ಬೀದರ: ಈ ಬಾರಿಯ ಗಣೇಶ ಚತುರ್ಥಿ ಹಬ್ಬಕ್ಕೆ ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿಗಳ ಮಾರಾಟಕ್ಕೆ ಕಡಿವಾಣ ಹಾಕಲು ನಗರ ಸಭೆ ಚಿಂತನೆ ನಡೆಸಿದ್ದು, ಪಿಒಪಿ ಮೂರ್ತಿ ಮಾರಾಟ ಮಾಡುವರ ಮೂರ್ತಿಗಳನ್ನು ಜಪ್ತಿ ಮಾಡುವ ನಿಟ್ಟಿನಲ್ಲಿ ಕೂಡ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಸದ್ಯ ನಗರದಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸುವ ಮಾಲೀಕರಿಗೆ ಈಗಾಗಲೇ ನಗರ ಸಭೆ ನೋಟಿಸ್ ಜಾರಿ ಮಾಡಿದ್ದು, ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸುವಂತೆ ಸೂಚಿಸಿದೆ. ಅಲ್ಲದೇ ಪಿಒಪಿಯಿಂದ ತಯಾರಿಸಿದ ಗಣೇಶ ಮೂರ್ತಿಗಳು ಮಾರಾಟಕ್ಕೆ ಬಂದರೆ ಜಪ್ತಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆದರೆ, ಸದ್ಯ ಜಿಲ್ಲೆಯಲ್ಲಿ ಹೆಚ್ಚಾಗಿ ಪಿಒಪಿ ಗಣೇಶ ಮೂರ್ತಿಗಳು ತಯಾರಿಸಲಾಗುತ್ತಿದ್ದು, ಯಾವ ಅಧಿಕಾರಿಗಳೂ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿಲ್ಲ.
ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿಗಳಿಂದ ಪರಿಸರ ಹಾಗೂ ಜಲ ಮೂಲಗಳ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತಿರುವ ಕುರಿತು ಈಗಾಗಲೇ ಪರಿಸರ ಇಲಾಖೆ ಆಯಾ ನಗರ ಸಭೆ, ಪುರಸಭೆಗಳಿಗೆ ನೋಟಿಸ್ ನೀಡಿ, ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿರುವುದಾಗಿ ಪರಿಸರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಸದ್ಯ ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದು, ಬಹುತೇಕರು ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಪರಿಸರ ಸ್ನೇಹಿ ಗಣೆಶ ಮೂರ್ತಿಗಳು ಜನಸಾಮಾನ್ಯರಿಗೆ ಸಿಗಬೇಕು ಎಂಬ ನಿಟ್ಟಿನಲ್ಲಿ ಹುಮನಾಬಾದ ತಾಲೂಕಿನ ರಾಂಪೂರ್ ಗ್ರಾಮದ ಚಿತ್ರ ಕಲಾವಿದ ಕಾಶಿನಾಥ ಗಿರಿಗಿರಿ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ.
ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿಗಳನ್ನು ನಿರ್ಮಿಸದೆ ಮಣ್ಣಿನ ಗಣೇಶ ನಿರ್ಮಿಸುವಂತೆ ಈಗಾಗಲೇ ಗಣೇಶ ಮೂರ್ತಿ ತಯಾರಿಸುವವರಿಗೆ ನೋಟಿಸ್ ನೀಡಲಾಗಿದೆ. ಅಲ್ಲದೇ ಪರಿಸರ ಇಲಾಖೆಯ ನಿರ್ದೇಶನ ಕೂಡ ಇದ್ದು, ಪಿಒಪಿ ಗಣೇಶ ಮೂರ್ತಿಗಳ ತಯಾರಿಸಿ ಮಾರುಕಟ್ಟೆಗೆ ತಂದರೆ ಅವುಗಳನ್ನು ನಗರ ಸಭೆಯಿಂದ ಜಪ್ತಿ
ಮಾಡಲಾಗುವುದು. ಜನರು ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡುವ ಗಣೇಶ ಮೂರ್ತಿಗಳ ವಿಸರ್ಜನೆಗೆ ಆಯಾ ವಾರ್ಡ್‌ಗಳಲ್ಲಿ ಒಂದು ಟ್ಯಾಂಕರ್ ಅಥವಾ ಹಳೆ ನಗರದಲ್ಲಿ ವಿಸರ್ಜನೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿವೆ.
ಮನೋಹರ, ನಗರಸಭೆ ಆಯುಕ್ತರು, ಬೀದರ
ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿಗಳಿಂದ ಪರಿಸರದ ಮೇಲೆ ದುಷ್ಪರಿಣಾಮಗಳು ಬೀರುತ್ತಿವೆ. ವಿಷಪೂರಿತ ಬಣ್ಣ ನೀರಿನಲ್ಲಿ ಸೇರಿ ಜಲಚರ, ದನಕರುಗಳು ಹಾಗೂ ಮನುಷ್ಯರ ಆರೋಗ್ಯದ ಮೇಲೂ ಪರಿಣಾಮವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸದಂತೆ ನೋಡಿಕೊಳ್ಳಲು ನಗರ ಸಭೆಗೆ ತಿಳಿಸಲಾಗಿದೆ. ಯಾವ ಸ್ಥಳಗಳಲ್ಲಿ ಗಣೇಶ ಮೂರ್ತಿಗಳು ತಯಾರಿಸಲಾಗುತ್ತಿದೆ ಎಂಬುದನ್ನು ನಗರಸಭೆ ಅಧಿಕಾರಿಗಳು ಗುರುತಿಸಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿದೆ.
ಸುಗಂಧಾ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ
ಚಿತ್ರ ಕಲಾವಿದನಾಗಿ ವಿವಿಧ ನಗರಗಳಲ್ಲಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಗಣೇಶ ಚತುರ್ಥಿ ಹಬ್ಬದಲ್ಲಿ ಪೂಜೆ ಮಾಡಿದ ದೊಡ್ಡ ಗಣೇಶ ಮೂರ್ತಿಗಳನ್ನು ನೀರಿಗೆ ಹಾಕಿದಾಗ ಅವು ಕರಗದ ಹಿನ್ನೆಲೆಯಲ್ಲಿ ಒಡೆದು ಪುಡಿ ಮಾಡುವುದನ್ನು ನೋಡಿದ್ದೇನೆ. ನಾವು ಭಕ್ತಿಯಿಂದ ಪೂಜಿಸಿದ ಮೂರ್ತಿಗಳನ್ನು ನಮ್ಮ ಎದುರಿಗೇ ಒಡೆದರೆ ದೇವರಿಗೆ ಮಾಡುವ ಅಪಮಾನ ಎಂಬುದು ಅರಿವಾಗಿದೆ. ಅಲ್ಲದೇ ನಾನು ಕೂಡ ಈ ಹಿಂದೇ ಪಿಒಪಿ ಗಣಪತಿ ಕೂಡ ತಯಾರಿಸುತ್ತಿದೆ. ಆದರೆ ಈ ವರ್ಷ ಪರಿಸರಕ್ಕೆ ಧಕ್ಕೆ ಆಗದಂತ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ ಪರಿಸರ ಸಂರಕ್ಷಣೆಗೆ ಕೈ ಜೋಡಿಸಿದ್ದೇನೆ.
ಕಾಶಿನಾಥ ಗಿರಿಗಿರಿ, ಕಲಾವಿದ