Advertisement

ಪೋಷಣ್‌ ಅಭಿಯಾನ್‌ ಸಿಬಂದಿಗೆ ಆರ್ಥಿಕ ಅಪೌಷ್ಟಿಕತೆ!

10:20 PM Jan 20, 2022 | Team Udayavani |

ಕುಂದಾಪುರ: ಕೇಂದ್ರ ಸರಕಾರದ ರಾಷ್ಟ್ರೀಯ ಪೋಷಣ್‌ ಅಭಿಯಾನದಲ್ಲಿ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 490 ಉದ್ಯೋಗಿಗಳಿಗೆ 6 ತಿಂಗಳಿನಿಂದ ವೇತನ ಆಗಿಲ್ಲ. ಪೌಷ್ಟಿಕ ಅಭಿಯಾನದ ಸಿಬಂದಿಗೇ “ಆರ್ಥಿಕ ಅಪೌಷ್ಟಿಕತೆ’ ಬಂದಂತಾಗಿದ್ದು, ಸಂಸಾರ ನಿರ್ವಹಣೆಗಾಗಿ ಕೆಲವರು ಬದಲಿ ಉದ್ಯೋಗದ ಮೊರೆ ಹೋಗಿದ್ದಾರೆ.

Advertisement

ಪೋಷಣ್‌ ಅಭಿಯಾನ :

ಗರ್ಭಧಾರಣೆಯಿಂದ ಆರಂಭಿಸಿ ಶಿಶು ಮತ್ತು ತಾಯಂದಿರು 1,000 ದಿನಗಳ ಕಾಲ ಉತ್ತಮ ಪೌಷ್ಟಿಕ ಆಹಾರ ಪಡೆದು, ಆರೋಗ್ಯವಂತ ರನ್ನಾಗಿಸುವ ಉದ್ದೇಶದಿಂದ ಕೇಂದ್ರ ಸರಕಾರ ಜಾರಿಗೆ ತಂದಿರುವ ಯೋಜನೆಯೇ ಪೋಷಣ್‌ ಅಭಿಯಾನ. ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಜತೆಗೆ ರಕ್ತ ಹೀನತೆ, ಅತಿಸಾರ ಭೇದಿ ತಡೆಗಟ್ಟುವ ಮೂಲಕ ತಾಯಿ ಮತ್ತು ಶಿಶುವಿನ ಆರೋಗ್ಯ ಉತ್ತಮವಾಗಿರಿಸುವುದು ಮುಖ್ಯ ಉದ್ದೇಶ.

ಸಿಬಂದಿ:

ಅಭಿಯಾನದ ಯಶಸ್ಸಿಗಾಗಿ ಪ್ರತೀ ತಾಲೂಕಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಇಬ್ಬರು ಸಿಬಂದಿ ಇರುತ್ತಾರೆ. ತಾಲೂಕು ಸಂಯೋಜಕರು ಅಂತೆಯೇ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಸಂಯೋಜಕರು. ಒಬ್ಬರು ಡಾಟಾ ಎಂಟ್ರಿ ಆಪರೇಟರ್‌. ರಾಜ್ಯಾದ್ಯಂತ 65,911 ಅಂಗನವಾಡಿ ಗಳಿದ್ದು ಅವರ ವ್ಯಾಪ್ತಿಯ ಕೇಂದ್ರಗಳಿಗೆ ತೆರಳಿ ಅಪೌಷ್ಟಿ ಕತೆ ಹಾಗೂ ಪೋಷಣ್‌ ಅಭಿಯಾನ ಕುರಿತು ಮಾಹಿತಿ ನೀಡಬೇಕು. ಅಪೌಷ್ಟಿಕತೆ ಯಿಂದ ಬಳಲುವ ಮಕ್ಕಳಿ ದ್ದಲ್ಲಿ ಮನೆಗೆ ತೆರಳಿ ಮಾಹಿತಿ ನೀಡುವುದು, ಅಂತಹ ಮಕ್ಕಳಿಗೆ ದೊರೆಯುವ ಸೌಲಭ್ಯ, ಚಿಕಿತ್ಸೆ ಇತ್ಯಾದಿಗೆ ಏರ್ಪಾಡು ಮಾಡುವುದು ಸೇರಿದಂತೆ ಅನೇಕ ಕೆಲಸಗಳನ್ನು ಅವರಿಗೆ ವಹಿಸಲಾಗಿದೆ.

Advertisement

ವೇತನ :

ಅಭಿಯಾನದ ಯಶಸ್ಸಿಗೆ ದೊಡ್ಡಪಾಲು ಅನುದಾನವನ್ನು ಕೇಂದ್ರ ನೀಡುತ್ತದೆ. ಸಿಬಂದಿ ನೇರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ವಾರ್ಷಿಕ ನೇಮಕಾತಿ ನಡೆಯುತ್ತದೆ. ಕಳೆದ ಮಾರ್ಚ್‌ ವೇಳೆಗೆ ಕರಾರು ಮುಗಿದಿದ್ದು ಕೇಂದ್ರ ಸರಕಾರ ಜೂನ್‌ ವರೆಗೆ ವಿಸ್ತರಿಸಿತ್ತು. ಹಾಗಿದ್ದರೂ ಈ ಮಾರ್ಚ್‌ ವರೆಗೆ ಅದೇ ನೌಕರರು ಕರ್ತವ್ಯ ನಿರ್ವಹಿಸಿಲಿದ್ದು ಜೂನ್‌ನಿಂದ ಕೇಂದ್ರದಿಂದ ವೇತನಕ್ಕೆ ಅನುದಾನ ಬಂದಿಲ್ಲ. ವಿಮೆ ಇಲ್ಲದೇ, ಉದ್ಯೋಗ ಭದ್ರತೆ ಇಲ್ಲದೇ ಕೋವಿಡ್‌ ಸಂದರ್ಭದಲ್ಲೂ ಕರ್ತವ್ಯ ನಿರ್ವಹಿಸಿಯೂ 6 ತಿಂಗಳಿಂದ ವೇತನಕ್ಕಾಗಿ ಪರದಾಡುತ್ತಿದ್ದಾರೆ.  ಅವರ ವೇತನ ಪಾವತಿಗೆ ಕೇಂದ್ರದ ನೆರವು ಬರುವವರೆಗೆ ಕಾಯದೆ ರಾಜ್ಯ ಸರಕಾರ ತುರ್ತಾಗಿ ಆರ್ಥಿಕ ನೆರವು ನೀಡುವ ಅಗತ್ಯವಿದೆ.

ವಿಶ್ವ ಬ್ಯಾಂಕ್‌ ನೆರವು :

2018ರಿಂದ ಕೇಂದ್ರ ಸರಕಾರಕ್ಕೆ ಪೋಷಣ್‌ ಅಭಿಯಾನಕ್ಕೆ ವಿಶ್ವಬ್ಯಾಂಕ್‌ ನೆರವು ನೀಡುತ್ತಿದ್ದು 200 ಮಿಲಿಯ ಡಾಲರ್‌ ಸಾಲ ನೀಡಿದೆ. ಅದು 2022 ಆಗಸ್ಟ್‌ಗೆ ಅಂತ್ಯವಾಗಲಿದೆ. ಕೋವಿಡ್‌ ಹಿನ್ನೆಲೆಯಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗದ ಕಾರಣ ಯೋಜನೆಯ ಗುರಿಯನ್ನು ನವೀಕರಿಸಲಾಗಿದ್ದು ಕಳೆದ ನವಂಬರ್‌ನಿಂದ ಬದಲಿಸಲು ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಹೀಗೆ ಬದಲಾದ ಗುರಿ ಸಾಧಿಸಬೇಕಾದ 11 ರಾಜ್ಯಗಳ ಸಾಲಿನಲ್ಲಿ ಕರ್ನಾಟಕವೂ  ಇದೆ. 2020ರಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ ಫೋನ್‌ ನೀಡಲು ಕೇಂದ್ರ ಸರಕಾರದಿಂದ 129.7 ಕೋ. ರೂ. ಅನುದಾನ ಬಂದಿತ್ತು.

ವೇತನ ಪಾವತಿಗೆ ತಡೆಯಾದ ಕುರಿತು ತತ್‌ಕ್ಷಣ ಗಮನ ಹರಿಸಿ ಕ್ರಮ ಕೈಗೊಳ್ಳುತ್ತೇನೆ.– ಹಾಲಪ್ಪ ಆಚಾರ್‌,ಸಚಿವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಪೋಷಣ್‌ ಅಭಿಯಾನ ವೇತನ ಪಾವತಿಗೆ ಕೇಂದ್ರ ಸರಕಾರದಿಂದ ಈ ಆರ್ಥಿಕ ವರ್ಷದ ಅನುದಾನ ಇನ್ನೂ ಬಂದಿಲ್ಲ. ಶೀಘ್ರ ಬಿಡುಗಡೆಯ ಭರವಸೆ ಬಂದಿದೆ.  – ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next