ಹುಬ್ಬಳ್ಳಿ: ಪಿಒಪಿ ಗಣೇಶ ಮೂರ್ತಿ ಇನ್ನೊಂದು ವರ್ಷ ಎಂದು ಹೇಳುತ್ತಾ ಹೋಗಲಾಗುತ್ತಿದೆ. ಪಿಒಪಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಈ ಬಾರಿ ನೀಡಿದ ಅವಕಾಶ ಮುಂದಿನ ವರ್ಷ ಯಾವುದೇ ಕಾರಣಕ್ಕೂ ಮುಂದುವರಿಸಬಾರದು. ಸಂಪೂರ್ಣ ಮಣ್ಣಿನಿಂದ ನಿರ್ಮಿಸಿದ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡುವಂತಾಗಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ಹೇಳಿದರು.
ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದಿಂದ 11 ದಿನದ ಸಾರ್ವಜನಿಕ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪಿಒಪಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡುವುದರಿಂದ ಪರಿಸರ ಹಾನಿಯಾಗುತ್ತಿದ್ದು, ಈ ಕುರಿತು ಎಲ್ಲರಿಗೂ ಮಾಹಿತಿ ಇದ್ದರೂ ಕೂಡಾ ಪದೇ ಪದೇ ತಪ್ಪು ಮಾಡುತ್ತಿದ್ದೇವೆ.
ಆದ್ದರಿಂದ ಮುಂದಿನ ಬಾರಿ ನಗರದ ಎಲ್ಲ ಮಂಡಳದವರು ಸಂಪೂರ್ಣ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗಬೇಕು ಎಂದರು. ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಗಣೇಶ ಹಬ್ಬ ನಮ್ಮ ಸಂಪ್ರದಾಯದ ಪ್ರತೀಕವಾಗಿದೆ. ಇನ್ನು ಹೆಚ್ಚು ಕಳೆಗಟ್ಟುವಂತೆ ನಾವೆಲ್ಲರೂ ಆಚರಣೆ ಮಾಡಬೇಕು.
ಮಣ್ಣೆತ್ತಿನ ಅಮಾವಾಸ್ಯೆಯಿಂದ ಹಿಡಿದು ಗಣೇಶ ಹಬ್ಬದವರೆಗೆ ಮಣ್ಣಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ನಮ್ಮ ಸಂಪ್ರದಾಯ ಆಚರಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡದೇ ಭೂ ತಾಯಿಗೆ ನಮನ ಸಲ್ಲಿಸಬೇಕು ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಸಮಿತಿ ಗೌರವಾಧ್ಯಕ್ಷ ಮೋಹನ ಲಿಂಬಿಕಾಯಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಹಾಪೌರ ಡಿ.ಕೆ. ಚವ್ಹಾಣ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಮಲ್ಲಿಕಾರ್ಜುನ ಸಾವುಕಾರ, ಪಾಲಿಕೆ ಸದಸ್ಯ ಮಹೇಶ ಬುರ್ಲಿ, ಉದ್ಯಮಿ ಜಿತೇಂದ್ರ ಮಜೇಥಿಯಾ, ಪಿ.ಎಂ. ಹೂಲಿ, ಎಸ್.ಎಸ್. ಕಮಡೊಳ್ಳಿಶೆಟ್ರಾ, ಚನ್ನಬಸಪ್ಪ ಧಾರವಾಡಶೆಟ್ರಾ ಇದ್ದರು. ಶ್ರೀಶೈಲಪ್ಪ ಶೆಟ್ಟರ ಸ್ವಾಗತಿಸಿದರು. ಅಮರೇಶ ಹಿಪ್ಪರಗಿ ನಿರೂಪಿಸಿದರು. ಅಲ್ತಾಫ್ ಕಿತ್ತೂರ ವಂದಿಸಿದರು.