Advertisement
ಸುಮಾರು ಹತ್ತೂಂಬತ್ತನೆಯ ಶತಮಾನದಿಂದ ನಮ್ಮೂರ ಬಾಹ್ಯ ಸೌಂದರ್ಯಕ್ಕೆ ಕಿರೀಟದಂತಿರುವ ಹುಣಸೆ ಮರಗಳನ್ನು ಇವತ್ತು ನೆನೆಯಲೇಬೇಕು. ಅಪ್ಪನೊಂದಿಗೆ ಆಗಾಗ ಚರ್ಚೆ ಮಾಡುವಾಗ ಈ ನಮ್ಮೂರ ದಾರಿಯುದ್ದಕ್ಕೂ ಸಿಗುವ ಹುಣಸೆ ಮರಗಳ ಬಗ್ಗೆ ಮಾತನಾಡದ ದಿನವೇ ಇಲ್ಲ. “ನೋಡಪ್ಪಾ ನಾವು ಸಲಾಂ ಹೊಡಿಬೇಕಾಗಿದ್ದು ನಮ್ಮೂರ ದಾರಿ ತುಂಬಾ ಗಿಡ ಹಚ್ಚಿ ತಮ್ಮ ಹೆಸರ ಹೇಳದೆ ಮಣ್ಣೊಳಗ ಮಣ್ಣಾದ ಆ ಹಿರಿಯ ಜೀವಗಳಿಗೆ…ಆ ಮರಗಳನ್ನು ನೋಡಿ ನಮ್ಮ ಹಿರಿಯರು ಬಾಳ ಪುಣ್ಯವಂತ್ರು ಅಂದು ಮನಸಿನೊಳಗ ಅವರ ಆತ್ಮಕ್ಕೆ ಸಲಾಂ ಹೊಡೆದು ಧನ್ಯವಾದ ತಿಳಸಬೇಕು’ ಅಂತ ಅಪ್ಪ ಹೇಳುತ್ತಿರುತ್ತಾರೆ.
Related Articles
Advertisement
ಈ ಹುಂಚಿ ಮರಗಳು ಸೌಂದರ್ಯಕ್ಕೆ ಮಾತ್ರನಾ? ಖಂಡಿತಾ ಅಲ್ಲ. ಶುದ್ಧ ಗಾಳಿಯ ಸರಬರಾಜು ಮಾಡುವ ಹವಾ ನಿಯಂತ್ರಕಗಳಿವು, ರಸ್ತೆಯ ಮೇಲೆ ಹಳದಿ ಎಲೆಗಳ ಚೆಲ್ಲುವ ಸ್ವಾಮಗೊಳ ಇವು, ಸದಾ ದಾರಿಹೋಕರ ಮೈಮನಗಳ ತಂಪು ಗೊಳಿಸುವ ಮಾಯಾಂಗನೆ ಇವು, ಹೊಲದಿಂದ ಬರುವ ರೈತನಿಗೆ ನೆರಳು ಕೊಡುತ್ತಾ ಸುಸ್ತು ಮಾಡದೇ ಮನೆ ತಲುಪಿಸುವ ಮೆಟ್ರೋಗಳಿವು, ಬಂದೋರಿಗೆಲ್ಲ ಬಾ ಎನ್ನುತ ಸ್ವಾಗತಗೈಯುವ ನಮ್ಮೂರ ಸ್ವಾಗತ ಸಮಿತಿಯ ಅಧ್ಯಕ್ಷರು ಇವು, ಒಕ್ಕಲುತನಕ್ಕೆ ಬಾಡಿಗೆಯ ನೆರಳು ಕೊಟ್ಟು ಬಾಡಿಗೆ ಪಡೆಯದ ಮಾಲಕರು ಇವು. ಮುಖ್ಯವಾಗಿ ಇವು ನಮ್ಮೂರಿಗೆ ಆದಾಯವನ್ನೂ ತಂದು ಕೊಡ್ತವೆ. ನಿಪ್ಪಾಣಿ, ಗೋಕಾಕ್‌ನಿಂದ ಇಲ್ಲಿನ ಹುಣಸೆ ಮರಗಳನ್ನು ಗುತ್ತಿಗೆ ಹಿಡಿಯಲು ಜನ ಬರ್ತಾರೆ. ಲಕ್ಷ ಲಕ್ಷ ರೂಪಾಯಿಗೆ ಗುತ್ತಿಗೆದಾರರ ಪಾಲಾಗುತ್ತವೆ. ಆದ್ದರಿಂದ ಊರಿನ ಅಭಿವೃದ್ಧಿ ಕಾರ್ಯಗಳಿಗೆ ದೊಡ್ಡ ಆರ್ಥಿಕ ಶಕ್ತಿಗಳೇ ಇವು.
ಇಷ್ಟಕ್ಕೇ ಮುಗಿದಿಲ್ಲ. ನಿಂತಲ್ಲೇ ನಿಂತು ಇಷ್ಟೆಲ್ಲ ಕೊಡುವ ಹುಣಸೆ ಮರಗಳ ಮುಂದೆ ನಿನ್ನೆ ಮೊನ್ನೆ ಹುಟ್ಟಿದ ರೊಬೋಟ್‌ಗಳು ಕೂಡ ತಲೆ ಭಾಗಿಸಲೇಬೇಕು. ರಾತ್ರಿಯೆಲ್ಲ ಅಂತರ್ಜಾಲದಲ್ಲಿ ಕಾಲ ಕಳೆದು, ಮರುದಿನ ಸೂರ್ಯ ನೆತ್ತಿಗೆ ಬರೋವರೆಗೂ ಮಲಗಿರುವ ನಮ್ಮೂರ ತರುಣರನ್ನು ನಸುಕಿನಲ್ಲಿ ತನ್ನ ತಂಪಿನ ವಾತಾವರಣದಲ್ಲಿ ವ್ಯಾಯಾಮ ಮಾಡಿ ಬೆವರು ಹರಿಸಲು ಕರೆಯುತ್ತವೆ. ವೃದ್ಧರು ಗಿಡದ ಬದಿಗೆ ಕುಳಿತು ಪ್ರಾಣಾಯಾಮ ಮಾಡಲು ಕೂಡ. ಚಿಕ್ಕ ಮಕ್ಕಳನ್ನು ಜಿಂಕೆಯಂತೆ ಓಡಾಡಲೂ, ಗೃಹಿಣಿಯರನ್ನು ಧ್ಯಾನ ಮಾಡಲು ಪ್ರೇರೇಪಿಸುತ್ತವೆ. ನಮ್ಮ ಊರಿಗೆ ಯಾರಾದರೂ ಹೊಸಬರು ಬಂದರೆ ಈ ಮರಗಳಿಗೆ ಅಭಿಮಾನಿಯಾಗದೆ ಹೋಗಲು ಸಾಧ್ಯವೇ ಇಲ್ಲ. ಸಂಬಂಧಿಕರಂತೆ ನಮ್ಮೂರಿನ ನಾಗರಿಕರು ಈ ಮರಗಳನ್ನು ನೋಡಿಕೊಳ್ಳುತ್ತಿದ್ದಾರೆ. ಸಾಲು ಸಾಲು ಮರಗಳ ನೆಟ್ಟು, ನಮ್ಮೆಲ್ಲರಿಗೆ ಹಸಿರ ಸಾಲ ಕೊಟ್ಟ ಹಿರಿಯರ ಅಸಲನ್ನು ತೀರಿಸಲಾಗದಿದ್ದರೂ, ರಕ್ಷಿಸುವ ಮೂಲಕ ಬಡ್ಡಿಯನ್ನಾದರೂ ತೀರಿಸುವ ಪ್ರಯತ್ನ ಮಾಡೋಣ.
ಅಮೋಘ ಸಾಂಬಯ್ಯ ಹಿರೇಮಠ
ಕೆಎಲ್‌ಇ ಮಹಾವಿದ್ಯಾಲಯ ಸಂಶಿ