Advertisement

 ಜನಪ್ರಿಯ ಯಕ್ಷಗಾನ ಕಲಾ ಮಂಡಳದ ವಜ್ರ ಮಹೋತ್ಸವ 

04:30 PM Mar 21, 2017 | Team Udayavani |

ಮುಂಬಯಿ: ಯಕ್ಷಗಾನ  ಉಳಿಸಿ-ಬೆಳೆಸುವಲ್ಲಿ ಜಿಎಸ್‌ಬಿ ಸಮಾಜದ ಕೊಡುಗೆ ಅಪಾರವಾಗಿದೆ. ಕಳೆದ 60 ವರ್ಷಗಳಿಂದ ಮುಂಬಯಿ ಮಹಾನಗರದಲ್ಲಿ ಜನಪ್ರಿಯ ಯಕ್ಷಗಾನ ಕಲಾಮಂಡಳಿಯು ಯಕ್ಷಗಾನ ಕಲೆಯನ್ನು ಯುವ ಪೀಳಿಗೆಗೆ ಪರಿಚಯಿಸುವಲ್ಲಿ ನಿರಂತವಾಗಿ ಶ್ರಮಿಸುತ್ತಿದೆ. ಅನೇಕ ಏರಿಳಿತಗಳನ್ನು ಕಂಡರೂ ಸಮಾಜದ ಗುರುಗಳ ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ಕಲಾಸೇವೆ ಮಾಡಿದೆ. ಹಲವಾರು ಯುವ ಪ್ರತಿಭೆಗಳನ್ನು ಪೋಷಿಸಿ ಬೆಳೆಸುವುದ ಜತೆಗೆ ಅವರಿಗೆ ಉತ್ತಮವಾದ ವೇದಿಕೆ ಕಲ್ಪಿಸಿಕೊಟ್ಟಿರುವುದು ಅಭಿನಂದ ನೀಯ. ಈ ಸಂದರ್ಭದಲ್ಲಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಮಹಾನೀಯರನ್ನು ನೆನಪಿಸುವುದು ನಮ್ಮ ಕರ್ತವ್ಯ ಎಂದು ಜನಪ್ರಿಯ ಯಕ್ಷಗಾನ ಕಲಾ ಮಂಡಳದ ಮಾಜಿ ಕಾರ್ಯದರ್ಶಿ ಮೂಲ್ಕಿ ಸದಾಶಿವ ಕಾಮತ್‌ ಅವರು ಅಭಿಪ್ರಾಯಪಟ್ಟರು.

Advertisement

ಮಾ. 18 ರಂದು ಸಂಜೆ ಮುಲುಂಡ್‌ ಪಶ್ಚಿಮದ ಮಹಾರಾಷ್ಟ್ರ ಸೇವಾ ಸಂಘದ ಸಭಾಗೃಹದಲ್ಲಿ ಜನಪ್ರಿಯ ಯಕ್ಷಗಾನ ಕಲಾ ಮಂಡಳದ ವಜ್ರ ಮಹೋತ್ಸವ ಸಂಭ್ರಮದ ಅಂಗವಾಗಿ  ಆಯೋಜಿಸಲಾಗಿದ್ದ, ಕಲಾವಿದರು ಹಾಗೂ ದಾನಿಗಳು, ಸಹಕರಿಸಿದ ಸಂಘ-ಸಂಸ್ಥೆಗಳಿಗೆ ಗೌರವಾರ್ಪಣೆ ಸಮಾರಂಭದಲ್ಲಿ  ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕೊಂಕಣಿ ಭಾಷೆಯಲ್ಲಿ ಸುಮಾರು ಹತ್ತಕ್ಕಿಂತಲೂ ಅಧಿಕ ಯಕ್ಷಗಾನ ಪ್ರಸಂಗಗಳು ರಚಿತವಾಗಿದ್ದರೂ ಅದು ಪ್ರಕಟಗೊಳ್ಳದಿರುವುದು ವಿಷಾದನೀಯ. ಈ ಬಗ್ಗೆ ಯಕ್ಷಗಾನ ಪ್ರೇಮಿಗಳು ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಉದ್ಯಮಿ ಜಿ. ಅರವಿಂದ ರಾವ್‌ ಅವರು ಮಾತನಾಡಿ, ಯಕ್ಷಗಾನ ಕ್ಷೇತ್ರಕ್ಕೆ ಜನಪ್ರಿಯ ಯಕ್ಷಗಾನ ಕಲಾಮಂಡಲದ ಕೊಡುಗೆ ಬಹಳಷ್ಟಿದೆ. ಈ ಮಂಡಲದಿಂದ ನಿರಂತರ ಯಕ್ಷಗಾನ ಸೇವೆಯು ಇನ್ನಷ್ಟು ಜರಗಿ ಯಕ್ಷಗಾನ ಕಲೆ ವಿಶ್ವಮಾನ್ಯತೆ ಪಡೆಯಲಿ ಎಂದು  ಹಾರೈಸಿದರು.

ಗೌರವ ಅತಿಥಿಯಾಗಿ ಪಾಲ್ಗೊಂಡ ದಾಮೋದರ ರಾವ್‌ ಮಾತನಾಡಿ, ಜನಪ್ರಿಯ ಯಕ್ಷಗಾನ ಮಂಡಳಿಯು ಮಹಾನಗರದಲ್ಲಿ ಯಕ್ಷಗಾನ ಜನಪ್ರಿಯಗೊಳಿಸುವಲ್ಲಿ ಮಹತ್ವದ ಕೊಡುಗೆ ನೀಡಿದೆ. ಜಿಎಸ್‌ಬಿ ಸಮಾಜದ ಅನೇಕ ಕಲಾವಿದರನ್ನು ಪ್ರೋತ್ಸಾಹಿಸಿ, ಬೆಳೆಸುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದೆ. ಮಂಡಳಿಯಿಂದ ಇನ್ನಷ್ಟು ಹೊಸ ಪ್ರತಿಭೆಗಳು ಮಿಂಚುವಂತಾಗಲಿ ಎಂದರು.

Advertisement

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರು ಮಾತನಾಡಿ, ಕೊಂಕಣಿ ಭಾಷಿಗರು ವಿಶೇಷವಾದ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ಮುಂಬಯಿ ಮಹಾನಗರದಲ್ಲಿ ಜನಪ್ರಿಯ ಯಕ್ಷಗಾನ ಮಂಡಳಿಯು ಒಂದು ಉತ್ತಮ ಯಕ್ಷಕಲಾ ಮಂಡಲವಾಗಿ ಬೆಳೆದಿರುವುದು ಅಭಿನಂದನೀಯ. ಇದು 60 ವರ್ಷಗಳಲ್ಲಿ ಅನೇಕ ಕಲಾವಿದರನ್ನು ಸೃಷ್ಟಿಸಿದೆ ಎಂದರು.

ಹಿರಿಯ ಸಂಘಟಕ ಎಚ್‌. ಬಿ. ಎಲ್‌. ರಾವ್‌ ಅವರು ಮಾತನಾಡಿ, ದಿ| ರಾಮ ನಾಯಕ್‌ ಅವರಂತಹ ಹಿರಿಯರು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯವಾಗಿದೆ. ಜನಪ್ರಿಯ ಯಕ್ಷಗಾನ ಕಲಾ ಮಂಡಲದಂತಹ ಹಿರಿಯ ಸಂಸ್ಥೆಯ ದಾಖಲೀಕರಣದ ಅಗತ್ಯವಿದ್ದು, ಈ ಬಗ್ಗೆ ನಾನು ಶ್ರಮಿಸುತ್ತಿದ್ದೇನೆ. ಅದಕ್ಕಾಗಿ ಎಲ್ಲರ ಸಹಕಾರ ಅಗತ್ಯ ಎಂದರು.

ವೇದಿಕೆಯಲ್ಲಿ ಉದ್ಯಮಿ, ಯಕ್ಷಗಾನ ಪ್ರೋತ್ಸಾಹಕ ಸತೀಶ್‌ ರಾಮ ನಾಯಕ್‌, ಡಾ| ಭುಜಂಗ ಪೈ, ಜಿಎಸ್‌ಬಿ ಸೇವಾ ಮಂಡಲ ಸಯಾನ್‌ ಅಧ್ಯಕ್ಷ ಯಶವಂತ್‌ ಕಾಮತ್‌, ಮಹಾರಾಷ್ಟ್ರ ಸೇವಾ ಸಂಘ ಮುಲುಂಡ್‌ ಗೌರವ ಕಾರ್ಯದರ್ಶಿ ಜಯಪ್ರಕಾಶ್‌ ಬರ್ವೆ, ಜಿಎಸ್‌ಬಿ ಸಭಾ ಮುಲುಂಡ್‌ ಅಧ್ಯಕ್ಷ ಶಾಂತಾರಾಮ ಎ. ಭಟ್‌ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.

ಜನಪ್ರಿಯ ಯಕ್ಷಗಾನ ಕಲಾ ಮಂಡಳದ ಅಧ್ಯಕ್ಷ  ಮೇಲ್‌ ಗಂಗೊಳ್ಳಿ ರವೀಂದ್ರ ಪೈ ಅವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾ ಡಿದರು. ಗೌರವ ಕಾರ್ಯದರ್ಶಿ ಕುಕ್ಕೆಹಳ್ಳಿ ವಿಠಲ್‌ ಎನ್‌. ಪ್ರಭು, ಗೌರವ ಕೋಶಾಧಿಕಾರಿ ಯೋಗೇಶ್‌ ಕೃಷ್ಣ ಡಾಂಗೆ ಮೊದಲಾದವರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶ್ರೀಮದ್‌ ಸುಧೀಂದ್ರ ತೀರ್ಥ ಸ್ವಾಮೀಜಿ ಅವರ ಸಂಸ್ಮರಣಾರ್ಥ ನರಕಾಸುರ ವಧೆ ಯಕ್ಷಗಾನ ಕನ್ನಡದಲ್ಲಿ ಪ್ರದರ್ಶನಗೊಂಡಿತು.

 ಚಿತ್ರ-ವರದಿ : ಸುಭಾಶ್‌ ಶಿರಿಯಾ 

Advertisement

Udayavani is now on Telegram. Click here to join our channel and stay updated with the latest news.

Next