Advertisement
ಜಗತ್ತಿನಲ್ಲಿರುವ ಸಂಪನ್ಮೂಲಗಳಲ್ಲಿ ಮಾನವ ಸಂಪನ್ಮೂಲ ಅತ್ಯಂತ ಅಮೂಲ್ಯವಾದುದು. ದೇಶದ ಅಭಿವೃದ್ಧಿ, ಬೆಳವಣಿಗೆ, ವಿಜ್ಞಾನ-ತಂತ್ರಜ್ಞಾನ, ಸಂಶೋಧನೆ, ಆವಿಷ್ಕಾರ, ಉತ್ಪಾದನೆ ಮುಂತಾದವುಗಳೆಲ್ಲವೂ ಅಲ್ಲಿನ ಜನಸಂಖ್ಯೆಯನ್ನು ಅವಲಂಬಿಸಿರುತ್ತವೆ. ಜನಸಂಖ್ಯೆಯ ಪ್ರಮಾಣ ಮತ್ತು ಲಭ್ಯವಿರುವ ಭೂಮಿ ಹಾಗೂ ನೈಸರ್ಗಿಕ ಸಂಪನ್ಮೂಲ, ಆಹಾರೋತ್ಪಾದನೆಗಳ ನಡುವೆ ಸಮತೋಲನ ಇದ್ದಾಗ ಜನಸಂಖ್ಯೆ ಒಂದು ಸಮಸ್ಯೆ ಎಂದೆನಿಸದು. ಆದರ್ಶ ಮಟ್ಟದ ಜನಸಂಖ್ಯೆಯು ಅಭಿವೃದ್ಧಿಗೆ ಪೂರಕವಾದರೆ ಅತಿಯಾದ ಜನಸಂಖ್ಯೆಯ ಬೆಳವಣಿಗೆಗೆ ಮಾರಕವಾಗುತ್ತದೆ. ಜನಸಂಖ್ಯೆ ಹೆಚ್ಚಳವಾದಂತೆಲ್ಲ ಮೂಲ ಆವಶ್ಯಕತೆ ಹಾಗೂ ಆಹಾರ ಉತ್ಪನ್ನಗಳ ಬೇಡಿಕೆಯೂ ಹೆಚ್ಚುತ್ತದೆ. ಜನಸಂಖ್ಯೆ ನಿಯಂತ್ರಣದಲ್ಲಿಲ್ಲದಿದ್ದರೆ ಗುಣಾಕಾರ ಮಾದರಿಯಲ್ಲಿ ಹೆಚ್ಚುತ್ತಲೇ ಹೋಗುತ್ತದೆ. ಆದರೆ ಭೂಮಿಯ ಪ್ರಮಾಣವನ್ನು ಹಾಗೂ ಆಹಾರ ಉತ್ಪಾದನೆಯನ್ನು ಅದೇ ಪ್ರಮಾಣದಲ್ಲಿ ಹೆಚ್ಚಿಸಲಾಗದು. ಹಾಗಾಗಿ ಜನಸಂಖ್ಯೆ ಮತ್ತು ಆಹಾರೋತ್ಪಾದನೆಯಲ್ಲಿ ಅಸಮತೋಲನದ ಸಮಸ್ಯೆ ಉಂಟಾಗುತ್ತದೆ.
Related Articles
Advertisement
ಜನಸಂಖ್ಯೆಯ ಹೆಚ್ಚಳವು ಪರಿಸರದ ಮೇಲೆಯೂ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಅದು ಅನುಭೋಗವನ್ನು ಹೆಚ್ಚಿಸುವ ಮೂಲಕ ವಾಯು ಮಾಲಿನ್ಯ ಜಲ ಮಾಲಿನ್ಯ, ಶಬ್ದ ಮಾಲಿನ್ಯಗಳನ್ನು ಉಂಟು ಮಾಡುವುದರೊಂದಿಗೆ ವಿವಿಧ ರೀತಿಯ ಸಾಂಕ್ರಾಮಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಜನರ ಅನುಭೋಗ, ಉತ್ಪಾದನ ಚಟುವಟಿಕೆಗಳು ಹೆಚ್ಚುವುದರಿಂದಾಗಿ ನೈಸರ್ಗಿಕ ಸಂಪನ್ಮೂಲಗಳ ಬಳಕೆ ಅಧಿಕವಾಗಿ ಪರಿಸರ ಸಮತೋಲನ ಹಾಳಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿನ ಜನರು ಉದ್ಯೋಗ ಅರಸುತ್ತ ನಗರ ಪ್ರದೇಶಗಳಿಗೆ ವಲಸೆ ಹೋಗುವುದರಿಂದ ನಗರಗಳಲ್ಲಿ ಜನದಟ್ಟಣೆ ಹೆಚ್ಚಾಗಿ ವಿವಿಧ ಸಮಸ್ಯೆಗಳು ಹೆಚ್ಚುತ್ತವೆ. ಕೊಳಚೆ ಪ್ರದೇಶಗಳು ಹುಟ್ಟಿಕೊಳ್ಳುತ್ತವೆ. ನಿರಾಶ್ರಿತರ ಸಂಖ್ಯೆ ಹೆಚ್ಚುತ್ತದೆ. ಆದಾಯದ ಅಸಮಾನತೆ, ಬಡತನಗಳಿಂದಾಗಿ ಬಾಲಕಾರ್ಮಿಕತೆ, ಬಾಲ್ಯ ವಿವಾಹ, ಕೊಲೆ, ದರೋಡೆ, ಹಿಂಸೆ, ಭಿಕ್ಷಾಟನೆ, ಮಾನವ ಕಳ್ಳ ಸಾಗಾಟ ಮುಂತಾದ ವಿವಿಧ ರೀತಿಯ ಸಾಮಾಜಿಕ ಕೆಡುಕುಗಳು ಕಾಣಿಸಿಕೊಳ್ಳುತ್ತವೆ.
ಬಡತನ ಅಧಿಕವಿರುವ ಹೆಚ್ಚಿನ ರಾಷ್ಟ್ರಗಳಲ್ಲಿ ಸರಕಾರ ಎಲ್ಲವನ್ನೂ ಉಚಿತವಾಗಿ ನೀಡಬೇಕು ಎನ್ನುವ ಮನೋಭಾವವೇ ಹೆಚ್ಚು. ಅನಕ್ಷರಸ್ಥರು ಹಾಗೂ ಬಡವರು ತಮ್ಮ ಕುಟುಂಬದ ಮೇಲೆ ನಿಯಂತ್ರಣವನ್ನೂ ಹೊಂದಿರುವುದಿಲ್ಲ. ಹೀಗಾಗಿ ಜನಸಂಖ್ಯೆ ದೇಶಕ್ಕೆ ಹೊರೆಯಾಗಿ ಪರಿಣಮಿಸುತ್ತದೆ. ಹೀಗಾಗಿ ಅಧಿಕ ಪ್ರಮಾಣದ ಜನಸಂಖ್ಯೆಗೆ ಆವಶ್ಯಕತೆಗಳನ್ನು ಪೂರೈಸಲು ಸರಕಾರ ಅಧಿಕ ಆದಾಯವನ್ನು ಮೀಸಲಿಡಬೇಕಾಗುತ್ತದೆ.
ವ್ಯಾಪಕ ಶಿಕ್ಷಣ ಮತ್ತು ಬಡತನ ನಿರ್ಮೂಲನ ಯೋಜನೆಗಳು ಹಾಗೂ ಹೆಣ್ಣು ಮಕ್ಕಳಿಗೆ ಕೌಟುಂಬಿಕ ಸಮಾನತೆಯನ್ನು ನೀಡುವುದು ಕುಟುಂಬ ನಿಯಂತ್ರಣ ಸಾಧಿಸಲು ಉತ್ತಮ ದಾರಿಗಳಾಗಿವೆ. ಏಕೆಂದರೆ ಬಡತನ ಮತ್ತು ಜನಸಂಖ್ಯೆಯ ನಡುವೆ ನೇರ ಸಂಬಂಧವಿದೆ. ಶಿಕ್ಷಣ ಹಾಗೂ ಜೀವನಮಟ್ಟವನ್ನು ಹೆಚ್ಚಿಸುವುದರಿಂದ ಜನರು ಮಿತ ಸಂತಾನವನ್ನು ಹೊಂದಲು ತಾವಾಗಿಯೇ ಇಚ್ಛಿಸುತ್ತಾರೆ. ಇದಕ್ಕಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಮಾನವ ಶಕ್ತಿ ಯೋಜನೆಗಳು ದಕ್ಷವಾಗಿ ಕಾರ್ಯಶೀಲವಾಗಬೇಕಿದೆ.
ಮಾನವ ಸಂಪನ್ಮೂಲವನ್ನು ಧನಾತ್ಮಕವಾಗಿ ಪರಿವರ್ತಿಸಿಕೊಂಡರೆ ಹಲವಾರು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಭಾರತದಲ್ಲಿ ಇದೀಗ ಬದಲಾವಣೆಯ ಕಾಲ. ಅಧಿಕ ಪ್ರಮಾಣದಲ್ಲಿ ಲಭ್ಯವಿರುವ ಯುವಕರಿಗೆ ಉತ್ತಮ ಶಿಕ್ಷಣ, ಕೌಶಲ ತರಬೇತಿಗಳನ್ನು ನೀಡಿ ಉದ್ಯೋಗಾವಕಾÍಗಳನ್ನು ಒದಗಿಸುವ ಮೂಲಕ ಜನಸಂಖ್ಯೆಯನ್ನು ಬಂಡವಾಳ ಮೂಲವನ್ನಾಗಿ ಪರಿವರ್ತಿಸಬಹುದು. ಜನರಿಗೆ ಉಚಿತ ಸೌಲಭ್ಯಗಳನ್ನು ನೀಡಿ ಸರಕಾರದ ಹೊರೆಯನ್ನು ಹೆಚ್ಚಿಸಿಕೊಳ್ಳುವ ಬದಲಾಗಿ ಅವರಿಗೆ ದುಡಿಯುವ ಅವಕಾಶಗಳನ್ನು ಹೆಚ್ಚಿಸಿದರೆ ಉತ್ಪಾದನೆ ಹಾಗೂ ಆದಾಯ ಹೆಚ್ಚುತ್ತದೆ, ಸ್ವಾವಲಂಬನೆ ಸಾಧ್ಯವಾಗುತ್ತದೆ.
ಭಾರತದಂತಹ ರಾಷ್ಟ್ರಗಳಲ್ಲಿ ಜನಸಂಖ್ಯಾ ಏರಿಕೆಯು ಆರ್ಥಿಕ ಅಭಿವೃದ್ಧಿಗೆ ತಡೆಯನ್ನು ಉಂಟು ಮಾಡುವುದರಿಂದ ಸರಕಾರ ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಸಾರ್ವತ್ರಿಕವಾಗಿ ಕಡ್ಡಾಯಗೊಳಿಸುವ ಅಗತ್ಯವಿದೆ. ಜನಸಂಖ್ಯೆ ಕೇವಲ ಆರ್ಥಿಕ ಸಮಸ್ಯೆ ಮಾತ್ರವಲ್ಲ. ಅದು ಸಾಮಾಜಿಕ, ಧಾರ್ಮಿಕ, ಸಾಂಸ್ಥಿಕ, ಆಡಳಿತಾತ್ಮಕ ಹಾಗೂ ರಾಜಕೀಯ ಸಮಸ್ಯೆಯೂ ಹೌದು. 18 ನೆಯ ಶತಮಾನದ ಪ್ರಸಿದ್ಧ ಬ್ರಿಟಿಷ್ ಅರ್ಥಶಾಸ್ತ್ರ ಜ್ಞರಾದ ಥಾಮಸ್ ರಾಬರ್ಟ್ ಮಾಲ್ತಸ್ ಅವರು ಎಚ್ಚರಿಸಿದ ಹಾಗೆ ಮಾನವ ಜನಸಂಖ್ಯೆಯನ್ನು ತಾನೇ ನಿಯಂತ್ರಿಸಿಕೊಳ್ಳದೆ ಹೋದರೆ ನಿಸರ್ಗವು ತನ್ನದೇ ಆದ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತದೆ. ಏಕೆಂದರೆ ಜನಸಂಖ್ಯೆ ಏರಿಕೆಯಿಂದಾಗಿ ನಿಸರ್ಗದಲ್ಲಿರುವ ಸಂಪನ್ಮೂಲಗಳನ್ನು ಮಾನವ ತನ್ನ ಅಗತ್ಯಗಳನ್ನು ಪೂರೈಸಲು ಖಾಲಿಯಾಗಿಸುವುದರಿಂದ ಜೀವವೈವಿಧ್ಯ ನಾಶವಾಗುತ್ತದೆ. ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ.
ಜನಸಂಖ್ಯಾ ಏರಿಕೆಯನ್ನು ನಿಯಂತ್ರಿಸಿ ಅಭಿವೃದ್ಧಿ ಹಾಗೂ ಪರಿಸರವನ್ನು ಕಾಯ್ದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು.ಜನಸಂಖ್ಯಾ ನಿಯಂತ್ರಣದಲ್ಲಿ ಸರಕಾರದ ಕಾನೂನಾತ್ಮಕ ಪ್ರಯತ್ನಗಳು ಮಾತ್ರವಲ್ಲ, ಜನರು ಪ್ರಜ್ಞಾವಂತರಾಗಿ ವರ್ತಿಸಬೇಕಾದ ಆವಶ್ಯಕತೆ ಇದೆ. ಇಲ್ಲವಾದಲ್ಲಿ ಭವಿಷ್ಯದ ದಿನಗಳು ನಿರಾಶಾದಾಯಕವಾಗಬಹುದು. – ವಿದ್ಯಾ ಅಮ್ಮಣ್ಣಾಯ, ಕಾಪು