Advertisement

ರಾಗಾನುಭಾವದ ಆನಂದಾನುಭೂತಿ

02:53 PM Dec 01, 2017 | |

ಮಂಗಳೂರಿನ ಮಣಿಕೃಷ್ಣಸ್ವಾಮಿ ಅಕಾಡೆಮಿ (ರಿ.)ಯು 2017ರ “ರಾಗಸುಧಾರಸ’ ತ್ರಿದಿನ ಸಂಗೀತೋತ್ಸವವನ್ನು ಸಂಗೀತ ಕ್ಷೇತ್ರದ ಪರಂಪರೆ ಮತ್ತು ಹೊಸತನಗಳ ಎರಕದೊಂದಿಗೆ ಬಹಳ ಚೆನ್ನಾಗಿ ಪ್ರಸ್ತುತಪಡಿಸಿತು. ಪುರಭವನದಲ್ಲಿ ಸಂಪನ್ನಗೊಂಡ ಈ ಉತ್ಸವದಲ್ಲಿ ಈ ಬಾರಿ ವಿನೂತನ ಶೈಲಿಯ “ರಾಗ ಒಂದು ಭಾವ ಹಲವು’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದನ್ನು ಸಂಗೀತ ಕ್ಷೇತ್ರದ ಕೆಲವು ಪ್ರಕಾರಗಳನ್ನು ಆಯ್ದುಕೊಂಡು ಸಮರ್ಪಕ ಹಿಮ್ಮೇಳ ದೊಂದಿಗೆ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್‌, ಸಂಸ್ಥೆಯ ಗೌರವಾಧ್ಯಕ್ಷ ಕ್ಯಾ| ಗಣೇಶ್‌ ಕಾರ್ಣಿಕ್‌ ಹಾಗೂ ಸಂಸ್ಥೆಯ ಸದಸ್ಯರ ಜತೆ ಗೂಡುವಿಕೆಯಿಂದ ಈ ನವೀನ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿಬಂತು.

Advertisement

ಶಾಸ್ತ್ರೀಯ ಸಂಗೀತ ಕ್ಷೇತ್ರ ಗಾಯನ -ವಾದನ, ಸುಗಮ, ಲಘು, ಜಾನಪದ ಹೀಗೆ ಹಲವಾರು ಕವಲುಗಳನ್ನು ಹೊಂದಿದ್ದು, ಮೇಲ್ನೋಟಕ್ಕೆ ಇವೆಲ್ಲ ಪ್ರತ್ಯೇಕವಾಗಿ ಕಂಡರೂ ಇವೆಲ್ಲವುಗಳ ಒಳಗನ್ನು ಪರಿಶೀಲಿಸಿದಾಗ ಮೂಲಭೂತ ದ್ರವ್ಯಗಳಾದ ರಾಗ, ತಾಳ, ಆಲಾಪನೆ, ಲಯಗಾರಿಕೆ, ಅಲಂಕರಣ ಮುಂತಾದುವುಗಳಲ್ಲಿ ಸಮಾನತೆಯ ಅಂಶಗಳನ್ನೂ ಗುರುತಿಸಲು ಸಾಧ್ಯ. ಈ ನಿಕಟ ಸಾಮ್ಯತೆ ಮತ್ತು ವೈರುಧ್ಯಗಳನ್ನು ಪರಿಶೀಲಿಸಲು ಸಂಗೀತ ಕ್ಷೇತ್ರದ ಟಿಸಿಲೊಡೆದ ಕೆಲವು ಕವಲುಗಳಲ್ಲಿ “ರಾಗ’ ಎಂಬ ಅಂಶವನ್ನು ಕೇಂದ್ರೀಕರಿಸಿ ನಡೆಸಿದ ಈ ಪ್ರಯೋಗ, ಇದರ ಉದ್ದೇಶವನ್ನು ಸಾಂಗವಾಗಿ ವಿಷದಪಡಿಸಿತು. ಕರ್ನಾಟಕ ಮತ್ತು ಹಿಂದುಸ್ತಾನಿ ಸಂಗೀತ, ಭರತನಾಟ್ಯ ಸಂಗೀತ, ಭಾವಗೀತೆ, ಯಕ್ಷಗಾನ ಸಂಗೀತ, ಚಿತ್ರ ಸಂಗೀತ ಹಾಗೂ ಭಜನಾ ಸಂಗೀತ – ಹೀಗೆ ಅಗಾಧವಾದ ಆಳ, ವ್ಯಾಪ್ತಿ ಹೊಂದಿರುವ ಈ ಕ್ಷೇತ್ರದ ಏಳು ಕವಲುಗಳನ್ನು ಆರಿಸಿಕೊಳ್ಳಲಾಗಿತ್ತು. ಪ್ರತಿಯೊಂದು ವಿಭಾಗಕ್ಕೂ ಯೋಗ್ಯ ಗಾಯಕರು ಹಾಗೂ ಒಪ್ಪುವ ಹಿಮ್ಮೇಳ ಕಲಾವಿದರನ್ನು ಆಯ್ಕೆ ಮಾಡಿದ್ದು ಈ ಕಾರ್ಯಕ್ರಮದ ಮೊದಲ ಹೆಜ್ಜೆ. ಇವರೆಲ್ಲ ಹಿಂದೋಳ, ಅಭೇರಿ, ಮೋಹನ ಹಾಗೂ ಮಧ್ಯಮಾವತಿ ರಾಗಗಳನ್ನು ಪ್ರತಿ ವಿಭಾಗದಿಂದಲೂ ಅತ್ಯಂತ ಸುಂದರವಾಗಿ, ತಮ್ಮ ವಿಭಾಗದ ಮೂಲ ಅಂಶಗಳನ್ನು ಪ್ರಕಟಪಡಿಸುತ್ತಾ ಚೇತೋಹಾರಿಯಾಗಿ ಪ್ರಸ್ತುತಿಗೊಳಿಸಿದರು. ಕರ್ಣಾಟಕ ಸಂಗೀತದಲ್ಲಿ ವಿ| ಕೃಷ್ಣಪವನ್‌ ಕುಮಾರ್‌, ಹಿಂದೂಸ್ತಾನಿ ಸಂಗೀತದಲ್ಲಿ ವಿ| ಚೈತನ್ಯ ಜಿ., ಭರತನಾಟ್ಯ ಸಂಗೀತದಲ್ಲಿ  ವಿ| ವಿದ್ಯಾಶ್ರೀ ರಾಧಾಕೃಷ್ಣ, ಭಾವಗೀತೆಯಲ್ಲಿ ವಿ| ರಾಘವೇಂದ್ರ ಆಚಾರ್‌, ಚಿತ್ರಗೀತೆ ಯಲ್ಲಿ ವಿ| ಸಂಗೀತಾ ಬಾಲಚಂದ್ರ, ಯಕ್ಷಸಂಗೀತದಲ್ಲಿ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಮತ್ತು ಭಜನೆ ಸಂಗೀತದಲ್ಲಿ ಸುದರ್ಶನ ಕುಂಜತ್ತಾಯ ಪಾಲು ಗೊಂಡಿದ್ದರು.

ಈ ಎಲ್ಲ ಗಾಯಕರಿಗೆ ಅಷ್ಟೇ ಸಮರ್ಥವಾಗಿ, ಔಚಿತ್ಯ ಪೂರ್ಣವಾಗಿ ಸಾಥ್‌ ನೀಡಿದ ಹಿಮ್ಮೇಳ ಕಲಾವಿದರೆಲ್ಲರೂ ಈ ಕಾರ್ಯಕ್ರಮದ ಸಫ‌ಲತೆಗೆ ಸಮಾನ ಪಾಲುದಾರರಾದರು. ಗಾಯಕರೆಲ್ಲರೂ ಅನುಭವೀ ಕಲಾವಿದರಾಗಿದ್ದು, ಪ್ರತಿ ರಾಗಕ್ಕೂ ಉಚಿತವಾದ ಸಾಹಿತ್ಯ, ತಾಳ ರಚನೆಗಳನ್ನು ಆರಿಸಿದ್ದು ಇವರ ಕಾಳಜಿಯನ್ನು ಸೂಚಿಸಿತು. ಪ್ರತಿ ವಿಭಾಗದಲ್ಲೂ ಈ ರಾಗಗಳನ್ನು ಗುರುತಿಸಲು ರಸಿಕರಿಗೆ ರೋಚಕವಾಗಿ ಪರಿಣಮಿಸಿದ ಗಾಯನ ಇದಾಗಿತ್ತು. ಭರತನಾಟ್ಯ ಕಲಾವಿದೆ ವಿದ್ಯಾಶ್ರೀ ಅವರು ಸಂಗೀತದ ಅರಿವನ್ನು ಪೂರ್ಣವಾಗಿ ಹೊಂದಿರುವ ಕಲಾವಿದೆ; ಸಂಗೀತಾ ಬಾಲಚಂದ್ರ ಅವರು ಶಾಸ್ತ್ರೀಯ ಗಾಯಕಿಯಾಗಿರುವುದರ ಜತೆಗೆ ಚಿತ್ರಸಂಗೀತ, ಭಾವಸಂಗೀತಗಳಲ್ಲಿ ಪ್ರಸಿದ್ಧಿ ಹೊಂದಿದ್ದಾರೆ; ಇವರು ಅಂದಿನ ರಸಿಕರ ವಿಶೇಷ ಆಕರ್ಷಣೆ ಕಾರಣರಾದರು.

ಯಕ್ಷಗಾನದ ಹಿಮ್ಮೇಳದಲ್ಲಿದ್ದ ಮುರಲೀಧರ ಭಟ್‌ ಕಟೀಲು ತಮ್ಮ ಹಿತವಾದ ಮದ್ದಳೆಯ ನುಡಿತಗಳಿಂದ ಯಕ್ಷಗಾನ ಛಾಪನ್ನು ತೋರಿಸಿಕೊಟ್ಟರೆ, ಕೀಬೋರ್ಡ್‌ ಮತ್ತು ರಿದಂ ಪ್ಯಾಡಿನ ಕಲಾವಿದರಾದ ಪ್ರಕಾಶ್‌ ಕುಂಬ್ಳೆ ಹಾಗೂ ನವೀನ ಬೊಂದೇಲ್‌ ಅವರು ಚಿತ್ರಸಂಗೀತ, ಭಾವಗೀತೆಗೂ ಒಪ್ಪುವ ರೀತಿಯಲ್ಲಿ ವಾದನಗೈದರು. ಮೇಲಿನ ಎಲ್ಲ ವಿಭಾಗಗಳಿಗೂ ತಮ್ಮ ವಯಲಿನ್‌ ವಾದನದ ಮಧುರ ಸಾಥ್‌ ನೀಡಿದ ವರು ವಿಶ್ವಾಸ್‌ಕೃಷ್ಣ ಹಾಗೂ ಕೀರ್ತನಾ ರಾವ್‌. ಹಾರೊನಿಯಂ ವಾದಕ ರಾದ ನಿತ್ಯಾನಂದ ಭಟ್ಟರು ಭಜನಾ ಸಂಗೀತದ ಅಂದವನ್ನು ಹೆಚ್ಚಿಸಿ ದರು. ಭರತನಾಟ್ಯ ಹಾಗೂ ಕರ್ನಾಟಕ ಸಂಗೀತ ಕ್ಷೇತ್ರದ ಸ್ಪಷ್ಟವಾದ ಛಾಪನ್ನು ತಮ್ಮ ಮೃದಂಗವಾದನದ ನಿಘರವಾದ ನುಡಿತಗಳಿಂದ ಪ್ರಕಟ ಪಡಿಸಿದವರು ವಿ| ಹರ್ಷ ಸಾಮಗ. ತಬ್ಲಾ ವಾದನದ ವೈವಿಧ್ಯದಿಂದ ತಮ್ಮ ಸಾಮರ್ಥ್ಯವನ್ನು ಪ್ರಕಟಪಡಿಸಿದವರು ವಿ| ರಾಜೇಶ್‌ ಭಾಗವತರು. ಭಜನೆ ಸಂಗೀತವು ಸುದರ್ಶನ ಅವರ ಮುಂಚೂಣಿಯಲ್ಲಿ ಎಲ್ಲÉ ಮುಮ್ಮೇಳ ಹಿಮ್ಮೇಳ ಕಲಾವಿದರೊಂದಿಗೆ, ರಸಿಕರನ್ನೂ ಒಳಗೊಳ್ಳುವಂತೆ ಮಾಡಿ ಕಾರ್ಯಕ್ರಮಕ್ಕೆ ರಂಗೇರಿಸಿತು. ವೇದಿಕೆಯಲ್ಲಿದ್ದ 17 ಕಲಾವಿದರ ಧ್ವನಿಯು ಆಪ್ಯಾಯಮಾನವಾಗುವಂತೆ “ಧ್ವನಿವರ್ಧಕ’ದ ಸುವ್ಯವಸ್ಥೆಗೈದ ಶಬರಿ ಸೌಂಡ್ಸ್‌, ಮಂಜೇಶ್ವರ ಅವರಿಗೆ ನಮನಗಳು. ಈ ವಿನೂತನ ಕಾರ್ಯಕ್ರಮವನ್ನು ರಸಿಕರಿಗೆ ಮನದಟ್ಟಾಗಿಸಲು ಸ್ಪಷ್ಟವಾಗಿ ಚಿಕ್ಕದಾಗಿ ನಿರೂಪಣೆಗೈದ ಕನಕರಾಜು ಅವರಿಗೆ ಅಭಿನಂದನೆಗಳು.

ನಿತ್ಯಾನಂದ ರಾವ್‌ ಅವರ ಪರಿಕಲ್ಪನೆ, ಸಂಘಟಕರ ಶ್ರಮ, ಕಲಾವಿದರ ಉತ್ಸಾಹದ ಒಮ್ಮನಸ್ಸು, ರಸಿಕರ ತೀವ್ರ ಆಸಕ್ತಿಗಳಿಂದ ಈ “ರಾಗಾನುಭಾವ’ ನೂತನ ಕಾರ್ಯಕ್ರಮವು ಶಾಸ್ತ್ರೀಯ ಸಂಗೀತ ಕ್ಷೇತ್ರದ ಹೊಸ ಸಾಧ್ಯತೆಗಳ ಶೋಧನೆಗೆ ವಿಪುಲ ಅವಕಾಶವನ್ನು ಕಲ್ಪಿಸಿಕೊಟ್ಟ ಕಾರ್ಯಕ್ರಮವಾಗಿ ಪ್ರತಿಫ‌ಲಿಸಿತು. ಈ ಬಾರಿಯ ಆಳ್ವಾಸ್‌ ನುಡಿಸಿರಿಯಲ್ಲಿ ಈ ಕಾರ್ಯಕ್ರಮ ಜನಮೆಚ್ಚಿದ ಕಾರ್ಯಕ್ರಮವಾಗಿ ನಡೆಯುತ್ತಿರುವುದೇ ಸಾಕ್ಷಿ. ಇನ್ನಷ್ಟು ವಿಸ್ತರಿಸುತ್ತಾ ಎಲ್ಲ ವಿಭಾಗಕ್ಕೂ ಒಂದೇ ಸಾಹಿತ್ಯ ಕೃತಿ, ಸಾಮಾನ್ಯ ಹಾಗೂ ಪ್ರತ್ಯೇಕ ರಸಭಾವಗಳು, ತಾಳಗಳ ವೈವಿಧ್ಯ ಮುಂತಾದ ಅಂಶಗಳನ್ನೂ ಒಳಗೊಳ್ಳುವ ಮೂಲಕ ಸಂಗೀತ ಕ್ಷೇತ್ರದ ಹೂರಣವನ್ನು ಕಲಾಸಕ್ತರಿಗೆ ತಲುಪಿಸುವ ನಿಟ್ಟಿನಲ್ಲಿ ರಾಗಾನುಭಾವ ಮುನ್ನಡೆಯಲಿ. 

Advertisement

ವಿ| ಪ್ರತಿಭಾ ಎಂ. ಎಲ್‌. ಸಾಮಗ

Advertisement

Udayavani is now on Telegram. Click here to join our channel and stay updated with the latest news.

Next