ಬೆಂಗಳೂರು: ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಗಣೇಶ ಮೂರ್ತಿಯನ್ನು ಪೂಜಿಸುವುದರಿಂದ ಅನಿಷ್ಟ ಬರುತ್ತದೆ. ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿ ಪೂಜಿಸುವುದರಿಂದ ಒಳಿತಾಗುತ್ತದೆ… ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳ ಪ್ರತಿಷ್ಠಾಪನೆ ಮೂಲಕ ಗಣೇಶೋತ್ಸವ ಆಚರಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಗರದ ಹಲವು ದೇವಾಲಯಗಳಲ್ಲಿ ಅಳವಡಿಸಿರುವಂತಹ ಜಾಗೃತಿ ಫಲಕಗಳಲ್ಲಿನ ಸಂದೇಶದ ಸಾರಾಂಶವಿದು.
ಎಲ್ಲರೂ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಗೆ ಮುಂದಾಗಬೇಕೆಂಬ ಆಶಯ, ಒತ್ತಾಯ ಕೇಳಿಬರುತ್ತಿದೆ. ಮಣ್ಣಿನ ಮೂರ್ತಿಗಳನ್ನೇ ಪೂಜಿಸುವಂತೆ ವಿವಿಧ ಸಂಘ-ಸಂಸ್ಥೆಗಳು ವಿನೂತನ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಅದರಂತೆ ನಗರದ ವಿವಿಧ ದೇವಾಲಯಗಳಲ್ಲಿಯೂ ಭಕ್ತರಿಗೆ ಮಣ್ಣಿನ ಮೂರ್ತಿ ಬಳಕೆ ಕುರಿತು ಜಾಗೃತಿ ಮೂಡಿಸುವ ಕಾರ್ಯವೂ ನಡೆದಿದೆ. ಪಿಒಪಿ ಮೂರ್ತಿಗಳನ್ನು ಪೂಜೆ ಮಾಡುವುದರಿಂದ ದರಿದ್ರ ಬರುತ್ತದೆ. ಮಣ್ಣಿನ ಮೂರ್ತಿಗಳ ಆರಾಧನೆಯಿಂದ ಅದೃಷ್ಟ ಒಲಿಯುತ್ತದೆ ಎಂಬ ಸಂದೇಶ ಸಾರಲಾಗುತ್ತಿದೆ.
ಒಂದೆಡೆ ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಪಿಒಪಿ ಮೂರ್ತಿಗಳ ಬಳಕೆಯಿಂದ ಜಲಮೂಲಗಳಿಗೆ ಹಾನಿಯಾಗಲಿದೆ ಎಂದು ಜಾಗೃತಿ ಮೂಡಿಸುತ್ತಿದೆ. ಅಖೀಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಹಾಗೂ ಉಪಾಧಿವಂತರ ಸಂಘವು ವಿಭಿನ್ನವಾಗಿ ರೀತಿಯಲ್ಲಿ ಭಕ್ತರಲ್ಲಿ ಜಾಗೃತಿ ಮೂಡಿಸುತ್ತಿದೆ. ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಮೂರ್ತಿ ಪೂಜಿಸಿದರೆ ಅದೃಷ್ಟ, ಅದೇ ಪಿಒಪಿ ಗಣೇಶ ಮೂರ್ತಿ ಪೂಜೆಯಿಂದ ಅನಿಷ್ಟ ಎಂದು ಹೇಳುವ ಮೂಲಕ ಮಣ್ಣಿನ ಗಣೇಶ ಮೂರ್ತಿ ಬಳಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ.
ಕೈ-ಕಾಲು ತುಂಡಾಗುವುದನ್ನು ನೋಡಲಾಗದು: ಜಾಗೃತಿ ಕಾರ್ಯಕ್ರಮ ಕುರಿತು “ಉದಯವಾಣಿ’ ಜತೆ ಮಾತನಾಡಿದ ಸಂಘದ ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಎನ್ ದೀಕ್ಷಿತ್, ಗಣೇಶ ಮೂರ್ತಿಯನ್ನು ಶ್ರದ್ಧೆಯಿಂದ ಪೂಜಿಸುತ್ತೇವೆ. ಆದರೆ, ವಿಸರ್ಜನೆ ವೇಳೆ ಪಿಒಪಿ ಮೂರ್ತಿಗಳು ಬೇಗ ಮುಳುಗದ ಹಿನ್ನೆಲೆಯಲ್ಲಿ ಕೈ-ಕಾಲುಗಳನ್ನು ಭಗ್ನ ಮಾಡಲಾಗುತ್ತದೆ. ಇದು ಧಾರ್ಮಿಕ ಭಾವನೆಗೂ ಧಕ್ಕೆ ಉಂಟಾಗುತ್ತದೆ. ಹೀಗಾಗಿ ಸಾರ್ವಜನಿಕರು ಮಣ್ಣಿನ ಗಣೇಶ ಮೂರ್ತಿಗಳ ಬಳಕೆಗೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು.
ಪಿಒಪಿ ಗಣೇಶ ಮೂರ್ತಿಗಳನ್ನು ರಾಸಾಯನಿಕಗಳಿಂದ ತಯಾರಿಸಲಾಗುತ್ತದೆ. ಇಂತಹ ಮೂರ್ತಿ ಪೂಜೆಯಿಂದ ಯಾವುದೇ ಲಾಭವಾಗುವುದಿಲ್ಲ. ಮಣ್ಣನ್ನು ಭೂಮಿ ತಾಯಿ ಎಂದು ಪೂಜಿಸಲಾಗುತ್ತದೆ. ಇಂತಹ ಮಣ್ಣಿನಿಂದ ಮಾಡಿದ ಮೂರ್ತಿಗಳ ಪೂಜೆಯಿಂದ ಮನೆಗೆ ಒಳ್ಳೆಯದಾಗುತ್ತದೆ. ಹೀಗಾಗಿ ಸಾರ್ವಜನಿಕರು ಪಿಒಪಿ ಬಳಸದೆ, ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪೂಜಿಸಬೇಕು ಎಂದರು.
ಫಲಕಗಳ ಅಳವಡಿಕೆ: ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಬೆಂಬಲ ಸೂಚಿಸಿರುವ ಸಂಘವು ತನ್ನೆಲ್ಲ ದೇವಾಲಯಗಳಲ್ಲಿ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಪ್ರೋತ್ಸಾಹಿಸುವಂತಹ ಜಾಗೃತಿ ಸಂದೇಶವುಳ್ಳ ಬರಹವಿರುವ ಫಲಕಗಳನ್ನು ಅಳವಡಿಸಿದೆ. ಇದರೊಂದಿಗೆ ವಿವಿಧ ದೃಶ್ಯ ಮಾಧ್ಯಮಗಳ ಚರ್ಚಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅರ್ಚಕರು ಸಹ ಚತುರ್ಥಿಯ ಮಹತ್ವ, ಆಚರಣೆಯ ವಿಧಿ- ವಿಧಾನ, ಪಿಒಪಿ ಗಣೇಶ ಮೂರ್ತಿ ಬಳಕೆಯಿಂದ ಆಗುವ ಪರಿಣಾಮಗಳ ಕುರಿತು ಜನರಿಗೆ ಮಾಹಿತಿ ನೀಡುವಂತಹ ಕೆಲಸ ಮಾಡುತ್ತಿದ್ದಾರೆ.
* ವೆಂ. ಸುನೀಲ್‌ಕುಮಾರ್