ನಮ್ಮಲ್ಲಿ ಹೆಚ್ಚಿನವರಿಗೆ ಇಚ್ಛಾಶಕ್ತಿಯ ಕೊರತೆ. ಅಂದರೆ ಅವರಿಗೆಲ್ಲಾ ಬದುಕಿನಲ್ಲಿ ಸೆಟ್ಲ ಆಗಬೇಕು ಅನ್ನುವ ಆಸೆ ಇರುತ್ತದೆ. ಆದರೆ ಭವಿಷ್ಯದಲ್ಲಿ ತಾವು ಏನಾಗಬೇಕು? ಎಂಬ ವಿಷಯದಲ್ಲಿ ಖಚಿತತೆ ಇರುವುದಿಲ್ಲ. ಒಂದೊಳ್ಳೆಯಕೆಲಸ ಹಿಡಿದು ಲೈಫ್‌ನಲ್ಲಿ ಸೆಟ್ಲ್ ಆದ್ರೆ ಸಾಕು; ಆಮೇಲೆ ಹೇಗೋ ಬದುಕಿದರಾಯ್ತು. ಹುಟ್ಟಿಸಿದ ದೇವರು ಹುಲ್ಲು ಮೇಯಿಸೋದಿಲ್ಲ
ಅಲ್ಲವಾ?- ಅಂದುಬಿಡುವ ಜನರೇ ಜಾಸ್ತಿ. ಉಹೂಂ, ಹಾಗಾಗಬಾರದು. ಭವಿಷ್ಯದಲ್ಲಿ ಏನಾಗಬೇಕು ಎಂಬ ವಿಷಯದಲ್ಲಿ ನಮಗೆ ಒಂದು ಸ್ಪಷ್ಟತೆ ಇರಬೇಕು. ನಾನು ಭವಿಷ್ಯದಲ್ಲಿ ಶಿಕ್ಷಕ ನಾಗಬೇಕು, ಇಂಜಿನಿಯರ್ ಆಗಬೇಕು, ಅಧಿಕಾರಿಯಾಗಬೇಕು, ಸೈನಿಕನಾಗಬೇಕು, ವೈದ್ಯನಾಗ ಬೇಕು, ವರ್ತಕನಾಗಬೇಕು… ಹೀಗೆ. ಇಂಥದೊಂದು ಪ್ಲಾನ್ ಇಲ್ಲದೇ ಬದುಕಿದಾಗ, ಪಾಲಿಗೆ ಬಂದದ್ದೇ ಪಂಚಾಮೃತ ಎಂದು ಬಾಳಬೇಕಾಗುತ್ತದೆ.
ನೆಪೋಲಿಯನ್‌ನ ಹೆಸರು ಎಲ್ಲರಿಗೂ ಗೊತ್ತು. ಅವನನ್ನು ಕುರಿತು ಹೀಗೊಂದು ಕಥೆಯಿದೆ: ಆಗಿನ್ನೂ ನೆಪೋಲಿಯನ್ ಬಾಲಕ. ಮಿಲಿಟರಿ ಶಿಕ್ಷಣ ಪಡೆಯುತ್ತಿದ್ದ. ಆ ಶಾಲೆಗೆ ದೇಶದ ಸೇನಾಧಿಪತಿ ಬಂದರು. ಅವರನ್ನು ಸ್ವಾಗತಿಸಲು ವಿದ್ಯಾರ್ಥಿಗಳು ಸಾಲಾಗಿನಿಂತಿದ್ದರು. “”ಮುಂದೆ ನೀನು ಏನಾಗಲು ಬಯಸುತ್ತೀ?” ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರಿಗೂ ಹಾಕಿದರು ಸೇನಾಧಿಪತಿ. ನಾನು ಸೈನಿಕನಾಗಬಯಸುವೆ, ಜನರಲ್ ಆಗಬಯಸುವೆ, ಕ್ಯಾಪ್ಟನ್ ಆಗ ಬಯಸುವೆ… ಎಂದೆಲ್ಲಾ ವಿದ್ಯಾರ್ಥಿಗಳು ಉತ್ತರ ಕೊಟ್ಟರು. ಆಗ ಸೇನಾಧಿಪತಿಗಳು-ಅಕಸ್ಮಾತ್ ನೀವುಅಂದು ಕೊಂಡದ್ದುಆಗದೇ ಹೋದರೆ?- ಎಂದು ಮರು ಪ್ರಶ್ನೆ ಹಾಕುತ್ತಿದ್ದರು. ಆಗ ವಿದ್ಯಾರ್ಥಿಗಳು- “ಅಂದುಕೊಂಡಂತೆ ಆಗದಿದ್ದರೆ ಎರಡನೇ ಆಯ್ಕೆ ಯಾವುದಿದೆಯೋ ಅದರತ್ತ ಹೊರಳುತ್ತೇವೆ’ ಎನ್ನುತ್ತಿದ್ದರು. ನೆಪೋಲಿಯನ್‌ನ ಸರದಿ ಬಂತು. ಸೇನಾಧಿಪತಿಗಳು ಅವನಿಗೂ ಪ್ರಶ್ನೆ ಕೇಳಿದರು. ಆಗ ನೆಪೋಲಿಯನ್- “ಈ ಯೂರೋಪ್ ಖಂಡದ ದೊರೆಯಾಗಬೇಕು ಎಂಬುದೇ ನನ್ನ ಮಹದಾಸೆ’ ಎಂದ.
“ಅಕಸ್ಮಾತ್ ನೀನು ಅಂದುಕೊಂಡಂತೆ ಆಗದಿದ್ದರೆ”- ಸೇನಾಧಿಪತಿಯ ಮರುಪ್ರಶ್ನೆ. ಆಗ ನೆಪೋಲಿಯನ್ ಹೇಳುತ್ತಾನೆ: “ಇಲ್ಲ, ನಾನು ಅಂದು ಕೊಂಡಿದ್ದನ್ನು ಸಾಧಿಸಿಯೇ ತೀರುತ್ತೇನೆ. ಯೂರೋಪ್ ಖಂಡದ ದೊರೆಯಾಗಬೇಕು ಅನ್ನುವುದೇ ನನ್ನ ಮೊದಲ ಗುರಿ, ಕೊನೆಯ ಗುರಿ ಕೂಡ ಅದೇ!’
***
ಮುಂದೆ ನೆಪೋಲಿಯನ್ ಅಂದುಕೊಂಡಿದ್ದನ್ನು ಸಾಧಿಸಿದ. ಅದೇ ಕಾರಣಕ್ಕೆ ಹಲವರಿಗೆ ಮಾದರಿಯೂ ಆದ.