ಭುವನೇಶ್ವರ್: ಜನಪ್ರಿಯ ಒಡಿಯಾ ಹಿನ್ನೆಲೆ ಗಾಯಕಿ ತಾಪು ಮಿಶ್ರಾ(36ವರ್ಷ) ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ 19 ಸೋಂಕಿನಿಂದ (ಜೂನ್ 20) ಸಾವನ್ನಪ್ಪಿರುವುದಾಗಿ ಕುಟುಂಬದ ಮೂಲಗಳು ಭಾನುವಾರ ತಿಳಿಸಿದೆ.
ಇದನ್ನೂ ಓದಿ:ಛತ್ತೀಸ್ ಗಢ; ಅಪಘಾತ ಪ್ರಕರಣ: ಲಂಚ ಸ್ವೀಕರಿಸಿದ ಇಬ್ಬರು ಪೊಲೀಸರು ಅಮಾನತು
ಮೇ 10ರಂದು ತಾಪು ತಂದೆ ಕೂಡಾ ಕೋವಿಡ್ 19 ಸೋಂಕಿನಿಂದ ಸಾವನ್ನಪ್ಪಿದ್ದರು. ಗಾಯಕಿ ಮಿಶ್ರಾ ಅವರು ಶನಿವಾರ ರಾತ್ರಿ ವಿಧಿವಶರಾಗಿರುವುದಾಗಿ ತಿಳಿಸಿದೆ. ತಾಪು ಮಿಶ್ರಾ ಅವರು ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಿದ್ದು, ಎರಡು ದಿನಗಳ ನಂತರ ವೆಂಟಿಲೇಟರ್ ನಲ್ಲಿ ಇರಿಸಲಾಗಿತ್ತು ಎಂದು ವರದಿ ವಿವರಿಸಿದೆ.
ಮೇ 19ರಂದು ಆಸ್ಪತ್ರೆಗೆ ದಾಖಲಾಗಿದ್ದ ತಾಪು ಮಿಶ್ರಾ ಅವರ ಶ್ವಾಸಕೋಶ ಗಂಭೀರವಾಗಿ ಹಾನಿಗೊಳಗಾಗಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿದೆ. ಕೋವಿಡ್ ನಿಂದ ಬಳಲುತ್ತಿದ್ದ ಮಿಶ್ರಾ ಅವರಿಗೆ ಚಿಕಿತ್ಸೆಗಾಗಿ ಕಲಾವಿದರ ಕಲ್ಯಾಣಾಭಿವೃದ್ಧಿ ನಿಧಿಯಿಂದ ಒಂದು ಲಕ್ಷ ರೂಪಾಯಿ ಹಣಕಾಸು ನೆರವನ್ನು ರಾಜ್ಯ ಸಂಸ್ಕೃತಿ ಇಲಾಖೆ ಘೋಷಿಸಿತ್ತು.
ಅನಾರೋಗ್ಯಕ್ಕೊಳಗಾಗಿದ್ದ ತಾಪು ಅವರ ಚಿಕಿತ್ಸೆಗಾಗಿ ಒಡಿಯಾ ಸಿನಿಮಾರಂಗ ಹಾಗೂ ಒಲಿವುಡ್ ಹಣ ಸಂಗ್ರಹಿಸಲು ಮುಂದಾಗಿತ್ತು. ಸುಮಾರು 150ಕ್ಕೂ ಅಧಿಕ ಸಿನಿಮಾಗಳಲ್ಲಿ ಮಿಶ್ರಾ ತಮ್ಮ ಸುಮಧುರ ಕಂಠದಿಂದ ಹಾಡನ್ನು ಹಾಡಿರುವುದಾಗಿ ವರದಿ ತಿಳಿಸಿದೆ.