ಅಂಡಮಾನ್/ನಿಕೋಬಾರ್: ಅಂಡಮಾನ್ ನಿಕೋಬಾರ್ (Andaman and Nicobar)ನ ರಾಜಧಾನಿ ಪೋರ್ಟ್ ಬ್ಲೇರ್ (Port Blair) ಹೆಸರು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಪೋರ್ಟ್ ಬ್ಲೇರ್ ಹೆಸರು ಇನ್ಮುಂದೆ ಶ್ರೀವಿಜಯಪುರಂ ಆಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಎಕ್ಸ್ ಖಾತೆಯಲ್ಲಿ ಘೋಷಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಜೀ ಅವರ ದೂರದೃಷ್ಟಿಯಂತೆ ಬ್ರಿಟಿಷ್ ವಸಾಹತುಶಾಹಿ ಹೆಸರುಗಳಿಂದ ದೇಶವನ್ನು ಮುಕ್ತಗೊಳಿಸಬೇಕೆಂಬ ಆಶಯದ ಹಿನ್ನೆಲೆಯಲ್ಲಿ ಪೋರ್ಟ್ ಬ್ಲೇರ್ (Port Blair) ಹೆಸರನ್ನು ಶ್ರೀವಿಜಯಪುರಂ ಎಂದು ಪುನರ್ ನಾಮಕರಣ ಮಾಡಲು ಶುಕ್ರವಾರ (ಸೆ.13) ನಿರ್ಧರಿಸಿರುವುದಾಗಿ ಶಾ ತಿಳಿಸಿದ್ದಾರೆ.
ಪೋರ್ಟ್ ಬ್ಲೇರ್ ವಸಾಹತುಶಾಹಿ ಪಳೆಯುಳಿಕೆಯ ಹೆಸರಾಗಿದೆ. ಶ್ರೀವಿಜಯಪುರಂ ನಮ್ಮ ಸ್ವಾತಂತ್ರ್ಯ ಹೋರಾಟದ ವಿಜಯದ ಸಂಕೇತದ ಹೆಸರಾಗಿದೆ. ಅದೇ ರೀತಿ ಅಂಡಮಾನ್ -ನಿಕೋಬಾರ್ ದ್ವೀಪದ ಪಾತ್ರವು ವಿಶಿಷ್ಟವಾಗಿದೆ ಎಂದು ಶಾ ತಿಳಿಸಿದ್ದಾರೆ.
ನೇತಾಜಿ ಸುಭಾಶ್ಚಂದ್ರ ಬೋಸ್ ಅವರು ಮೊತ್ತ ಮೊದಲ ಬಾರಿಗೆ ತಿರಂಗಾ ಹಾರಿಸಿದ ಸ್ಥಳ ಇದಾಗಿದೆ. ಅಷ್ಟೇ ಅಲ್ಲ ದೇಶದ ಸ್ವಾತಂತ್ರ್ಯಕ್ಕಾಗಿ ವೀರ ಸಾವರ್ಕರ್ ಜೀ ಹಾಗೂ ಇತರ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಲ್ಪಟ್ಟಿದ್ದ ಸೆಲ್ಯುಲರ್ ಜೈಲು ಕೂಡಾ ಈ ನೆಲದಲ್ಲಿದೆ ಎಂದು ಶಾ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ಪೋರ್ಟ್ ಬ್ಲೇರ್ ಹೆಸರು ಹೇಗೆ ಬಂತು?
1789ರಲ್ಲಿ ಬಂಗಾಳ ಸರ್ಕಾರವು ಗ್ರೇಟ್ ಅಂಡಮಾನ್ ನ ಆಗ್ನೇಯ ಕೊಲ್ಲಿಯಲ್ಲಿರುವ ಚಾಥಾಮ್ ದ್ವೀಪದಲ್ಲಿ ದಂಡನೆಯ ವಸಾಹತು (Penal colony) ಸ್ಥಾಪಿಸಿತ್ತು. ಇದಕ್ಕೆ ಈಸ್ಟ್ ಇಂಡಿಯಾ ಕಂಪನಿ(East India Company)ಯ ಆರ್ಚಿಬಾಲ್ಡ್ ಬ್ಲೇರ್ ಗೌರವಾರ್ಥವಾಗಿ ಪೋರ್ಟ್ ಬ್ಲೇರ್ ಎಂಬ ಹೆಸರನ್ನು ಇಟ್ಟಿದ್ದರು.