Advertisement

ಅನಾಥೆ ರೇಖಾ ವೈದ್ಯ ಶಿಕ್ಷಣಕ್ಕೆ ಶಾಹೀನ್‌ ನೆರವು

04:00 PM Nov 09, 2021 | Team Udayavani |

ಬೀದರ: ಮೂರು ತಿಂಗಳ ಅವಧಿಯಲ್ಲಿ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಆಘಾತದ ನಡುವೆಯೇ ನೀಟ್‌ನಲ್ಲಿ ಸಾಧನೆಗೈದ ಕೊಪ್ಪಳ ಜಿಲ್ಲೆ ಕುಷ್ಟಗಿಯ ರೇಖಾ ಅಡೂರ ಅವರ ವೈದ್ಯಕೀಯ ಕೋರ್ಸ್‌ ಶುಲ್ಕ ಭರಿಸಲು ಶಾಹೀನ್‌ ಶಿಕ್ಷಣ ಸಂಸ್ಥೆಗಳ ಸಮೂಹ ಮುಂದಾಗಿದೆ.

Advertisement

ಶಹಾಪುರ ಗೇಟ್‌ ಸಮೀಪದ ಶಾಹೀನ್‌ ಪ.ಪೂ ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ರೇಖಾ ಅವರನ್ನು ಸನ್ಮಾನಿಸಿದ ಶಾಹೀನ್‌ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ| ಅಬ್ದುಲ್‌ ಖದೀರ್‌ ನೆರವಿನ ಅಭಯ ನೀಡಿದರು.

ಮಾನವೀಯ ನೆಲೆಯಲ್ಲಿ ವಿದ್ಯಾರ್ಥಿನಿಯ ಐದು ವರ್ಷಗಳ ವೈದ್ಯಕೀಯ ಕೋರ್ಸ್‌ನ ಶುಲ್ಕ ಭರಿಸಲಾಗುವುದು. ಅಗತ್ಯವಾದರೆ ಹಾಸ್ಟೆಲ್‌ ಶುಲ್ಕ ಕಟ್ಟಲು ಸಹ ಸಿದ್ಧ ಎಂದು ಪ್ರಕಟಿಸಿದರಲ್ಲದೇ ಸ್ಥಳದಲ್ಲೇ ವಿದ್ಯಾರ್ಥಿನಿಗೆ ವೈದ್ಯಕೀಯ ಕೋರ್ಸ್‌ನ ಮೊದಲ ವರ್ಷದ ಶುಲ್ಕದ 60 ಸಾವಿರ ರೂ. ಚೆಕ್‌ ನೀಡಿದರು.

ಆರ್ಥಿಕ ಸಮಸ್ಯೆ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕಾಗಬಾರದು. ದಾನಿಗಳು, ಸಂಘ ಸಂಸ್ಥೆಗಳು ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ನೆರವಿನ ಹಸ್ತ ಚಾಚಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.

ಕನಸು ಸಾಕಾರಗೊಳಿಸಿದ ಶಾಹೀನ್‌

Advertisement

ನಾನು ವೈದ್ಯೆಯಾಗಬೇಕು ಎಂದು ನನ್ನ ತಂದೆ-ತಾಯಿ ಹೊತ್ತಿದ್ದ ಕನಸನ್ನು ಶಾಹೀನ್‌ ಸಾಕಾರಗೊಳಿಸಿದೆ. ಆದರೆ, ಅದನ್ನು ನೋಡಲು ಈಗ ಅವರೇ ಇಲ್ಲ ಎಂದು ವಿದ್ಯಾರ್ಥಿನಿ ರೇಖಾ ಅಡೂರ ಭಾವುಕರಾದರು. ಪಿಯುಸಿ ಶಿಕ್ಷಣ ಶಾಹೀನ್‌ನಲ್ಲೇ ಪಡೆದಿದ್ದೇನೆ. 2020ರ ನೀಟ್‌ನಲ್ಲಿ 391 ಅಂಕ ಬಂದ ಕಾರಣ ವೈದ್ಯಕೀಯ ಸೀಟು ಲಭಿಸಿರಲಿಲ್ಲ. ಹೀಗಾಗಿ ಮತ್ತೆ ನೀಟ್‌ ತರಬೇತಿ ಪಡೆದೆ. ಎರಡನೇ ಪ್ರಯತ್ನದಲ್ಲಿ 591 ಅಂಕಗಳು ದೊರಕಿದ್ದು, 22,883ನೇ ರ್‍ಯಾಂಕ್‌ ಬಂದಿದೆ. ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಸಿಗಲಿದೆ ಎಂದು ತಿಳಿಸಿದರು.

ಕುಷ್ಟಗಿ ಪುರಸಭೆ ಉಪಾಧ್ಯಕ್ಷೆಯಾಗಿದ್ದ ತಾಯಿ ರಾಜೇಶ್ವರಿ ಏ.22ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮುಖ್ಯ ಶಿಕ್ಷಕರಾಗಿದ್ದ ತಂದೆ ಸಿದ್ದಪ್ಪ ಜು.30ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ನೀಟ್‌ ಸಿದ್ಧತೆಯಲ್ಲಿ ತೊಡಗಿದ್ದಾಗಲೇ ತಂದೆ-ತಾಯಿ ಸಾವು ಆಘಾತ ಉಂಟು ಮಾಡಿತ್ತು. ಬಹಳ ದಿನಗಳವರೆಗೆ ದುಃ ಖದಿಂದ ಹೊರಬರಲು ಆಗಿರಲಿಲ್ಲ ಎಂದು ಹೇಳಿದರು.

ಡಾ| ಅಬ್ದುಲ್‌ ಖದೀರ್‌ ಹಾಗೂ ಕಾಲೇಜು ಉಪನ್ಯಾಸಕರು ಸಮಾಧಾನ ಹೇಳಿ, ಆತ್ಮವಿಶ್ವಾಸ ತುಂಬಿದರು. ಕಾಲೇಜಿನಲ್ಲಿರುವ ಉತ್ತಮ ಶೈಕ್ಷಣಿಕ ವಾತಾವರಣದಿಂದಾಗಿಯೇ ವೈದ್ಯಕೀಯ ಪ್ರವೇಶಕ್ಕೆ ಅರ್ಹತೆ ಗಳಿಸಲು ಸಾಧ್ಯವಾಯಿತು. ಈಗ ವೈದ್ಯಕೀಯ ಶಿಕ್ಷಣಕ್ಕೂ ನೆರವಾಗುತ್ತಿರುವುದಕ್ಕೆ ಶಾಹೀನ್‌ಗೆ ಕೃತಜ್ಞಳಾಗಿದ್ದೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಿಇಒ ತೌಸಿಫ್‌ ಮಡಿಕೇರಿ, ಪ್ರಾಚಾರ್ಯ ಖಾಜಾ ಪಟೇಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next