ಔರಾದ: ಅಧಿಕಾರಿಗಳ ನಿರ್ಲಕ್ಷ್ಯದಿಂದ ಔರಾದ-ಚಿಂತಾಕಿ ಹಾಗೂ ಅಂತಾರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಅನಿವಾರ್ಯತೆ ಬಂದಿದೆ. ಆದರೂ ಕೂಡ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಈ ರಸ್ತೆ ಸುಧಾರಣೆಗೆ ಮುಂದಾಗದಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಔರಾದ ತಾಲೂಕು ಕೇಂದ್ರದಿಂದ ಮಮದಾಪೂರ, ತೇಗಂಪೂರ,ಅಲ್ಲಾಪೂರ, ಯನಗುಂದಾ, ಸುಂಧಾಳ, ಇಟಗ್ಯಾಳ ನಾಗಮಾರಪಳ್ಳಿ ಕರಂಜಿ ಸೇರಿದಂತೆ ನೆರೆಯ ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಸಂಚರಿಸುವವರ ನಿತ್ಯ ಕಥೆ ಇದು.
ಪ್ರತಿವರ್ಷ ಬೇಸಿಗೆ ಕಾಲದಲ್ಲಿ ರಸ್ತೆ ನಿರ್ವಹಣೆಗಾಗಿ ಸರ್ಕಾರ ಲಕ್ಷಾಂತರ ರೂ. ಅನುದಾನ ಬಿಡುಗಡೆ ಮಾಡುತ್ತಿದೆ. ಅದರಂತೆ ಅಧಿಕಾರಿಗಳು ಕೂಡ ರಸ್ತೆಯ ಗುಂಡಿ ಮಚ್ಚುವ ಮತ್ತು ಜಂಗಲ್ ಕ್ಲಿಯರನ್ಸ್ ಕೆಲಸ ಮಾಡುತ್ತಿದ್ದಾರೆ. ಕಾಮಗಾರಿ ಮಾಡಿದ ಎರಡು ತಿಂಗಳಲ್ಲೇ ರಸ್ತೆ ತನ್ನ ಮೊದಲ ಸ್ವರೂಪ ಪಡೆದುಕೊಳ್ಳುತ್ತಿದೆ.
ಸಂಪೂರ್ಣ ಹಾಳಾದ ರಸ್ತೆಯಲ್ಲಿ ಗಜಗಾತ್ರದ ಗುಂಡಿಗಳು ಬಿದ್ದು ಮಳೆ ನೀರು ತುಂಬಿಕೊಂಡಿದೆ. ದ್ವಿಚಕ್ರ ವಾಹನ ಮತ್ತು ಶಾಲಾ ವಾಹನಗಳು ಇಲ್ಲಿ ಹೆಚ್ಚಾಗಿ ಸಂಚಾರ ಮಾಡುತ್ತವೆ. ಆದ್ದರಿಂದ ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳು ರಸ್ತೆ ಗುಂಡಿಗಳನ್ನು ಮುಚ್ಚಲು ಮುಂದಾಗಬೇಕು. ಇಲ್ಲವಾದಲ್ಲಿ ವಾಹನ ಸವಾರರು ಕೈ ಕಾಲು ಮುರಿದುಕೊಳ್ಳುವು ಖಚಿತ.
ರಸ್ತೆ ಗುಂಡಿಯಿಂದ ತಪ್ಪಿಸಿಕೊಳ್ಳಲು ರಸ್ತೆ ಪಕ್ಕದಿಂದ ದ್ವಿಚಕ್ರ ವಾಹನ ಸವಾರರು ಪ್ರಯಾಣ ಮಾಡುತ್ತಿರುವುದನ್ನು ಕಂಡು ಹೊಲದ ಮಾಲೀಕರ ಕಲ್ಲುಗಳನ್ನು ಹಾಕಿದ್ದಾರೆ. ಇದರಿಂದ ರಾತ್ರಿ ವೇಗದಲ್ಲಿ ಬರುವ ವಾಹನ ಸವಾರರು ಬಿದ್ದು ಕೈ ಕಾಲು ಮುರಿದುಕೊಳ್ಳುತ್ತಾರೆ ಎನ್ನುವ ಆತಂಕ ಹೆಚ್ಚಾಗಿದೆ ಎಂದು ಮಮದಾಪೂರ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ರಸ್ತೆಯ ಎರಡೂ ಬದಿಯಲ್ಲಿ ಕಪ್ಪು ಮಣ್ಣು ಹಾಕಿರುವುದರಿಂದ ಸ್ವಲ್ಪ ಮಳೆ ಬಂದರೂ ಆಟೋ ಮತ್ತು ನಾಲ್ಕು ಚಕ್ರದ ವಾಹನಗಳು ರಸ್ತೆಯ ಕೆಳಗೆ ಹೋದರೆ ಸಿಲುಕಿಕೊಳ್ಳುತ್ತಿವೆ. ಕಳೆದ ತಿಂಗಳಲ್ಲಿ ಮಮದಾಪೂರ ಗ್ರಾಮ ಸಮೀಪ ಮೂರು ಚಕ್ರದ ವಾಹನ ಪಲ್ಟಿಯಾಗಿದೆ. ತೇಗಂಪೂರ ಗ್ರಾಮದ ಬಳಿ ಲಾರಿ ಕೆಸರಿನಲ್ಲಿ ಸಿಲುಕಿಕೊಂಡು ನಾಲ್ಕು ಗಂಟೆಗಳ ಕಾಲ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈಗಲಾದರೂ ರಸ್ತೆ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಮುಂದಾಗುತ್ತಾರಾ ಎಂದು ಕಾದು ನೋಡಬೇಕಿದೆ.
•ರವೀಂದ್ರ ಮುಕ್ತೇದಾರ