್ತಿರಲಿ, ಹಚ್ಚುತ, ಹಚ್ಚುತ್ತ ಬೆಳಕಿನ ದೀವಿಗೆ, ಪ್ರೀತಿಯ ಸೋನೆಯ ಸುರಿಸುತ್ತಾ, ಜಗಕೆ ಆತ್ಮವ ಬೆರೆಸುತ್ತಾ, ಪರಮಾತ್ಮನೆಡೆಗೆ….’ ದೀಪಾವಳಿ ಸಂದರ್ಭದಲ್ಲಿ ಆತ್ಮೀಯರೊಬ್ಬರು ಕಳುಹಿಸಿದ ಅರ್ಥಪೂರ್ಣ ಸಂದೇಶ. ತುಂಬಾ ಅಂತರಾರ್ಥ ಒಳಗೊಂಡ ಸಾಲುಗಳಿವು. ಹಣತೆಗಳನ್ನು ಕೇವಲ ಅಲಂಕಾರಕ್ಕೆ ಹಚ್ಚಿದರೆ ಸಾಲದು. ಅದು ನಮ್ಮ ಮನಸ್ಸಿನ ಕತ್ತಲೆಯನ್ನು ಹೋಗಲಾಡಿಸಬೇಕು. ಜತೆಗೆ ಲೋಕದ ಸಮಸ್ತರಿಗೆ ನಮ್ಮ ಹೃದಯವು ಶುಭವನ್ನು ಹಾರೈಸುತ್ತಾ, ಪ್ರೀತಿಯ ಮಳೆ ಸುರಿಸಬೇಕು. ನಮ್ಮ ಆತ್ಮ ಪರಮಾತ್ಮನಲ್ಲಿ ಧ್ಯಾನಾಸಕ್ತವಾಗಿರಬೇಕು. ಹೀಗೆ ನಾವು ಹಚ್ಚುವ ದೀಪಗಳು ಈ ಮೂರು ಸದುದ್ದೇಶದಿಂದ ಕೂಡಿರಬೇಕು. ಈ ರೀತಿ ನಾವು ಹಚ್ಚುವ ಹಣತೆ ಸಾರ್ಥಕವಾಗಬೇಕು. ಇದು ಬೆಳಕಿನ ಹಬ್ಬ ದೀಪಾವಳಿಗೆ ಮಾತ್ರ ಸೀಮಿತವಲ್ಲ. ನಾವು ನಿತ್ಯವೂ ಮನೆಯಲ್ಲಿ ದೀಪಗಳನ್ನು ಬೆಳಗುತ್ತೇವೆ. ದೀಪಗಳು ಮಾತ್ರವಲ್ಲ ಯಾವುದೇ ವಿಷಯವನ್ನು ತೋರಿಕೆಗಾಗಿ ಮಾಡಬಾರದು ಎನ್ನುವ ಗೂಡಾರ್ಥವೂ ಇದರಲ್ಲಿದೆ – ರಮೇಶ್ ರಾವ್, ಕೈಕಂಬ
Related Articles
Advertisement
“ಬದುಕಿನಲ್ಲಿ ನಿರೀಕ್ಷೆಗಳು ಸುಳ್ಳಾದಾಗ ಮನುಷ್ಯ ತಾನಾಗಿಯೇ ಬದಲಾಗುತ್ತಾನೆ. ಅದು ಅವನ ಗಟ್ಟಿತನವೂ ಅಲ್ಲ. ಅತಿಯಾದ ಅಹಂಕಾರವೂ ಅಲ್ಲ. ನೊಂದ ಮನಸ್ಸಿನ ನಿರ್ಧಾರವಷ್ಟೇ. ‘ಹೀಗೊಂದು ಸಂದೇಶ ವಾಟ್ಸ್‌ಆ್ಯಪ್ ಗುಂಪಿನಲ್ಲಿ ಸೋದರಿಯೊಬ್ಬರಿಂದ ರವಾನೆಯಾಯಿತು. ಅರ್ಥಪೂರ್ಣ ಸಂದೇಶ. ಏನೂ ಗೊತ್ತಿಲ್ಲದ ವಯಸ್ಸಲ್ಲಿ ನಾವೆಷ್ಟು ಆನಂದದಿಂದ ಇದ್ದೆವು. ಬೆಳೆಯುತ್ತಾ ಹೋದಂತೆ ಮನದ ತುಂಬಾ ನಿರೀಕ್ಷೆಗಳನ್ನು ತುಂಬಿಕೊಂಡು ಕಲ್ಪನಾ ಲೋಕದಲ್ಲಿ ತೇಲುತ್ತಿರುತ್ತೇವೆ. ಜವಾಬ್ದಾರಿಗಳು ಒಂದೊಂದಾಗಿ ಹೆಗಲೇರಿದಾಗ ನಮ್ಮ ಯೋಗ್ಯತೆಯೇನು ಎಂಬ ಅರಿವಾಗಿ ಬದುಕಿನ ವಾಸ್ತವ, ಸತ್ಯದ ತಿಳಿವಳಿಕೆ ಉಂಟಾಗುತ್ತದೆ. ಕಷ್ಟ, ನೋವು, ಅವಮಾನಗಳು, ಮರೆಯಲಾರದ ಪಾಠ ಕಲಿಸಿಕೊಟ್ಟು ನಾವು ನಾವಾಗಿಯೇ ಬದಲಾಗುತ್ತೇವೆ. - ಜೆ. ಪೂಜಾರಿ
ದಿನದ ಅಂತ್ಯದಲ್ಲಿ ತೃಪ್ತಿ ಇರಲಿ :
“ಬದುಕು ಹೇಗಿರಬೇಕು ಎಂದರೆ ಬೆಳಗ್ಗೆ ಏಳುವಾಗ ದೃಢವಾದ ನಿರ್ಧಾರವಿರಬೇಕು, ರಾತ್ರಿ ಮಲಗುವಾಗ ಸಂಪೂರ್ಣ ತೃಪ್ತಿ ಇರಬೇಕು.’ ಗೆಳತಿಯೊಬ್ಬಳ ಫೇಸ್‌ಬುಕ್ ವಾಲ್‌ನಲ್ಲಿ ನೋಡಿದ ಈ ಸಂದೇಶ ಜೀವನಕ್ಕೊಂದು ಹೊಸ ಹುಮ್ಮಸ್ಸು ತುಂಬುವಂತಿದೆ. ನಿತ್ಯವೂ ನಾವು ಏಳುವಾಗ ಏನು ಯೋಚಿಸುತ್ತೇವೆ. ಇವತ್ತಿನ ಅಗತ್ಯ ಕೆಲಸಗಳನ್ನು ಮಾಡಬೇಕಲ್ಲವೋ ಎಂಬ ಚಿಂತೆ, ರಾತ್ರಿ ಮಲಗುವಾಗ ಅಬ್ಟಾ ಹೇಗಿದ್ದರೂ ಈ ದಿನವೊಂದು ಕಳೆಯಿತು ಎನ್ನುವ ಭಾವನೆ. ಇದು ನಮ್ಮ ಬದುಕಿನ ಹಿನ್ನೋಟದಲ್ಲಿ ಏನನ್ನೂ ಉಳಿಸುವುದಿಲ್ಲ. ಅದರ ಬದಲಾಗಿ ಬೆಳಗ್ಗೆ ಏಳುವಾಗ ದೃಢ ನಿರ್ಧಾರ ಮಾಡಿ ಇವತ್ತು ಆಗಲೇಬೇಕಿರುವ ಕೆಲಸಗಳ ಪಟ್ಟಿಯನ್ನು ಮನದಲ್ಲೇ ರೂಪಿಸಿ ಅದನ್ನು ಮುಗಿಸುವಲ್ಲಿ ಸಂಪೂರ್ಣ ಶ್ರಮ ವಹಿಸಿದರೆ ರಾತ್ರಿ ನೆಮ್ಮದಿಯ ನಿದ್ದೆ ನಮ್ಮದಾಗುವುದು. –ಶ್ರಾವ್ಯಾ, ಉದ್ಯಾವರ