Advertisement

ಸಭಾಪತಿ ಸ್ಥಾನ: ಮೈತ್ರಿಯಲ್ಲಿ ಮುಸುಕಿನ ಗುದ್ದಾಟ

10:18 AM Oct 12, 2018 | |

ಬೆಂಗಳೂರು: ವಿಧಾನಪರಿಷತ್‌ ಸಭಾಪತಿ ಸ್ಥಾನಕ್ಕೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್‌-ಜೆಡಿಎಸ್‌ನಲ್ಲಿ ಹಗ್ಗ ಜಗ್ಗಾಟ ಇನ್ನೂ ಮುಂದುವರೆದಿದ್ದು, ಸಭಾಪತಿ ಆಯ್ಕೆಗೆ ಒಂದು ದಿನದ ವಿಶೇಷ ಅಧೀವೇಶನ ಕರೆಯಬೇಕೆಂಬ ಪ್ರಸ್ತಾಪ ಕೇಳಿ ಬಂದಿದೆ.

Advertisement

ಕಾಂಗ್ರೆಸ್‌ನ ಮಾಜಿ ಸಚಿವ ಎಸ್‌.ಆರ್‌.ಪಾಟೀಲ್‌ ಅವರಿಗೆ ಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಪಟ್ಟು ಹಿಡಿದಿದ್ದಾರೆ. ಮೇಲ್ಮನೆಯಲ್ಲಿ ಕಾಂಗ್ರೆಸ್‌ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವಷ್ಟು ಸದಸ್ಯ ಬಲ ಹೊಂದಿರುವುದರಿಂದ ಸಭಾಪತಿ ಸ್ಥಾನವನ್ನು ಕಾಂಗ್ರೆಸ್‌ ಪಡೆಯಬೇಕು ಎಂಬ ವಾದ ಮುಂದಿಟ್ಟಿದ್ದಾರೆ ಎಂದು ಹೇಳಲಾಗಿದೆ.

ಮಂತ್ರಿಮಂಡಲ ವಿಸ್ತರಣೆ ಸಂದರ್ಭದಲ್ಲಿ ಮೇಲ್ಮನೆ ಸದಸ್ಯರಿಗೂ ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆ ಹೆಚ್ಚಿರುವುದರಿಂದ ಎಸ್‌.ಆರ್‌.ಪಾಟೀಲ್‌ಗೆ ಸಭಾಪತಿ ಸ್ಥಾನ ನೀಡಿ ಸಮಾಧಾನ ಪಡಿಸಬಹುದು ಎಂಬ ಲೆಕ್ಕಾಚಾರವೂ ಕಾಂಗ್ರೆಸ್‌ನಲ್ಲಿದೆ ಎಂದು ತಿಳಿದು ಬಂದಿದೆ.

ಬಸವರಾಜ್‌ ಹೊರಟ್ಟಿಗೆ ಸಚಿವ ಸ್ಥಾನ ನೀಡಲಾಗದೆ ಅವರನ್ನು ಸಭಾಪತಿ ಮಾಡಿ ಸಮಾಧಾನ ಪಡಿಸಲು ಮುಂದಾಗಿದ್ದ ಮಾಜಿ ಪ್ರಧಾನಿ ದೇವೇಗೌಡರು, ಕಾಂಗ್ರೆಸ್‌ನ ಒತ್ತಾಯದಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಸಭಾಪತಿ ಸ್ಥಾನ ಕಾಂಗ್ರೆಸ್‌ಗೆ ಬಿಟ್ಟು ಕೊಡುವ ಪ್ರಸಂಗ ಬಂದರೆ ಬಸವರಾಜ ಹೊರಟ್ಟಿಗೆ ಸಚಿವ ಸ್ಥಾನ ನೀಡುವ ಅನಿವಾರ್ಯತೆ ಎದುರಾಗಲಿದೆ.

ಅಸಮಾಧಾನ: ಇತ್ತೀಚೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ, ಸಭಾಪತಿ ಬಸವರಾಜ ಹೊರಟ್ಟಿಯವರನ್ನೂ ಆ ಸಭೆಗೆ ಆಹ್ವಾನಿಸಿದ್ದರು. ಆ ಸಭೆಗೆ ದೇವೇಗೌಡರು ಹಾಜರಾಗಿದ್ದರು. ವರ್ಗಾವಣೆ ಸೇರಿದಂತೆ ಅನೇಕ ವಿಷಯಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಹಾಲಿ ಸಚಿವರು ವಿಫ‌ಲವಾಗಿದ್ದು, ಶಿಕ್ಷಕರ ವರ್ಗ ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಹಾಲಿ ಶಿಕ್ಷಣ ಸಚಿವರ ಖಾತೆಯನ್ನು ಬದಲಾಯಿಸುವ ಕುರಿತು ದೇವೇಗೌಡರು ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿದ್ದರು ಎಂದು ತಿಳಿದು ಬಂದಿದೆ. ಇದಾದ ಮೂರು ದಿನಗಳಲ್ಲಿ ಮಹೇಶ್‌ ರಾಜೀನಾಮೆ ನೀಡಿದ್ದಾರೆ.

Advertisement

ಈಗ ವಿಧಾನಪರಿಷತ್‌ ಸಭಾಪತಿ ಸ್ಥಾನಕ್ಕಾಗಿ ಕಾಂಗ್ರೆಸ್‌ನವರು ಪಟ್ಟು ಹಿಡಿದರೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆ ಬಸವರಾಜ ಹೊರಟ್ಟಿಗೆ ನೀಡುವ ಬಗ್ಗೆ ಚರ್ಚೆ ನಡೆದಿದೆ. ಆದರೆ, ಬಸವರಾಜ ಹೊರಟ್ಟಿ ಅವರು ಮೊದಲ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ತಮ್ಮನ್ನು ಕಡೆಗಣಿಸಿದ್ದರಿಂದ ತಾವು ಸಭಾಪತಿಯಾಗಿಯೇ ಮುಂದುವರಿಯುವುದಾಗಿ ಹೇಳಿ ಮಂತ್ರಿ ಸ್ಥಾನವನ್ನು ನಯವಾಗಿಯೇ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ಬೆಳಗಾವಿ ಅಧಿವೇಶನದಲ್ಲಿ ಸಭಾಪತಿ ಆಯ್ಕೆ ಸಾಧ್ಯತೆ
ಸಭಾಪತಿ ಆಯ್ಕೆ ಮಾಡಲು ಒಂದು ದಿನದ ವಿಶೇಷ ಅಧಿವೇಶನ ಕರೆಯಲು ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿತ್ತು. ಈ ನಡುವೆ ಐದು ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಆಗಿರುವುದರಿಂದ ಚುನಾವಣೆ ಮುಗಿದ ನಂತರ ನವೆಂಬರ್‌ ಅಂತ್ಯದಲ್ಲಿ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಸಭಾಪತಿ ಆಯ್ಕೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ಮೈತ್ರಿ ಪಕ್ಷಗಳ ಕೆಲವು ಸಚಿವರ ಸ್ಥಾನಗಳು ಬದಲಾಗುವ ಸಾಧ್ಯತೆ ಇರುವುದರಿಂದ ಬಸವರಾಜ ಹೊರಟ್ಟಿ ಸಂಪುಟಕ್ಕೆ ಸೇರ್ಪಡೆಯಾಗಿ ಎಸ್‌.ಆರ್‌. ಪಾಟೀಲರಿಗೆ ಸಭಾಪತಿ ಸ್ಥಾನ ನೀಡುವ ಸಾಧ್ಯತೆ  ಇದೆ ಎಂದು ಹೇಳಲಾಗಿದೆ.

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next