Advertisement
ತನಗೊದಗಿದ ದುರವಸ್ಥೆಗೆ ರಾಜಕುಮಾರಿಯು ದುಃಖಿಸುತ್ತ ಒಂಟಿಯಾಗಿ ಕಾಲ ಕಳೆಯುತ್ತಿದ್ದಳು. ಒಂದು ದಿನ ಅವಳಿರುವ ಗೋಪುರದ ಬಳಿಗೆ ಒಬ್ಬ ರಾಜಕುಮಾರ ಬಂದ. ಕಿಟಕಿಯಿಂದ ನೆಲದ ತನಕ ಇಳಿಬಿದ್ದಿರುವ ರಾಜಕುಮಾರಿಯ ತಲೆಗೂದಲನ್ನು ನೋಡಿದ. ಕುತೂಹಲದಿಂದ ಆ ಕೂದಲನ್ನೇ ಹಗ್ಗದ ಹಾಗೆ ಹಿಡಿದುಕೊಂಡು ಮೇಲೇರುತ್ತ ರಾಜಕುಮಾರಿಯ ಬಳಿಗೆ ತಲುಪಿದ. ಅವಳನ್ನು ಮಾತನಾಡಿಸಿ, ಅವಳಿಗೊದಗಿದ ಕಷ್ಟದ ಕತೆಯನ್ನು ಕೇಳಿ ತಿಳಿದುಕೊಂಡ. “”ದುಃಖಿಸಬೇಡ. ನಾನು ನಿನ್ನನ್ನು ನಾಳೆ ಬಂದು ಅರಮನೆಗೆ ಕರೆದೊಯ್ದು ಮದುವೆ ಮಾಡಿಕೊಳ್ಳುತ್ತೇನೆ. ಒಂದು ಹಗ್ಗವನ್ನು ತಂದು ಗೋಪುರದ ಮೇಲ್ಭಾಗಕ್ಕೆ ಎಸೆಯುತ್ತೇನೆ. ಅದರ ಆಧಾರದಿಂದ ಕೆಳಗಿಳಿದು ಬಾ” ಎಂದು ಹೇಳಿದ. ರಾಜಕುಮಾರಿ ಸಂತೋಷದಿಂದ ಒಪ್ಪಿಕೊಂಡಳು.
Related Articles
Advertisement
ಸೇವಕಿ ಒಂದು ಪಕ್ಷಿಯಾಗಿ ಮರಳುಭೂಮಿಯನ್ನು ದಾಟಿ ಮತ್ತೆ ರಾಜಕುಮಾರನ ಬಳಿಗೆ ಹೋದಳು. ರಾಜಕುಮಾರಿ ಸೀಸೆಯಲ್ಲಿದ್ದ ಮಂತ್ರಿಸಿದ ನೀರನ್ನು ಚೆಲ್ಲಿದಾಗ ಪ್ರವಾಹ ತುಂಬಿದ ನದಿಯೊಂದು ಸೃಷ್ಟಿಯಾಯಿತು. ಅದನ್ನು ಒಂದು ಮೀನಿನ ರೂಪದಲ್ಲಿ ಸೇವಕಿ ದಾಟಿದಳು. ಆಗ ರಾಜಕುಮಾರನು ತನ್ನ ರಾಜ್ಯವನ್ನು ತಲುಪಿದ್ದ. ರಾಜಕುಮಾರಿಯೊಂದಿಗೆ, “”ಇಲ್ಲಿಯೇ ಒಂದು ಕೊಳದ ಬಳಿ ದಟ್ಟವಾದ ಮರವಿದೆ. ನೀನು ಮರದ ಮೇಲೆ ಹತ್ತಿ ಯಾರಿಗೂ ಕಾಣದ ಹಾಗೆ ಕುಳಿತಿರು. ನಾನು ಅರಮನೆಗೆ ಹೋಗಿ ನಿನ್ನ ಸ್ವಾಗತಕ್ಕೆ ದಾಸಿಯರನ್ನು ಕರೆತರುತ್ತೇನೆ” ಎಂದು ಹೇಳಿದ. ರಾಜಕುಮಾರಿ ಮರದ ಮೇಲೆ ಕುಳಿತ ಬಳಿಕ ಅರಮನೆಯೆಡೆಗೆ ಹೊರಟುಹೋದ.
ರಾಜಕುಮಾರಿಯನ್ನು ಹುಡುಕುತ್ತ ಸೇವಕಿ ಅದೇ ಮರದ ಬಳಿಗೆ ಬಂದಳು. ಅವಳು ಕೊಳದಲ್ಲಿ ಅಡಗಿರಬಹುದೆಂಬ ಶಂಕೆಯಲ್ಲಿ ಒಂದು ಮಣ್ಣಿನ ಕೊಡ ತಂದು ನೀರು ತೆಗೆದಳು. ಆಗ ಮರದ ಮೇಲಿದ್ದ ರಾಜಕುಮಾರಿಗೆ ಕೊಡದ ನೀರಿನಲ್ಲಿ ತನ್ನ ಪ್ರತಿಬಿಂಬ ಕಾಣುತ್ತಿರುವುದು ಗೊತ್ತಾಯಿತು. ಮರದಿಂದ ಒಂದು ಕಾಯಿಯನ್ನು ಗುರಿಯಿಟ್ಟು ಹೊಡೆದು ಕೊಡವನ್ನು ಒಡೆದು ಹಾಕಿದಳು. ಇದ್ದಕ್ಕಿದ್ದಂತೆ ಕೊಡ ಒಡೆದುದು ಕಂಡು ಸೇವಕಿಗೆ ಅನುಮಾನ ಬಲವಾಯಿತು. ಮತ್ತೆ ತಾಮ್ರದ ಕೊಡ ತಂದು ನೀರು ತುಂಬಿದಳು. ತಾಮ್ರದ ಕೊಡವನ್ನು ಒಡೆಯಲು ರಾಜಕುಮಾರಿಗೆ ಸಾಧ್ಯವಾಗಲಿಲ್ಲ. ಕೊಡದ ನೀರಿನಲ್ಲಿ ಮರದ ಮೇಲಿರುವ ರಾಜಕುಮಾರಿಯ ಮುಖ ಸರಿಯಾಗಿ ಕಾಣಿಸಿತು. ನೇತಾಡುತ್ತಿದ್ದ ರಾಜಕುಮಾರಿಯ ಜಡೆ ಹಿಡಿದು ಕೆಳಗೆ ಎಳೆದು ಹಾಕಿದಳು. ಅವಳ ನೆತ್ತಿಯ ಕೂದಲಿಗೆ ಒಂದು ಕಡ್ಡಿಯನ್ನು ಚುಚ್ಚಿದಳು. ಮರುಕ್ಷಣವೇ ರಾಜಕುಮಾರಿ ಒಂದು ಪಾರಿವಾಳವಾಗಿ ಬದಲಾಯಿಸಿದಳು. “”ನಾನು ಸೌಂದರ್ಯವತಿ ಎಂಬ ಅಹಂಕಾರದಿಂದ ಮೆರೆಯುತ್ತಿದ್ದೆಯಲ್ಲವೆ? ಈಗ ನೋಡು, ನಿನ್ನ ರೂಪವನ್ನು ನಾನು ಹೊಂದುತ್ತಿದ್ದೇನೆ. ನಿನ್ನವನಾಗಬೇಕಿದ್ದ ರಾಜಕುಮಾರನ ಕೈಹಿಡಿದು ಸುಖವಾಗಿರುತ್ತೇನೆ. ನೀನು ಶಾಶ್ವತವಾಗಿ ಪಾರಿವಾಳವಾಗಿ ಅಲೆಯುತ್ತಿರು. ಅರಮನೆಗೆ ಬಂದರೆ ನನ್ನ ಮಧ್ಯಾಹ್ನದ ಊಟದ ಖಾದ್ಯವಾಗಿರು” ಎಂದು ಹೇಳಿ ಹಾರಲು ಬಿಟ್ಟಳು.
ಸೇವಕಿ ರಾಜಕುಮಾರಿಯಾದಳು. ಮರದ ಮೇಲೆ ಹತ್ತಿ ಕುಳಿತಳು. ರಾಜಕುಮಾರ ಅವಳ ಸ್ವಾಗತಕ್ಕೆ ದಾಸಿಯರನ್ನು ಕೂಡಿಕೊಂಡು ಬಂದ. ಮೇನೆಯಲ್ಲಿ ಕುಳಿತುಕೊಂಡು ಸೇವಕಿ ಅರಮನೆಗೆ ಹೋದಳು. ಅವಳೊಂದಿಗೆ ತನ್ನ ವಿವಾಹ ನಡೆಸಲು ರಾಜಕುಮಾರ ಅದ್ದೂರಿಯ ಏರ್ಪಾಡು ಮಾಡಿದ. ಮಧ್ಯ ರಾತ್ರೆ ಅವನ ಮನಸ್ಸಿಗೆ ತನ್ನ ಕೈಹಿಡಿಯುವ ರಾಜಕುಮಾರಿಯ ಸೌಂದರ್ಯವನ್ನು ನೋಡಬೇಕೆಂದು ಅನಿಸಿತು. ಸೇವಕಿ ಮಲಗಿದ್ದ ಕೊಠಡಿಯ ಕಿಟಕಿ ಬಾಗಿಲಿನ ಬಳಿ ನಿಂತು ಮಲಗಿರುವ ಅವಳನ್ನು ನೋಡಿದ. ತನ್ನ ನಿಜರೂಪದಲ್ಲಿ ಮಲಗಿರುವ ಸೇವಕಿಯನ್ನು ಕಂಡಾಗ ಅವನಿಗೆ ದಿಗಿಲಾಯಿತು. ಅಂದಗಾತಿಯೆಂದು ಭಾವಿಸಿ ಕರೆತಂದ ರಾಜಕುಮಾರಿ ಕಪ್ಪು ವರ್ಣದ ಕುರೂಪಿಯೆಂದು ತಿಳಿದಾಗ ಅವನಿಗೆ ಸಹಿಸಲಾಗದ ಕೋಪ ಬಂತು. ಬೆಳಗಾದ ಕೂಡಲೇ ರಾಜಭಟರನ್ನು ಕರೆದ. “”ನಾನು ರಾಜಕುಮಾರಿಯೆಂದು ಕರೆತಂದ ಹುಡುಗಿ ಮನುಷ್ಯಳಲ್ಲ, ಒಂದು ಪಿಶಾಚಿಯೇ ಇರಬೇಕು. ಅವಳನ್ನು ಎಳೆದುಕೊಂಡು ಹೋಗಿ ತಲೆ ಕಡಿದು ಹಾಕಿ” ಎಂದು ಆಜ್ಞಾಪಿಸಿದ.
ಆಗ ರಾಜಕುಮಾರಿಯ ಹಾಗೆ ವೇಷ ಧರಿಸಿದ್ದ ಸೇವಕಿ ರಾಜಕುಮಾರನ ಬಳಿಗೆ ಬಂದಳು. “”ವೃಥಾ ಅನುಮಾನಪಟ್ಟು ಯಾಕೆ ನನ್ನನ್ನು ಕೊಲ್ಲಿಸುತ್ತಿರುವೆ? ನಾನು ಪಿಶಾಚಿಯಲ್ಲ, ನಿನ್ನ ಮನಸ್ಸನ್ನು ಗೆದ್ದಿರುವ ರಾಜಕುಮಾರಿಯೇ. ನೀನು ರಾತ್ರೆ ನೋಡುವಾಗ ಕುರೂಪಿಯಾಗಿ ಕಾಣಿಸಿದೆನಲ್ಲವೆ? ಅದಕ್ಕೆ ಕಾರಣ ಮಂತ್ರವಾದದಿಂದ ನನಗೆ ದುರ್ಗತಿ ತಂದುಹಾಕಿದ ಆ ಸೇವಕಿ. ಅವಳು ನಿನ್ನೆ ಒಂದು ಪಾರಿವಾಳವಾಗಿ ನನ್ನ ಬಳಿಗೆ ಬಂದು ರಾತ್ರೆಯಿಡೀ ನೀನು ಕುರೂಪಿಯಾಗಿದ್ದು ರಾಜಕುಮಾರನಿಂದ ಶಿಕ್ಷೆ ಪಡೆಯುವಂತೆ ಮಾಡುತ್ತೇನೆ ಎಂದು ಶಪಥ ಮಾಡಿಹೋದಳು. ಅವಳನ್ನು ಹುಡುಕಿಸಿ ಕರೆತಂದು ಕೊಂದು ಖಾದ್ಯ ತಯಾರಿಸಿ ತಿಂದರೆ ನನಗೆ ಯಾವ ತೊಂದರೆಯೂ ಬರುವುದಿಲ್ಲ” ಎಂದು ಹೇಳಿದಳು.
ರಾಜಕುಮಾರ ಭಟರನ್ನು ಕರೆದು ಪಾರಿವಾಳ ಎಲ್ಲಿದ್ದರೂ ಹುಡುಕಿ ತರಲು ಹೇಳಿದ. ಭಟರು ಉದ್ಯಾನದ ಬಳಿ ಕುಳಿತು ದುಃಖೀಸುತ್ತಿದ್ದ ಅದನ್ನು ಸುಲಭವಾಗಿ ಹಿಡಿದುತಂದರು. ತುಂಬ ಸುಂದರವಾಗಿದ್ದ ಪಾರಿವಾಳವನ್ನು ಕೊಲ್ಲಲು ರಾಜಕುಮಾರನಿಗೆ ಮನಸ್ಸು ಬರಲಿಲ್ಲ. ಅದನ್ನು ಹಿಡಿದು ಪ್ರೀತಿಯಿಂದ ತಲೆಯನ್ನು ನೇವರಿಸಿದ. ಆಗ ಸೇವಕಿ ಅದರ ನೆತ್ತಿಯಲ್ಲಿರಿಸಿದ್ದ ಕಡ್ಡಿ ಕೆಳಗೆ ಬಿದ್ದು ಸುಂದರವಾದ ರಾಜಕುಮಾರಿ ಅಲ್ಲಿ ನಿಂತಿದ್ದಳು. ರಾಜಕುಮಾರ ವಿಸ್ಮಯದಿಂದ, “”ಏನಿದು, ಪಾರಿವಾಳವಾಗಿದ್ದ ನೀನು ರಾಜಕುಮಾರಿಯಾಗಿ ಮೋಸ ಮಾಡುತ್ತಿದ್ದೀಯಾ?” ಎಂದು ಕೇಳಿದ.
ರಾಜಕುಮಾರಿಯು,”” ಅಸಲು ರಾಜಕುಮಾರಿ ಯಾರು ಎಂದು ತಿಳಿಯಲು ಒಂದು ಸಲ ನಿನ್ನ ಕೈಯಿಂದ ಇಬ್ಬರನ್ನೂ ಮುಟ್ಟು. ನಿನ್ನ ಪ್ರೀತಿಯ ಬಲದಿಂದ ನಿಜವಾದ ರಾಜಕುಮಾರಿ ಉಳಿಯುತ್ತಾಳೆಂದು ಯಕ್ಷಿಣಿಯೊಬ್ಬಳು ನನಗೆ ವರ ನೀಡಿದ್ದಾಳೆ” ಎಂದಳು. ರಾಜಕುಮಾರ ಸ್ಪರ್ಶಿಸಿದಾಗ ಕಪಟ ರಾಜಕುಮಾರಿಯಾಗಿ ಮೋಸ ಮಾಡಿದ್ದ ಮಂತ್ರವಾದಿನಿ ಸೇವಕಿಯು ಸುಟ್ಟು ಬೂದಿಯಾದಳು. ನಿಜವಾದ ರಾಜಕುಮಾರಿ ಇನ್ನಷ್ಟು ಚೆಲುವೆಯಾಗಿ ಕಂಗೊಳಿಸಿದಳು. ರಾಜಕುಮಾರ ಅವಳನ್ನು ಮದುವೆಯಾಗಿ ಸುಖವಾಗಿದ್ದ.
ಪ. ರಾಮಕೃಷ್ಣ ಶಾಸ್ತ್ರಿ