Advertisement
ಒಬ್ಬ ನಟ ನೆಗೆಟಿವ್ ಪಾತ್ರಗಳನ್ನು ಮಾಡಿಕೊಂಡು ಬಂದು, ಹೀರೋ ಆದ ಸಾಕಷ್ಟು ಉದಾಹರಣೆಗಳಿವೆ. ಆದರೆ, ಒಬ್ಬ ಹೀರೋ, ನೆಗೆಟಿವ್ ಪಾತ್ರಗಳನ್ನು ಒಪ್ಪಿಕೊಳ್ಳುವುದು ಅಷ್ಟು ಸುಲಭವಲ್ಲ. ಅದರಲ್ಲೂ ಧನಂಜಯ್ ಈಗಾಗಲೇ ಏಳೆಂಟು ಚಿತ್ರಗಳಲ್ಲಿ ಹೀರೋ ಆಗಿ ನಟಿಸಿದ್ದವವರು. ಅಂಥವರು ಒಂದು ದಿನ ಡಾಲಿಯಂತಹ ನೆಗೆಟಿವ್ ಪಾತ್ರವನ್ನು ಒಪ್ಪಿಕೊಳ್ಳುವುದಕ್ಕೆ ನಿಒಕ್ಕೂ ಧೈರ್ಯ ಬೇಕು. ಈ ಧೈರ್ಯ ಹೇಗೆ ಬಂತು ಮತ್ತು ಯಾಕೆ ಆ ಪಾತ್ರ ಮಾಡಬೇಕೆಂದೆನಿಸಿತು ಎಂಬ ಪ್ರಶ್ನೆಯನ್ನು ಅವರ ಮುಂದಿಟ್ಟರೆ, ಅವರ ಉತ್ತರ ಹೀಗಿದೆ.
Related Articles
Advertisement
ಅದು ಒಂದು ತಂಡದ ತಾಖತ್ತು. ಇವತ್ತು ಇಡೀ ತಂಡದ ಕೆಲಸದಿಂದ “ಟಗರು’ ಗೆದ್ದಿದೆ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಧನಂಜಯ್. ಸರಿ, ಮುಂದೇನು? ಇನ್ನು ಅವರು ಹೀರೋ ಪಾತ್ರಗಳಲ್ಲಿ ಮುಂದುವರೆಯುತ್ತಾರಾ ಅಥವಾ ನೆಗೆಟಿವ್ ಪಾತ್ರಗಳಿಗೆ ಸೀಮಿತವಾಗುತ್ತಾರಾ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಈ ಪ್ರಶ್ನೆಯನ್ನು ಅವರ ಮುಂದಿಟ್ಟರೆ, “ನನಗೂ ಗೊತ್ತಿಲ್ಲ’ ಎಂದು ನಗುತ್ತಾರೆ ಧನಂಜಯ್. “ನಿಜ ಹೇಳಬೇಕೆಂದರೆ, ವಾಟ್ ನೆಕ್ಸ್ಟ್ ಅಂತ ನನಗೂ ಗೊತ್ತಿಲ್ಲ. “ಟಗರು’ ಚಿತ್ರ ಒಂದು ಜಾಗದಲ್ಲಿ ತಂದು ಬಿಟ್ಟಿದೆ. ಮುಂದೆ ಹೀರೋ ಪಾತ್ರಗಳನ್ನ ಮಾಡಬೇಕಾ ಅಥವಾ ನೆಗೆಟಿವ್ ಪಾತ್ರಗಳನ್ನು ಮಾಡಬೇಕಾ ಅಂತ ಗೊತ್ತಾಗುತ್ತಿಲ್ಲ.
ಆ ಬಗ್ಗೆ ಯೋಚಿಸಿಯೂ ಇಲ್ಲ. ಒಂದಂತು ಅಂದುಕೊಂಡಿದ್ದೇನೆ. ಪಾಸಿಟಿವೊ ಅಥವಾ ನೆಗೆಟಿವೊ ಅಂತ ಯೋಚಿಸಲ್ಲ. ಒಳ್ಳೆಯ ಪಾತ್ರ ಮತ್ತು ತಂಡ ಬಂದರೆ ಯಾವುದಾದರೂ ಖಂಡಿತಾ ಒಪ್ಪಿಕೊಳ್ಳುತ್ತೇನೆ. “ಯಜಮಾನ’ ಸಹ ನಾನು ಹಾಗೆಯೇ ಒಪ್ಪಿಕೊಂಡ ಚಿತ್ರ’ ಎನ್ನುವ ಧನಂಜಯ್, “ಯಜಮಾನ’ ಚಿತ್ರದಲ್ಲಿ ದರ್ಶನ್ ಅವರ ವಿರೋಧಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.”ಇದುವರೆಗೂ ಡಾಲಿ ಪಾತ್ರ ಒಂದು ಸವಾಲಾಗಿತ್ತು. ಅದನ್ನು ಬ್ರೇಕ್ ಮಾಡಿ ಇನ್ನೇನೋ ಮಾಡಬೇಕು. ಹಾಗೆ ಮಾಡಬೇಕೆಂದರೆ, ಇನ್ನೊಂದು ಪಾತ್ರ ಹುಚ್ಚು ಹತ್ತಿಸಬೇಕು. ಆ ಪಾತ್ರ ಯಾರ ಕಡೆಯಿಂದ ಬರುತ್ತದೆ ಎಂಬ ಕುತೂಹಲ ನನಗೂ ಇದೆ. ಆ ಕುತೂಹಲದಿಂದಲೇ ಕಾಯುತ್ತಿದ್ದೇನೆ’ ಎನ್ನುತ್ತಾರೆ ಧನಂಜಯ್.
ಅವರ ಲೆವೆಲ್‌ಗೆ ಹೋಗೋದು ಬಹಳ ಕಷ್ಟ: ಸೂರಿ ಬಾಯಿಯಿಂದ ಸೂಪರ್ ಅನ್ನೋ ಪದ ಕೇಳದಿದ್ದರೆ ಸಮಾಧಾನವೇ ಆಗುತ್ತಿರಲಿಲ್ಲ ಎನ್ನುವ ಧನಂಜಯ್. “ಸೂರಿ ಬಾಯಲ್ಲಿ ಸೂಪರ್ ಎನ್ನುವ ಮಾತು ಕೇಳ್ಳೋದಕ್ಕೇ ಏನೋ ಸಂತೋಷ. ಅವರು ಒಂದೊಂದು ಬಾರಿ ಸೂಪರ್ ಅನ್ನುವಾಗಲೂ, ಇನ್ನೂ ಏನನ್ನೋ ಮಾಡಬೇಕು ಅಂತ ಅನಿಸುತಿತ್ತು. ಕೊನೆಕೊನೆಗೆ ಸೂರಿ ಬಾಯಿಂದ “ಸೂಪರ್’ ಅಂತ ಕೇಳದಿದ್ದರೆ ಸಮಾಧಾನ ಆಗುತ್ತಿರಲಿಲ್ಲ. ಹಾಗಾಗಿ ಇನ್ನಷ್ಟು ಎಫರ್ಟ್ ಹಾಕಿದೆ. ಇನ್ನು ಶಿವರಾಜಕುಮಾರ್ ಅಂತೂ ದೇವರು ಅನಿಸಿಬಿಟ್ಟರು. ಅವರೆದುರು ಎಲ್ಲದರಲ್ಲೂ ನಾವು ಚಿಕ್ಕವರು.
ವಯಸ್ಸು, ಅನುಭವ, ಯಶಸ್ಸು, ಮೆಚ್ಯುರಿಟಿ … ಯಾವುದರಲ್ಲೂ ಅವರ ಲೆವೆಲ್‌ಗೆ ಹೋಗೋದು ಬಹಳ ಕಷ್ಟ. ಅಂಥವರು ನಮ್ಮನ್ನ ಬಹಳ ಫ್ರೆಂಡ್ಲಿಯಾಗಿ ನೋಡಿದರು. ಚಿತ್ರದಲ್ಲಿ ಅವರ ಪಾತ್ರಕ್ಕೆ ಬಯ್ಯುವ ದೃಶ್ಯಗಳಿವೆ. ಅದರಿಂದ ಅವರ ಅಭಿಮಾನಿಗಳಿಗೆ ಬೇಸರವಾಯ್ತು ಅಂತ ಕೇಳಿದೆ. ನೋವಾಗಿದ್ದರೆ ಕ್ಷಮೆ ಕೋರುತ್ತೇನೆ. ಒಬ್ಬ ರೌಡಿ ಪಾತ್ರವಾಗಿ ಹಾಗೆ ಮಾತಾಡಬೇಕಾಯಿತು. ಇದಕ್ಕೆ ಶಿವರಾಜಕುಮಾರ್ ಏನನ್ನುತ್ತಾರೋ ಎಂಬ ಭಯವಿತ್ತು. ಪಾತ್ರದ ಬಾಯಲ್ಲಿ ಅಂತಹ ಮಾತುಗಳು ಸಹಜ, ಅದರಿಂದ ಏನೂ ಬೇಸರವಿಲ್ಲ ಎಂದು ಅವರೇ ಹೇಳಿದರು. ಅವರ ಮೆಚ್ಯುರಿಟಿ ಲೆವೆಲ್ ನಿಜಕ್ಕೂ ದೊಡ್ಡದು’ ಎನ್ನುತ್ತಾರೆ ಧನಂಜಯ್.
* ಚೇತನ್ ನಾಡಿಗೇರ್