Advertisement
ಪೋಷಣ ಅಭಿಯಾನವು ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ. ಇದರ ಅನುಷ್ಠಾನಕ್ಕಾಗಿ ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಜಿಲ್ಲಾ ಸಂಯೋಜಕರು ಹಾಗೂ ಪ್ರತೀ ಶಿಶು ಅಭಿವೃದ್ಧಿ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಸಂಯೋಜಕರ ಸಹಿತ 300ಕ್ಕೂ ಅಧಿಕ ಸಿಬಂದಿ ಕಾರ್ಯನಿರ್ವ ಹಿಸುತ್ತಿದ್ದು, ರಾಜ್ಯಾದ್ಯಂತ ಯಾರಿಗೂ ವೇತನ ಲಭಿಸಿಲ್ಲ.
2018ರಲ್ಲಿ ಪೋಷಣ ಅಭಿಯಾನ ಆರಂಭವಾದಂದಿನಿಂದಲೂ ಇದೇ ರೀತಿ ವೇತನ ಸಮಸ್ಯೆ ಎದುರಿಸುತ್ತಿದ್ದು, 5-6 ತಿಂಗಳಿಗೊಮ್ಮೆ ವೇತನ ಪಡೆಯುವ ಸ್ಥಿತಿ ಇದೆ. ಪ್ರಸ್ತುತ 2023ರ ಮಾರ್ಚ್‌ನಿಂದ ಬಿಡಿಗಾಸು ವೇತನವಿಲ್ಲದೆ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಅನುದಾನ ಬಂದಂತೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ವೇತನ ಪಾವತಿಯಾಗುತ್ತದೆ. ಆದರೆ ಪ್ರಸ್ತುತ ಅನುದಾನ ಬಾರದೆ ವೇತನವೂ ಇಲ್ಲವಾಗಿದೆ. ಅಭಿಯಾನದ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಇವರು ಹಲವೆಡೆ ಓಡಾಟ ನಡೆಸಬೇಕಾಗುತ್ತದೆ. ಹೀಗಾಗಿ ಅವರಿಗೆ ಪ್ರಯಾಣ ಭತ್ತೆ ಪಡೆಯುವ ಅವಕಾಶವಿದೆ. ಆದರೆ 2 ವರ್ಷಗಳಿಂದ ಅದೂ ಸಿಗುತ್ತಿಲ್ಲ.
Related Articles
ಅಪೌಷ್ಟಿಕತೆ ತಡೆಗಟ್ಟಲು ಅಂಗನವಾಡಿ ಮಟ್ಟದಲ್ಲಿ ಮೊಬೈಲ್ ಅಪ್ಲಿಕೇಶನ್ ಮೂಲಕ ನೋಂದಣಿಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡುವುದು, ಅಭಿಯಾನದ ಕಾರ್ಯ ಚಟುವಟಿಕೆಗಳನ್ನು ಕ್ರೋಡೀಕರಿಸಿ ಪ್ರತೀದಿನ ನಿರ್ವಹಣೆ ಮಾಡುವುದು, ಫಲಾನುಭವಿಗಳ ಆಧಾರ್ ನೋಂದಣಿ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿ ಯರ ಬ್ಯಾಂಕ್ ಖಾತೆಗೆ ಅಳವಡಿಕೆ ಈ ಸಿಬಂದಿಯ ಕರ್ತವ್ಯಗಳಾಗಿವೆ.
Advertisement
ಜತೆಗೆ ಕಾರ್ಯಕರ್ತೆಯರು, ಮೇಲ್ವಿಚಾರಕರಿಗೆ ವಿತರಿಸಲಾದ ಸ್ಮಾರ್ಟ್ ಫೋನ್ ನಿರ್ವಹಣೆ, ಕೇಂದ್ರ-ರಾಜ್ಯ ಸರಕಾರದ ವಿವಿಧ ವರದಿಗಳ ಮಾಹಿತಿ ಕ್ರೋಡೀಕರಣ- ಈ ಎಲ್ಲ ಕರ್ತವ್ಯಗಳ ಮೂಲಕ ಪೋಷಣ ಅಭಿಯಾನದ ಯಶಸ್ಸಿಯಾಗಿ ದುಡಿಯುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಈ ಸಿಬಂದಿ ಆರೋಗ್ಯ ಇಲಾಖೆಯ ಜತೆ ಸೇರಿ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ ವೇತನ ಸಮಸ್ಯೆಯನ್ನು ಪ್ರತೀ ಬಾರಿ ಸರಕಾರದ ಗಮನಕ್ಕೆ ತಂದರೂ ಪರಿಹಾರ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಕರಾವಳಿಯಲ್ಲಿ ಎಷ್ಟು ಮಂದಿ ಬಾಧಿತರು?
ಪೋಷಣ ಅಭಿಯಾನಕ್ಕೆ ಸಂಬಂಧಿಸಿ ದ.ಕ. ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಯೋಜನಾ ಸಂಯೋಜಕ ಹಾಗೂ ಯೋಜನಾ ಸಹಾಯಕ ಎಂಬ 2 ಹುದ್ದೆಗಳು, ಜಿಲ್ಲೆಯ 7 ಯೋಜನಾ (ಸಿಡಿಪಿಒ ಕಚೇರಿ) ಕಚೇರಿಗಳಲ್ಲಿ ತಲಾ ಒಬ್ಬೊಬ್ಬರು ಸಂಯೋಜಕರು (ಬ್ಲಾಕ್ ಕೋಆರ್ಡಿನೇಟರ್) ಸೇರಿ ಒಟ್ಟು 9 ಮಂದಿ ಇದ್ದಾರೆ. ಉಡುಪಿ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಯೋಜನಾ ಸಂಯೋಜಕ ಹಾಗೂ ಯೋಜನಾ ಸಹಾಯಕ ಎಂಬ 2 ಹುದ್ದೆಗಳು, ಜಿಲ್ಲೆಯ 4 ಯೋಜನಾ (ಸಿಡಿಪಿಒ ಕಚೇರಿ) ಕಚೇರಿಗಳಲ್ಲಿ ತಲಾ ಒಬ್ಬೊಬ್ಬರು ಸಂಯೋಜಕರು (ಬ್ಲಾಕ್ ಕೋಆರ್ಡಿನೇಟರ್) ಸೇರಿ ಒಟ್ಟು 6 ಮಂದಿ ಇದ್ದಾರೆ. ಹಿಂದೆ ಸಿಡಿಪಿಒ ಕಚೇರಿ ವ್ಯಾಪ್ತಿ ಯಲ್ಲೂ ಸಹಾಯಕರಿದ್ದು, ಆದರೆ ಕಳೆದ ವರ್ಷದಿಂದ ಆ ಹುದ್ದೆಯನ್ನು ತೆಗೆದುಹಾಕಲಾಗಿದೆ. ಕಳೆದ ವರ್ಷ ಇದೇ ಸಿಬಂದಿಗೆ 9 ತಿಂಗಳವರೆಗೂ ವೇತನ ಆಗದೆ, ಬಳಿಕ ಅನುದಾನ ಬಿಡುಗಡೆಗೊಂಡು ವೇತನ ನೀಡಲಾಗಿತ್ತು. ಕೇಂದ್ರದಿಂದ ಬಜೆಟ್ ವಿಳಂಬವಾಗಿರುವ ಕಾರಣ ಪೋಷಣ ಅಭಿಯಾನ ಸಿಬಂದಿಯ ವೇತನ ಸಮಸ್ಯೆ ಇದೆ. ಕೇಂದ್ರದಿಂದ ಅನುದಾನವು ನಿರಂತರ ಪ್ರಕ್ರಿಯೆಯಾಗಿರುವುದಿಂದ ವಿಳಂಬವಾದರೂ ಬಂದೇ ಬರುತ್ತದೆ. ವೇತನ ಸಮಸ್ಯೆಯ ಕುರಿತು ಈಗಾಗಲೇ ಜಿ.ಪಂ. ಸಿಇಒ ಅವರ ಮೂಲಕ ಪತ್ರ ಬರೆಯಲಾಗಿದೆ.
– ಪಾಪ ಭೋವಿ ಟಿ., ಬಿ.ಎಚ್. ಕೃಷ್ಣಪ್ಪ
ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ದ.ಕ., ಉಡುಪಿ -ಕಿರಣ್ ಸರಪಾಡಿ