Advertisement

ಅನ್ನಭಾಗ್ಯದಲ್ಲಿ ಕಳಪೆ ತೊಗರಿ ಬೇಳೆ ಪೂರೈಕೆ

06:00 AM Aug 01, 2018 | Team Udayavani |

ಬೀದರ: ಹಿಂದಿನ ಸರ್ಕಾರದ ಬಹು ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಲ್ಲಿ ಕಳಪೆ ಗುಣಮಟ್ಟದ ತೊಗರಿಬೇಳೆ ವಿತರಣೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಬೇಳೆಯನ್ನು ಕುದಿಯಲು ಇಟ್ಟರೆ ಗಂಟೆಗಟ್ಟಲೇ ಸಮಯ ಬೇಕಾಗುತ್ತದೆ ಎಂದೂ ಫ‌ಲಾನುಭವಿಗಳು ಆಪಾದಿಸಿದ್ದಾರೆ.

Advertisement

ರೈತರು ಬೆಳೆಯುವ ಉತ್ತಮ ಗುಣಮಟ್ಟದ ತೊಗರಿಯನ್ನೇ ರಾಷ್ಟ್ರೀಯ ಕೃಷಿ ಸಹಕಾರ ಮಾರಾಟ ಮಹಾ ಮಂಡಳಿ (ನಾಫ್ಡ್) ಮೂಲಕ ವಿವಿಧ ತೊಗರಿ ಖರೀದಿ ಕೇಂದ್ರಗಳಿಂದ ಖರೀದಿಸಲಾಗುತ್ತಿದೆ. ಆದರೆ, ಸದ್ಯ ಅನ್ನಭಾಗ್ಯ ಯೋಜನೆಯಡಿ ವಿತರಣೆ ಮಾಡಲಾಗುತ್ತಿರುವ ತೊಗರಿ ಬೇಳೆ ಮಾತ್ರ ಗುಣಮಟ್ಟದ್ದಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದ್ದು, ಬೇರೆ ಬೇಳೆಕಾಳುಗಳನ್ನು ಮಿಶ್ರಣ ಮಾಡಲಾಗುತ್ತಿದೆಯೇ ಎಂಬ ಅನುಮಾನಗಳೂ ಮೂಡಿವೆ.

ಗುಣಮಟ್ಟ ಪರೀಕ್ಷೆ: ಟೆಂಡರ್‌ ಪಡೆದ ದಾಲ್‌ ಮಿಲ್‌ಗ‌ಳು ತೊಗರಿ ನಾಫ್ಡ್ ಮೂಲಕ ಪಡೆದು ಬೇಳೆಕಾಳು ಮಾಡಿ ಅನ್ನಭಾಗ್ಯ ಹಾಗೂ ಮಕ್ಕಳ ಮಧ್ಯಾಹ್ನದ ಊಟಕ್ಕೆ ವಿತರಿಸುತ್ತಿವೆ. ವಿತರಣೆಗೂ ಮುನ್ನ ಆಯಾ ತಾಲೂಕಿನ ಗೋದಾಮು ಸೇರುವ ವೇಳೆ ಗುತ್ತಿಗೆ ಪಡೆದ ಹೈದ್ರಾಬಾದ್‌ ಮೂಲದ ಭಗವತಿ ಏನಿಲ್ಯಾಬ್‌ ಮೂಲಕ ಬೇಳೆಕಾಳುಗಳ ಪರೀಕ್ಷೆ ನಡೆಸಲಾಗುತ್ತಿದೆ. 

ಅಧಿಕಾರಿಗಳ ನಿರ್ಲಕ್ಷ್ಯ: ಪಡಿತರ ಅಂಗಡಿಯಲ್ಲಿ 1 ಕೆಜಿ ಪ್ಯಾಕ್‌ ತೊಗರಿ ಬೇಳೆಯನ್ನು 38 ರೂ.ಗೆ ವಿತರಿಸಲಾಗುತ್ತಿದೆ. ಮಹಾರಾಷ್ಟ್ರದ ಎರಡನೇ
ಗುಣಮಟ್ಟದ ತೊಗರಿ ಬೇಳೆ ಹಾಗೂ ಬಟಾಣಿ ಬೇಳೆಗಳನ್ನು ಮಿಶ್ರಣ ಮಾಡಿ ವಿತರಣೆ ಮಾಡುತ್ತಿದ್ದರೂ ಅಧಿಕಾರಿಗಳು ಮೌನ ವಹಿಸಿದ್ದಾರೆ. ಗುಣಮಟ್ಟದ ತೊಗರಿಯಿಂದ ಹೇಗೆ ಕಳಪೆ ಬೇಳೆ ಬರಲು ಸಾಧ್ಯವೆಂಬ ಪ್ರಶ್ನೆಯೂ ಉದ್ಭವಿಸಿದೆ.

ಟೆಂಡರ್‌: ತೊಗರಿ ಬೇಳೆ ವಿತರಿಸುವ ದಾಲ್‌ ಮಿಲ್‌ಗ‌ಳು ಟೆಂಡರ್‌ ಮೂಲಕ ಗುತ್ತಿಗೆ ಪಡೆದುಕೊಳ್ಳುತ್ತಿದ್ದಾರೆ. 100 ಕೆಜಿ ತೊಗರಿಯಲ್ಲಿ ಸರಾಸರಿ 60 ಕೆಜಿ ಉತ್ತಮ ತೊಗರಿ ಬೇಳೆ ಕಾಳಾಗುತ್ತವೆ. ಆದರೆ, ಗುತ್ತಿಗೆ ಪಡೆದವರು ಟೆಂಡರ್‌ನಲ್ಲಿ ಶೇ.70ಕ್ಕೂ ಅಧಿ ಕ ತೊಗರಿ ಬೇಳೆ ನೀಡುವುದಾಗಿ ದಾಖಲಿಸುತ್ತಿದ್ದು, ನಷ್ಟವಾಗ ಬಾರದೆಂದು ಇತರೆ ಬೇಳೆ ಮಿಶ್ರಣ ಮಾಡಿ ವಿತರಿಸಲಾಗುತ್ತಿದೆ ಎನ್ನುತ್ತಾರೆ ಕೆಲ ದಾಲ್‌ಮಿಲ್‌ಗಳ ಮಾಲೀಕರು.

Advertisement

ವಿವಿಧೆಡೆಯಿಂದ ದೂರುಗಳು ಬರುತ್ತಿವೆ. ಹೀಗಾಗಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯಿಂದ ತಪಾಸಣೆ ನಡೆಸಲು ಇಲಾಖೆ ಚಿಂತನೆ ನಡೆಸಿದೆ. ಈ ತಿಂಗಳಿಂದ ಎರಡು ಬಾರಿ ತಪಾಸಣೆ ನಡೆಸಿ, ಗುಣಮಟ್ಟಕ್ಕೆ ಮಹತ್ವ ನೀಡಲಾಗುವುದು.
● ಗುರುರಾಯ, ವ್ಯವಸ್ಥಾಪಕರು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಬೀದರ

ದೂರು ಕುರಿತು ಈಗಾಗಲೇ ಇಲಾಖೆಗೆ ಪತ್ರ ಬರೆದು ಮಾಹಿತಿ ನೀಡಲಾಗಿದೆ. ಸದ್ಯ ಬೇಳೆಯ ಗುಣಮಟ್ಟ ಪರಿಶೀಲನೆ ನಡೆಸುತ್ತಿರುವ ಸಂಸ್ಥೆಯಲ್ಲದೇ ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಇಲಾಖೆಯಿಂದಲೂ ಪರೀಕ್ಷೆ ನಡೆಸುವಂತೆ ತಿಳಿಸಲಾಗಿದೆ. 
● ಸಿ.ಎಸ್‌.ಬಾಗಲಕೋಟ, ಆಹಾರ ಇಲಾಖೆ ಪ್ರಭಾರಿ ಉಪನಿರ್ದೇಶಕ

ವಿವಿಧ ದಾಲ್‌ಮಿಲ್‌ಗ‌ಳಿಗೆ ಟೆಂಡರ್‌ ಮೂಲಕ ನೀಡಿ ಗುಣಮಟ್ಟದ ಬೇಳೆ ಕಾಳು ವಿತರಿಸಬೇಕು ಎನ್ನುವ ನಿಯಮವಿದೆ. ದಾಲ್‌ಮಿಲ್‌ಗ‌ಳು ನೀಡುವ ಬೇಳೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕು.
● ಜ್ಯೋತಿ, ನಾಫ್ಡ್ ಮುಖ್ಯಸ್ಥೆ, ಬೆಂಗಳೂರು

 ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next