Advertisement

ಹೊಸದಾಗಿ ಡಾಮರುಗೊಂಡ ರಸ್ತೆಗೆ ಮತ್ತೆ ತೇಪೆ…!

11:40 AM Apr 12, 2022 | Team Udayavani |

ಗೋಳಿಯಂಗಡಿ: ಕೋಟ್ಯಂತರ ರೂ. ವೆಚ್ಚದಲ್ಲಿ ಹೊಸದಾಗಿ ಕೆಲವು ದಿನದ ಹಿಂದಷ್ಟೇ ಡಾಮರು ಕಾಮಗಾಯಾದ ರಸ್ತೆಯಿದು. ಅದಾಗಲೇ ಈ ರಸ್ತೆಯ ಅಲ್ಲಲ್ಲಿ ಡಾಮರು ಎದ್ದು ಹೋಗಿ ಹೊಂಡ ಕಾಣಿಸಿಕೊಂಡಿದ್ದು, ಅಲ್ಲಿಗೆ ತೇಪೆ ಹಾಕಲಾಗಿದೆ. ಹೊಸ ರಸ್ತೆಗೆ ತೇಪೆ ಹಾಕುವ ಪರಿಸ್ಥಿತಿ ಬಂದಿರುವುದು ಮಡಾಮಕ್ಕಿ ಗ್ರಾ.ಪಂ. ವ್ಯಾಪ್ತಿಯ ಗುಡ್ಡೆಯಂಗಡಿಯಿಂದ ಬೆಪ್ಡೆಗೆ ಸಂಚರಿಸುವ ರಸ್ತೆಗೆ. ಊರವರಿಂದ ಕಳಪೆ ಕಾಮಗಾರಿ ಆರೋಪ ಕೇಳಿ ಬಂದಿದೆ.

Advertisement

ಮಡಾಮಕ್ಕಿ ಗ್ರಾ.ಪಂ. ವ್ಯಾಪ್ತಿಯ ಮಾಂಡಿ ಮೂರುಕೈ ಬಳಿಯ ಜಂಕ್ಷನ್‌ನಿಂದ ಗುಡ್ಡೆಯಂಗಡಿ ಮಾರ್ಗವಾಗಿ ಬೆಪ್ಡೆಗೆ ತೆರಳುವ ಮಾರ್ಗದ ಸುಮಾರು 3 ಕಿ.ಮೀ. ದೂರದ ರಸ್ತೆಗೆ ಡಾಮರು ಕಾಮಗಾರಿಯಾಗಿದೆ. ಈ ಪೈಕಿ ಅಲ್ಲಲ್ಲಿ ಕೆಲವೆಡೆ ಡಾಮರು ಎದ್ದು ಹೋಗಿ, ಈಗ ಅಲ್ಲಿಗೆ ಮತ್ತೆ ತೇಪೆ ಹಾಕಲಾಗಿದೆ.

ಗ್ರಾಮ ಸಡಕ್‌ ಯೋಜನೆ

ಈ ಗುಡ್ಡೆಯಂಗಡಿ – ಬೆಪ್ಡೆ ರಸ್ತೆಯನ್ನು ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಅಂದಾಜು 4.48 ಕೋ. ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ. ಒಟ್ಟು 5 ಕಿ.ಮೀ. ದೂರದ ರಸ್ತೆಯ ಪೈಕಿ 2 ಕಿ.ಮೀ. ಕಾಂಕ್ರೀಟಿಕರಣ ಹಾಗೂ ಇನ್ನುಳಿದ 3 ಕಿ.ಮೀ. ದೂರದವರೆಗೆ ಡಾಮರು ಕಾಮಗಾರಿ ನಡೆಸಲಾಗಿದೆ. ಕಳೆದ ವರ್ಷದ ಜು.5ಕ್ಕೆ ಕಾಮಗಾರಿ ಆರಂಭಗೊಂಡಿದ್ದು, ಈ ವರ್ಷದ ಜು. 5ರ ವರೆಗೆ ಕಾಮಗಾರಿ ಪೂರ್ಣಗೊಳಿಸಲು ಕಾಲಾವಕಾಶವಿದೆ.

100ಕ್ಕೂ ಮಿಕ್ಕಿ ಮನೆ

Advertisement

ಇದು ಮಾಂಡಿಮೂರುಕೈಯಿಂದ ಗುಡ್ಡೆಯಂಗಡಿಯಾಗಿ ಬಡಾಬೆಪ್ಡೆ, ಕುಂಟುಹೊಳೆ ಮೂಲಕ ಮಾಯಾ ಬಜಾರ್‌ಗೆ ಹೋಗುವ ರಸ್ತೆಯಾಗಿದೆ.

ಈ ಮಾರ್ಗದಲ್ಲಿ ನಿತ್ಯ ನೂರಾರು ವಾಹನಗಳು ಓಡಾಟ ನಡೆಸುತ್ತವೆ. 100 ಕ್ಕೂ ಅಧಿಕ ಮನೆ ಮಂದಿ ಇದೇ ಮಾರ್ಗವನ್ನು ಆಶ್ರಯಿಸಿದ್ದಾರೆ. ಈ ರಸ್ತೆಗೆ ಅನೇಕ ವರ್ಷಗಳ ಹಿಂದೆ ಕಾಮಗಾರಿಯಾಗಿತ್ತು. ಆ ಬಳಿಕ ಮರು ಡಾಮರು ಕಾಮಗಾರಿಗೆ ಈ ಭಾಗದ ಜನ ಒತ್ತಾಯಿಸುತ್ತಲೇ ಇದ್ದರು.

ತನಿಖೆ ನಡೆಸಿ, ಕ್ರಮ ಕೈಗೊಳ್ಳಿ

ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆಯೊಂದು ಈ ರೀತಿಯಾಗಿ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಕಳಪೆಯಾಗಿರುವುದು ದುರದೃಷ್ಟಕರ. ಅದನ್ನೀಗ ಮುಚ್ಚಿ ಹಾಕಲು ಅದರ ಮೇಲೆಯೇ ತೇಪೆ ಹಾಕಲಾಗಿದೆ. ಇದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ. ಕೂಡಲೇ ಗ್ರಾ.ಪಂ. ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಸರಿಯಾದ ತನಿಖೆ ನಡೆಸಿ, ಕಳಪೆ ಕಾಮಗಾರಿ ನಡೆಸಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎನ್ನುವುದಾಗಿ ಊರವರು ಆಗ್ರಹಿಸಿದ್ದಾರೆ.

ಪರಿಶೀಲನೆ ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು ಶೀಘ್ರ ಅಧ್ಯಕ್ಷರ ನೇತೃತ್ವದಲ್ಲಿ ಪಂಚಾಯತ್‌ ನಿಯೋಗವು ಭೇಟಿ ನೀಡಿ ಪರಿಶೀಲನೆ ನಡೆಸಿ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು. -ದಯಾನಂದ ಪೂಜಾರಿ, ಉಪಾಧ್ಯಕ್ಷರು, ಮಡಾಮಕ್ಕಿ ಗ್ರಾ.ಪಂ.

ಯಾರು ಹೊಣೆ ಗುಡ್ಡೆಯಂಗಡಿಯಿಂದ ಬೆಪ್ಡೆಗೆ ತೆರಳುವ ಮಾರ್ಗದ ಕಾಮಗಾರಿಯೂ ಕಳಪೆಯಾಗಿದ್ದು, ಮಾತ್ರವಲ್ಲದೆ ಕಿರಿದಾದ ರಸ್ತೆಯಾಗಿದೆ. ರಸ್ತೆಯ ಬದಿಯ ಕಾಮಗಾರಿ ಸಹ ಪೂರ್ಣಗೊಳಿಸಿಲ್ಲ. ಈ ಕಳಪೆ ಕಾಮಗಾರಿಗೆ ಯಾರು ಹೊಣೆ. ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತುಕೊಂಡು, ಸರಿಪಡಿಸಲಿ. – ಕೃಷ್ಣ ಶೆಟ್ಟಿ ಶೇಡಿಮನೆ, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next