ಬಾಗೇಪಲ್ಲಿ: 1 ಕೋಟಿ ರೂ ಅನುದಾನದಲ್ಲಿ ನಿರ್ಮಿಸಿರುವ ಸಿಸಿ ರಸ್ತೆ ಕಾಮಗಾರಿಯಲ್ಲಿ ಕಳಪೆಯಿಂದ ಕೂಡಿದ್ದು, ಮರು ಕಾಮಗಾರಿ ಮಾಡುವಂತೆ ಗುತ್ತಿಗೇದಾರನಿಗೆ ಅದೇಶ ಮಾಡಿ ಕಿತ್ತು ಹೋಗಿರುವ ರಸ್ತೆಯನ್ನು ಸರಿಪಡಿಸುತ್ತೇವೆ ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ತಿಮ್ಮರಾಯಪ್ಪ ಭರವಸೆ ನೀಡಿದರು.
ತಾಲೂಕಿನ ಮಾರಗಾನುಕುಂಟೆ ಗ್ರಾಮದಲ್ಲಿ ಪಿಡಬ್ಲ್ಯೂಡಿಯಿಂದ ನಿರ್ವಹಿಸಲಾದ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಉದಯವಾಣಿಯಲ್ಲಿ ವರದಿ ಪ್ರಕಟಗೊಂಡು ಬೆನ್ನಲ್ಲೆ ಎಚ್ಚೆತ್ತುಕೊಂಡ ಕಾರ್ಯಪಾಲಕ ಅಭಿಯಂತರ ತಿಮ್ನರಾಯಪ್ಪ ಮತ್ತು ಅಧಿಕಾರಿಗಳ ತಂಡ ಗುರುವಾರ ಮಾರಗಾನುಕುಂಟೆ ಗ್ರಾಮಕ್ಕೆ ಭೇಟಿ ನೀಡಿ ಮಾರಗಾನುಕುಂಟೆ ಗ್ರಾಮದಲ್ಲಿ ಮಾಡಿರುವ 600 ಮೀ. ಉದ್ದದ ಸಿಸಿ ರಸ್ತೆ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿದರು.
ನ್ಯೂನತೆಗಳು ಕಂಡು ಬಂದಿದ್ದು, ಮರು ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಆದೇಶಿಸಿದ್ದಾರೆ. ಅಭಿಯಂತರ ತಿಮ್ಮರಾಯಪ್ಪ ಮಾತನಾಡಿ, ಮಾರಗಾನುಕುಂಟೆ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿ ಮಾಡುವ ಸಮಯದಲ್ಲಿ ಮಳೆ ಬಂದಿದ್ದು, ಕೆಲ ಪ್ರದೇಶಗಳಲ್ಲಿ ಸಿಮೆಂಟ್ ಕಾಂಕ್ರಿಟ್ ಮತ್ತು ಜಲ್ಲಿಕಲ್ಲು ಕಿತ್ತು ಬಂದಿದೆ, ಕಿತ್ತು ಬಂದಿರುವ ಕಾಂಕ್ರೀಟ್‌ನ್ನು ಸರಿಪಡಿಸಲು ಕಾಮಗಾರಿ ಮಾಡಿರುವ ಗುತ್ತಿಗೇದಾರನಿಗೆ ತಿಳಿಸಲಾಗಿದೆ. ಈಗಾಗಲೇ ಹಾಕಿರುವ ಸಿಸಿ ರಸ್ತೆ ಮೇಲೆ ಮತ್ತೆ 4 ಇಂಚು ಸಿಮೆಂಟ್ ಕಾಂಕ್ರಿಟ್ ಹಾಕುವಂತೆ ಸೂಚಿಸಿ ಸಮಸ್ಯೆಯನ್ನು ಇತ್ಯರ್ಥಗೊಳಿಸುತ್ತೇವೆ ಎಂದರು.
ಪರ್ಸೆಂಟೇಜ್ ಕಾಮಗಾರಿ ಎಂಬ ಅನುಮಾನ : ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣ ಸ್ವಾಮಿ ಶಿಪಾರಸ್ಸಿನಂತೆ ಸಮಾಜ ಕಲ್ಯಾಣ ಇಲಾಖೆವತಿಯಿಂದ ಟಿಎಸ್‌ಪಿ ಯೋಜನೆಯಡಿ ಬಿಡುಗಡೆ ಗೊಂಡಿರುವ 1 ಕೋಟಿ ರೂ. ಅನುದಾನವನ್ನು ಬಾಗೇಪಲ್ಲಿ ಕ್ಷೇತ್ರದ ಮಾರಗಾನುಕುಂಟೆ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿ ಮಾಡಲಾಗಿದೆ. ಶಾಸಕ ಎಸ್.ಎನ್.ಸುಬ್ಟಾರೆಡ್ಡಿ ಕಾಮಗಾರಿಯ ಭೂಮಿಪೂಜೆ ನಡೆಸಿದ್ದರು. ಕಾಮಗಾರಿ ಗುತ್ತಿಗೇದಾರ ಬೆಂಗಳೂರು ಮೂಲದ ವೈ.ವಿ.ಪೃಥ್ವಿಕ್ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಸಂಬಂಧಿ ಕರು ಎನ್ನಲಾಗಿದೆ. ಮಾರಗಾನುಕುಂಟೆ ಗ್ರಾಮ ದಲ್ಲಿ ಮಾಡಿರುವ ಸಿಸಿ ರಸ್ತೆ 20+20=40 ಪರ್ಶೇಂಟ್ ಕಮೀಷನ್ ಕಾಮಗಾರಿ ಆಗಿದ್ದು, ಕಳಪೆ ಕಾಮಗಾರಿ ಮಾಡುತ್ತಿರುವ ಬಗ್ಗೆ ಸ್ಥಳೀಯ ಸಂಶಯ ವ್ಯಕ್ತಪಡಿಸಿದ್ದು, ನಾಗರಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.