ವ್ಯಾಟಿಕನ್: ಮುಂಬರುವ ಅಮೆರಿಕದ ಅಧ್ಯಕ್ಷೀಯ(U.S. Presidential Election) ಚುನಾವಣೆಯ ಅಭ್ಯರ್ಥಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಪೋಪ್ ಫ್ರಾನ್ಸಿಸ್(Pope Francis), ಗರ್ಭಪಾತ ಮತ್ತು ವಲಸೆ ಬಗ್ಗೆ ಜೀವ ವಿರೋಧಿ ನಿಲುವು ತಳೆದಿರುವುದಾಗಿ ಆರೋಪಿಸಿರುವ ಅವರು, ಅಮೆರಿಕದ ಕ್ಯಾಥೋಲಿಕ್ಸ್ ಯಾರು ಕಡಿಮೆ ದುಷ್ಟರೋ ಅವರನ್ನು ಆಯ್ಕೆ ಮಾಡುವಂತೆ ಸಲಹೆ ನೀಡಿರುವುದಾಗಿ ವರದಿ ತಿಳಿಸಿದೆ.
ಅಧ್ಯಕ್ಷ ಸ್ಥಾನದ ಇಬ್ಬರೂ ಅಭ್ಯರ್ಥಿಗಳು ಜೀವ ವಿರೋಧಿಯಾಗಿದ್ದಾರೆ. ಒಬ್ಬರು ವಲಸಿಗರನ್ನು(ಟ್ರಂಪ್) ಹೊರಗಟ್ಟುವುದಾಗಿ ಹೇಳುತ್ತಾರೆ, ಮತ್ತೊಬ್ಬರು ಹುಟ್ಟುವ ಶಿಶುವನ್ನು ಕೊಲ್ಲುವ ಬಗ್ಗೆ(ಹ್ಯಾರಿಸ್) ಮಾತನಾಡುತ್ತಾರೆ ಎಂದು ಪೋಪ್ ಹೇಳಿದ್ದಾರೆ.
ನಾಲ್ಕು ದೇಶಗಳ ಪ್ರವಾಸ ಮುಗಿಸಿ ರೋಮ್ ಗೆ ತೆರಳುತ್ತಿದ್ದ ವೇಳೆ ಏರ್ ಬೋರ್ನ್ (Airborne news) ಕಾನ್ಫರೆನ್ಸ್ ನಲ್ಲಿ ಅಮೆರಿಕನ್ ಕ್ಯಾಥೋಲಿಕರು ಯಾರಿಗೆ ಮತ ಚಲಾಯಿಸಬೇಕೆಂದು ಸಲಹೆ ನೀಡುತ್ತೀರಿ ಎಂಬ ಪ್ರಶ್ನೆಗೆ ಪೋಪ್ ಈ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಅಮೆರಿಕನ್ ಪ್ರಜೆ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಅವರು, ಹೀಗಾಗಿ ನಾನು ಮತ ಚಲಾಯಿಸುವ ಪ್ರಶ್ನೆ ಇಲ್ಲ ಎಂದಿರುವುದಾಗಿ ತಿಳಿಸಿದ್ದಾರೆ.
ರಿಪಬ್ಲಿಕನ್ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ಅಥವಾ ಡೆಮೋಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಹೆಸರನ್ನು ಉಲ್ಲೇಖಿಸಿ ಮಾತನಾಡಿದ ಪೋಪ್, ಅಮೆರಿಕ ಚುನಾವಣೆಯಲ್ಲಿ ಗರ್ಭಪಾತ ಮತ್ತು ವಲಸೆ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಈ ವಿಚಾರ ಕ್ಯಾಥೋಲಿಕ್ ಚರ್ಚ್ ಗಳಿಗೆ ಹೆಚ್ಚು ಕಳವಳಕಾರಿಯಾಗಿದೆ ಎಂದು ಪೋಪ್ ಹೇಳಿದ್ದಾರೆ.
ಮತ ಚಲಾಯಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆದರೆ ಮತ ಚಲಾಯಿಸುವ ಮೊದಲು ಯಾರು ಕಡಿಮೆ ಜೀವ ವಿರೋಧಿ ಎಂಬುದನ್ನು ಆಲೋಚಿಸಿ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು…ಅದು ಮಹಿಳೆಯೋ ಅಥವಾ ಪುರುಷನೋ? ಆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಪೋಪ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.