Advertisement

ನಗರಾಭಿವೃದ್ಧಿಯೋ-ವೃದ್ಧಾಪ್ಯವೋ?

05:11 PM Mar 04, 2020 | Suhan S |

ಹೊನ್ನಾವರ: ನಗರಾಭಿವೃದ್ಧಿ ನಗರೋತ್ಥಾನ ಎಂಬ ಹೆಸರಿನಲ್ಲಿ ಆರಂಭವಾದ ಕಾಮಗಾರಿ ಸರಿಪಡಿಸುವ ಅಧಿಕಾರ ಪಪಂಗೂ ಇಲ್ಲ, ಶಾಸಕರ ಮಾತು ಕೇಳುವುದಿಲ್ಲ. ಈ ಯೋಜನೆಯಡಿ

Advertisement

ಆರಂಭವಾದ ಹೊನ್ನಾವರ ಒಳಚರಂಡಿ ಕಾಮಗಾರಿ ಅರ್ಧದಷ್ಟು ಮುಗಿದಿಲ್ಲ. ಈಗ ಕೆಲವರು ಬೇಡವಾಗಿತ್ತು ಅನ್ನುತ್ತಾರೆ. ಹೊಟ್ಟೆ ಸೀಳಿ ಶಸ್ತ್ರಚಿಕಿತ್ಸೆ ಮಾಡಿ ಹೊಲಿಗೆ ಹಾಕಿದಂತೆ ರಸ್ತೆ ಮಧ್ಯೆ ಸರಿಯಾದ ರಸ್ತೆಯನ್ನು ಅಗೆದು ಒಳಚರಂಡಿ ಪೈಪ್‌ ಸೇರಿಸಿ, ಚೇಂಬರ್‌ ನಿರ್ಮಿಸಿದ್ದು ಇದು ರಸ್ತೆಗಿಂತ ಎತ್ತರವಾಗಿದೆ. ಒಬ್ಬ ಅರ್ಧ ಓದಿದ ಸರ್ಜನ್‌ ಮಾಡಿದ ಶಸ್ತ್ರಕ್ರಿಯೆಯಂತಿದೆ. ಪ್ರಭಾತನಗರ, ಪೇಟೆ ಮತ್ತು ದುರ್ಗಾಕೇರಿ ಎಂಬ ಮೂರು ಹಂತದಲ್ಲಿ ಹರಡಿರುವ ಹೊನ್ನಾವರ ಪಟ್ಟಣದಲ್ಲಿ ಗುಡ್ಡದ ಓರೆಗಳಲ್ಲಿ ಕೆಳಗಿನಪಾಳ್ಯ, ಗುಂಡಿಬೈಲ್‌, ಮಡಿವಾಳ ಹಳ್ಳ ಮೊದಲಾದ ಪ್ರದೇಶಗಳು ಎತ್ತರ, ತಗ್ಗಿನಲ್ಲಿದೆ. ಇಲ್ಲಿ ಹೇಗೆ ಒಳಚರಂಡಿ ಮಾಡಿದರೂ ಸಮಸ್ಯೆ ಖಂಡಿತ ಆಗಿರುವಾಗ ಕಳಪೆ ಕಾಮಗಾರಿ ನಗರದ ಸೌಂದರ್ಯ ಮುಕ್ಕು ಮಾಡಿದೆ.

ಶುರುವಿಂದಲೂ ಸಮಸ್ಯೆಗಳ ಸರಮಾಲೆ ಸೃಷ್ಟಿಸುತ್ತಿರುವ ನಗರಾಭಿವೃದ್ಧಿ ಯೋಜನೆಯ ಒಳಚರಂಡಿ ಕಾಮಗಾರಿ ಅವಾಂತರ ಜನರ ನೆಮ್ಮದಿ ಕೆಡಿಸಿದೆ. ಜನ ಹಲವು ಬಾರಿ ಪ್ರತಿಭಟಿಸಿ ಮುಗಿದಿದೆ. ಪಟ್ಟಣದ ಪ್ರಮುಖ ಮಾರ್ಗದ ರಸ್ತೆಗಳನ್ನೆಲ್ಲ ಅಗೆದು ನಾನಾಚಾರ ಮಾಡಿರುವ ಗುತ್ತಿಗೆದಾರರು ತಮ್ಮ ಮನಸ್ಸಿಗೆ ತೋಚಿದಂತೆ ಕೆಲಸ ಮಾಡುತ್ತಿದ್ದಾರೆ ಎನ್ನುವ ಆರೋಪ ಇಂದು ನಿನ್ನೆಯದಲ್ಲ. ಆದರೂ ಇದನ್ನು ಪ್ರಶ್ನಿಸಿದವರಿಗೆ ಒಂದಲ್ಲ ಒಂದು ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದಾರೆ ಎಂದು ಶಾಸಕರಲ್ಲಿಯೂ ಜನ ದೂರಿದ್ದರು. ಹಿಂದಿನ ಶಾಸಕಿ ಶಾರದಾ ಶೆಟ್ಟಿಯವರ ಕಾಲದಲ್ಲಿ ಯೋಜನೆ ಜಾರಿಗೆ ಬಂತು, ಆಗ ಕಾಮಗಾರಿ ಸರಿ ಇಲ್ಲ ಎಂದು ಪ್ರತಿಭಟಿಸಿದ ಪಕ್ಷದವರು ಈಗ ಅಧಿಕಾರದಲ್ಲಿದ್ದಾರೆ. ಕಾಮಗಾರಿ ನಿಂತೇ ಹೋಗಿದೆ. ಇವರು ಬಾಯಿ ಬಿಡುತ್ತಿಲ್ಲ. ಆಗ ಒಳಚರಂಡಿ ನೀರು

ಶುದ್ಧಗೊಳಿಸುವ ಘಟಕಕ್ಕೆ ಆಯ್ಕೆಯಾದ ಜಾಗದ ಪರಿಸರದವರು ಈಗ ನಮ್ಮಲ್ಲಿ ಬೇಡ, ಕೋರ್ಟಿಗೆ ಹೋಗುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಒಟ್ಟಾರೆ ಕಾಮಗಾರಿ ನಿಂತಿದೆ. ಹತ್ತು ಹಲವಾರು ಮನವಿ ಸಲ್ಲಿಕೆಯ ಜೊತೆಗೆ ಕೆಲದಿನಗಳ ಹಿಂದೆ ಶಾಸಕರ ನೇರೃತ್ವದಲ್ಲಿ ಸಭೆ ಸೇರಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮುಖಾಮುಖೀ ಚರ್ಚೆಯೂ ನಡೆದು ಜನರಿಗೆ ತೊಂದರೆಯಾಗದ ರೀತಿಯಲ್ಲಿ ಗುಣಮಟ್ಟದ ಕಾಮಗಾರಿ ನಡೆಸುವಂತೆ ಶಾಸಕರು ಸಂಬಂಧಪಟ್ಟವರಿಗೆ ಸೂಚಿಸಿದ್ದರು ಅಂತೂ ಇಂದು ಸಮಸ್ಯೆ ಬಗೆಹರಿಯಿತು ಎಂದುಕೊಂಡಿದ್ದ ನಗರದ ನಿವಾಸಿಗಳ ನಿರೀಕ್ಷೆ ಹುಸಿಯಾಗಿದ್ದು ಗುತ್ತಿಗೆದಾರರು ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿರುವುದು ಕಂಡುಬಂದಿದೆ.

ಸಾರಿಗೆ ಬಸ್ಸು, ಪ್ರಯಾಣಿಕರ ಟೆಂಪೋ ನಿಲ್ದಾಣಕ್ಕೆ ಮರಳುವ ಮಾರ್ಗವಾದ ಕೋರ್ಟ್‌ ರಸ್ತೆಯನ್ನು ಕೆಲದಿನಗಳ ಹಿಂದೆ ಅಗೆದು ಹೊಂಡ ಗುಂಡಿಗಳನ್ನು ನಿರ್ಮಿಸಿದ್ದಾರೆ. ಇದರಿಂದ ತಾಲೂಕಾಸ್ಪತ್ರೆಗೆ ಬರುವ ರೋಗಿಗಳಿಗೆ, ಕೋರ್ಟ್‌ಗೆ ಬರುವವರಿಗೆ, ತೋಟಗಾರಿಕೆ ಇಲಾಖೆಗೆ ಬರುವ ರೈತರಿಗೆ, ಪಕ್ಕದಲ್ಲಿರುವ ಶಾಲೆಗೆ ಆಗಮಿಸುವ ಸಾವಿರಾರು ವಿದ್ಯಾರ್ಥಿಗಳಿಗೆ ನಿತ್ಯ ಸಂಕಟ ತಂದಿಟ್ಟಿದ್ದು ಯಾವಾಗ ಮುಗಿಯುತ್ತೋ ಅಂದುಕೊಂಡಿದ್ದು ಮುಗಿದರೂ ಸಮಸ್ಯೆ ತಪ್ಪಿಲ್ಲ. ಮುಚ್ಚಳಗಳು ಎದ್ದು ನಿಂತಿವೆ.

Advertisement

ಕೇವಲ ಸಾರ್ವಜನಿಕರಿಗಷ್ಟೇ ಅಲ್ಲದೆ ಪಟ್ಟಣದಲ್ಲಿ ಸಂಚರಿಸುವ ಆಟೋ ಚಾಲಕರಿಗೂ ಸವಾಲಾಗಿರುವ ರಸ್ತೆಯನ್ನು ಪಪಂನವರು ಮುತುವರ್ಜಿವಹಿಸಿ ತಕ್ಷಣ ಸರಿಪಡಿಸಬೇಕು ಎಂದು ರಿಕ್ಷಾದವರು ಪ್ರತಿಭಟಿಸಿದ್ದರೂ ಪ್ರಯೋಜನವಿಲ್ಲವಾಗಿದೆ. ಹೇಳಿಕೊಳ್ಳುವುದಕ್ಕೆ ಪ್ರಭಾತ ನಗರ ಹೊನ್ನಾವರ ಪಟ್ಟಣದ ಪ್ರತಿಷ್ಠಿತ ಏರಿಯಾ ಇಲ್ಲಿನ ಬಹತೇಕ ಮನೆಗಳಲ್ಲಿ ವಾಸಿಸುವವರು ವೈದ್ಯರು, ಉಪನ್ಯಾಸಕರು, ಉದ್ಯಮಿಗಳು ರಾಜಕೀಯ ನಾಯಕರುಗಳೇ ಆಗಿದ್ದಾರೆ. ಕೇವಲ ಸಿರಿವಂತರ ಬಡಾವಣೆ ಎನ್ನುವುದಕ್ಕಿಂತ ಹೆಚ್ಚಿನ ಶಾಲಾ ಕಾಲೇಜುಗಳು ಕೇಂದ್ರೀಕೃತ ವಾಗಿರುವುದು ಇದೇ ಪ್ರದೇಶದಲ್ಲಿಯೇ ಆಗಿರುವುದರಿಂದ ತಾಲೂಕಿನ ಹಲವಾರು ಕಡೆಗಳಿಂದ ಬರುವ ವಿದ್ಯಾರ್ಥಿಗಳು ಹದಗೆಟ್ಟ ರಸ್ತೆಯಲ್ಲಿ ಓಡಾಡುವುದಕ್ಕೆ ಕಷ್ಟವಾಗಿದೆ. ಕೋಟ್ಯಾಂತರ ರೂ. ವೆಚ್ಚದಲ್ಲಿ ಕೆಲವೆಡೆ ಕಾಂಕ್ರೀಟು, ಕೆಲವೆಡೆ ಟಾರು ರಸ್ತೆ ಅಲ್ಲಲ್ಲಿ ತೇಪೆ ಹಾಕಿದಂತೆ ನಿರ್ಮಾಣವಾಗುತ್ತಿದೆ.  ಒಳಚರಂಡಿಗಿಂತ ಹೊರಚರಂಡಿ ಇನ್ನೂ ಅವ್ಯವಸ್ಥಿತವಾಗಿದೆ. ನಗರಸಭೆ ಸದಸ್ಯರು ಆಯ್ಕೆಯಾಗಿ ವರ್ಷವಾದರೂ ಅಧಿಕಾರವಿಲ್ಲದೇ ಕೂತಿದ್ದಾರೆ. ಅಭಿವೃದ್ಧಿ ಅನಾಥವಾಗಿದೆ.

 

-ಜೀಯು, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next