Advertisement

ಎಂಟು ದಿನಗಳಿಂದ ಶಾಲೆಗೆ ಹೋಗದಿದ್ದರೂ ಪಾಸಿಟಿವ್ ವರದಿ; ಆರೋಗ್ಯ ಸಿಬ್ಬಂದಿ ಎಡವಟ್ಟು ಬಹಿರಂಗ

11:52 AM Jan 23, 2022 | Team Udayavani |

ಮುಂಡಗೋಡ: ಶಾಲೆಗೆ ಹೋಗದಿದ್ದರೂ ವಿದ್ಯಾರ್ಥಿನಿಯ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಆಕೆಯ ಕೋವಿಡ್ ವರದಿ ಪಾಸಿಟಿವ್ ಬಂದಿದೆ ಎಂದು ಪಾಲಕರೊಬ್ಬರಿಗೆ ಆರೋಗ್ಯ ಸಿಬ್ಬಂದಿ ಹೇಳಿ ಆತಂಕ ಮೂಡಿಸಿದ ಘಟನೆ ಜರುಗಿದೆ.

Advertisement

ಪಟ್ಟಣದ ಹಳೂರಿನ ಆರನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು, ಕರಗಿನಕೊಪ್ಪದ ಲೊಯೋಲ ಶಾಲೆಯ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುತ್ತಿದ್ದಾಳೆ. ಆಕೆ, ಜನವರಿ 12ರಿಂದ 19ರವರೆಗೆ ಅನಾರೋಗ್ಯ ಇರುವುದರಿಂದ, ಶಾಲೆಗೆ ಹೋಗಿಲ್ಲ. ಆದರೆ, ಲೊಯೋಲ ಶಾಲೆಯಲ್ಲಿ ಜನವರಿ 17ರಂದು ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡಿರುವ ಆರೋಗ್ಯ ಸಿಬ್ಬಂದಿ, ಅದರಲ್ಲಿ ಶಾಲೆಗೆ ಹೋಗದ ಆರನೇ ತರಗತಿಯ ವಿದ್ಯಾರ್ಥಿನಿಯ ಕೋವಿಡ್ ಪರೀಕ್ಷೆ ಮಾಡಿರುವುದಾಗಿ ಹಾಗೂ ವರದಿಯು ಪಾಸಿಟಿವ್ ಅಂತ ಬಂದಿದೆ ಎಂದು ಆಕೆಯ ಪಾಲಕರಿಗೆ ಹೇಳಿ, ಶಾಲೆಗೆ ಪಾಲಕರಿಗೆ ಬರಲು ಹೇಳಿದ್ದಾರೆ.

ಒಮ್ಮೇಲೆ ಆತಂಕಗೊಂಡ ವಿದ್ಯಾರ್ಥಿನಿಯ ತಂದೆಯು, ಇದ್ದ ಕೆಲಸವನ್ನು ಬಿಟ್ಟು, ಲೊಯೋಲ ಶಾಲೆಗೆ ದೌಡಾಯಿಸಿದ್ದಾರೆ. ಅಲ್ಲಿ ಶಿಕ್ಷಕರು, ನಿಮ್ಮ ಮಗಳಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಕೂಡಲೇ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ತಿಳಿಸಿದ್ದಾರೆ. ಇದರಿಂದ ಆತಂಕಗೊಂಡ ವಿದ್ಯಾರ್ಥಿನಿಯ ತಂದೆಯು, ನನ್ನ ಮಗಳು ಎಂಟು ದಿನಗಳಿಂದ ಶಾಲೆಗೆ ಬಂದಿಲ್ಲ. ಕೋವಿಡ್ ಪರೀಕ್ಷೆ ಯಾವಾಗ ಮಾಡಿದ್ದೀರಿ. ನನ್ನ ಮಗಳು ಇವತ್ತು ಮಾತ್ರ ಶಾಲೆಗೆ ಬಂದಿದ್ದಾಳೆ ಎಂದು ವಿವರಿಸಿದ್ದಾರೆ.

ಏನೋ ಎಡವಟ್ಟು ಆದಂತೆ ಕಂಡುಬಂದ ಶಿಕ್ಷಕರು ತರಗತಿಯ ಅಟೆಂಡೆನ್ಸ್ ನೋಡಿದಾಗ, ವಿದ್ಯಾರ್ಥಿನಿಯು ಶಾಲೆಗೆ ಬಂದಿಲ್ಲದಿರುವುದು ಕಂಡುಬಂದಿದೆ. ಆಗ, ಶಿಕ್ಷಕರು ಆರೋಗ್ಯ ಸಿಬ್ಬಂದಿಗೆ ಕರೆ ಮಾಡಿ, ಆ ವಿದ್ಯಾರ್ಥಿನಿ ಶಾಲೆಗೆ ಬಂದಿಲ್ಲ. ಆಕೆಯ ಕೋವಿಡ್ ಟೆಸ್ಟ್ ವರದಿ ಅದಲ್ಲ. ಯಾರದೋ ಮಿಸ್ ಆಗಿ ಬಂದಿರಬಹುದು ಚೆಕ್ ಮಾಡಿ ಎಂದಿದ್ದಾರೆ. ಆರೋಗ್ಯ ಸಿಬ್ಬಂದಿಯು ವಿದ್ಯಾರ್ಥಿನಿಯ ತಂದೆಗೆ ಕರೆ ಮಾಡಿ, ಬೇರೆಯವರ ವರದಿ ಆಗಿದೆ. ನಿಮ್ಮ ಮಗಳದಲ್ಲ. ಈ ವಿಷಯವನ್ನು ಯಾರಿಗೂ ಹೇಳ್ಬೇಡಿ ಎಂದು ವಿದ್ಯಾರ್ಥಿನಿಯ ತಂದೆಗೆ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೂ, ಆರೋಗ್ಯ ಸಿಬ್ಬಂದಿಯ ಎಡವಟ್ಟು ಶನಿವಾರ ಸಂಜೆ ಬಹಿರಂಗಗೊಂಡಿದೆ.

ವರದಿ ಯಾರದ್ದು? :

Advertisement

ಶಾಲೆಗೆ ಹೋಗದ ಆರನೇ ತರಗತಿಯ ವಿದ್ಯಾರ್ಥಿನಿಯ ಕೋವಿಡ್ ಟೆಸ್ಟ್ ವರದಿ ಪಾಸಿಟಿವ್ ಬಂದಿರುವುದು ನಿಜಕ್ಕೂ ಯಾವ ವಿದ್ಯಾರ್ಥಿಯದ್ದು? ಎಂಬುದನ್ನು ಆರೋಗ್ಯ ಇಲಾಖೆ ಸ್ಪಷ್ಟಪಡಿಸಬೇಕಿದೆ. ನಿಜವಾಗಿ ಪಾಸಿಟಿವ್ ಇದ್ದಂತ ವಿದ್ಯಾರ್ಥಿ ಗೊತ್ತಾಗದೇ, ಇಡಿ ಶಾಲೆಯಲ್ಲಿ ತಿರುಗಾಡಿದರೇ? ಯಾರು ಹೊಣೆ ಎಂದು ಪಾಲಕರು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ.

ಬಹಿರಂಗ ಮಾಡ್ಬೇಡಿ ಎಂದ ಆರೋಗ್ಯ ಸಿಬ್ಬಂದಿ: ಆರನೇ ತರಗತಿ ವಿದ್ಯಾರ್ಥಿನಿಯ ಕೋವಿಡ್ ಪಾಸಿಟಿವ್ ವರದಿ ಸುಳ್ಳು ಆಗಿರುವುದನ್ನು ಯಾರಿಗೂ ಹೇಳದಂತೆ, ಆರೋಗ್ಯ ಸಿಬ್ಬಂದಿ ವಿದ್ಯಾರ್ಥಿನಿಯ ತಂದೆಗೆ ಎರಡೆರಡು ಬಾರಿ ಕರೆ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಗೊತ್ತಲ್ಲದೇ ತಪ್ಪು ಆಗಿದೆ ಎನ್ನುವದಕ್ಕಿಂತ. ಬೇಜವಾಬ್ದಾರಿಯಿಂದ ವಿದ್ಯಾರ್ಥಿನಿಯ ಭವಿಷ್ಯದ ಜೊತೆ ಚೆಲ್ಲಾಟ ಆಡಿರುವ ಬಗ್ಗೆ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next