“ದುನಿಯಾ’ ಸೂರಿ ನಿರ್ದೇಶನದ “ಪಾಪ್‌ಕಾರ್ನ್ ಮಂಕಿ ಟೈಗರ್’ ಚಿತ್ರ ತೆರೆಗೆ ಬರಲು ಸಿದ್ಧವಾಗುತ್ತಿದೆ. ಚಿತ್ರದ ಪ್ರಮೋಶನ್ ಕೆಲಸಗಳನ್ನು ಆರಂಭಿಸಿರುವ ಚಿತ್ರತಂಡದ ಕಡೆಯಿಂದ ಈಗ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ, “ಪಾಪ್‌ಕಾರ್ನ್ ಮಂಕಿ ಟೈಗರ್’ ಚಿತ್ರದ ಆಡಿಯೋ ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಒಡೆತನದ “ಪಿಆರ್‌ಕೆ ಆಡಿಯೋ’ ಪಾಲಾಗಿದೆ.
ಹೌದು, ಸೆಟೇರಿದಾಗಿನಿಂದಲೂ ತನ್ನ ಟೈಟಲ್ ಮತ್ತು ಪೋಸ್ಟರ್ ಮೂಲಕ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿರುವ “ಪಾಪ್‌ಕಾರ್ನ್ ಮಂಕಿ ಟೈಗರ್’ ಚಿತ್ರದ ಆಡಿಯೋ ಹಕ್ಕುಗಳನ್ನು ಇದೀಗ “ಪಿಆರ್‌ಕೆ ಆಡಿಯೋ’ ಸಂಸ್ಥೆ ಖರೀದಿಸಿದ್ದು, ಶೀಘ್ರದಲ್ಲಿಯೇ ಚಿತ್ರದ ಆಡಿಯೋ ಅದ್ಧೂರಿಯಾಗಿ ಹೊರತರುವ ಯೋಚನೆಯಲ್ಲಿದೆ ಚಿತ್ರತಂಡ.
“ದುನಿಯಾ’ ಸೂರಿ ನಿರ್ದೇಶನದಲ್ಲಿ ಈ ಹಿಂದೆ ಮೂರು ಚಿತ್ರಗಳಲ್ಲಿ ಅಭಿನಯಿಸಿರುವ ಪುನೀತ್ ರಾಜಕುಮಾರ್, ಈ ಹಿಂದೆ ಸೂರಿ ನಿರ್ದೇಶನದ “ಟಗರು’ ಚಿತ್ರದ ಆಡಿಯೋವನ್ನು ತಮ್ಮ ಸಂಸ್ಥೆಯ ಮೂಲಕ ಖರೀದಿಸಿದ್ದರು. ಆ ಆಡಿಯೋ ಯೂ-ಟ್ಯೂಬ್‌ನಲ್ಲಿ ಟ್ರೆಂಡಿಂಗ್ ಸೃಷ್ಟಿಸಿತ್ತು. ಈಗ ಸೂರಿ ನಿರ್ದೇಶನದ ಹೊಸಚಿತ್ರ “ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದ ಆಡಿಯೋ ಕೂಡ “ಪಿಆರ್‌ಕೆ ಆಡಿಯೋ’ ತೆಕ್ಕೆಗೆ ಬಂದಿರುವುದರಿಂದ ಆಡಿಯೋ ಬಗ್ಗೆ ಒಂದಷ್ಟು ನಿರೀಕ್ಷೆ ಮನೆ ಮಾಡಿದೆ.
ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡಿದ ಅನುಭವವಿರುವ ಸುಧೀರ್ ಕೆ.ಎಮ್ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಶೇಖರ್ ಎಸ್. ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಚರಣ್ ರಾಜ್ ಸಂಗೀತ ಸಂಯೋಜನೆಯಿದೆ. ಚಿತ್ರದಲ್ಲಿ “ಡಾಲಿ’ ಧನಂಜಯ ನಾಯಕನಾಗಿ ಕಾಣಿಸಿಕೊಂಡಿದ್ದು,
ಕಾಕ್ರೋಚ್ ಖ್ಯಾತಿಯ ಸುಧಿ, ನವೀನ್, ಪೂರ್ಣಚಂದ್ರ, ನಿವೇದಿತಾ,ಅಮೃತ ಅಯ್ಯಂಗಾರ್, ಸಪ್ತಮಿ, ಮೋನಿಶಾ ನಾಡಿಗೇರ್, ಗೌತಮ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮೂಲಗಳ ಪ್ರಕಾರ ಹೊಸವರ್ಷಕ್ಕೆ “ಪಾಪ್‌ಕಾರ್ನ್ ಮಂಕಿ ಟೈಗರ್’ ಫಸ್ಟ್‌ಲುಕ್ ಟೀಸರ್ ರಿಲೀಸ್ ಆಗುವ ಸಾಧ್ಯತೆ ಇದ್ದು, ಫೆಬ್ರವರಿ ವೇಳೆಗೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.