ಬ್ಯಾಡಗಿ: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ವಿತರಿಸುವ ಕ್ರಿಮಿನಾಶಕಗಳಿಗೆ ಕೃಷಿ ಇಲಾಖೆ ಅಧಿಕಾರಿಗಳು ಯಾವುದೇ ಬಿಲ್ ನೀಡುತ್ತಿಲ್ಲ. ಜತೆಗೆ ಕಳಪೆ ಕೀಟನಾಶಕಗಳಿಂದ ಬೆಳೆಗಳು ಮತ್ತಷ್ಟು ಕೀಟಬಾಧೆಗೆ ಒಳಗಾಗುತ್ತಿವೆ ಎಂದು ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ರೈತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಕದರಮಂಡಲಗಿ ರೈತ ಶಶಿಧರಸ್ವಾಮಿ ಛತ್ರದಮಠ ಮಾತನಾಡಿ, ಸೈನಿಕ ಹುಳುಗಳ ಬಾಧೆ ತಪ್ಪಿಸಲು ರೈತರ ಸಂಪರ್ಕ ಕೇಂದ್ರದಿಂದ ಸುಮಾರು 10 ಬಾಟಲಿಯಷ್ಟು ಕೀಟನಾಶಕ ತೆಗೆದುಕೊಂಡು ಹೋಗಿ 10 ಏಕರೆ ಗೋವಿನ ಜೋಳಕ್ಕೆ ಸಿಂಪಡಿಸಿದ್ದೆ. ಆದರೆ ಹುಳುವಿನ ಕಾಟ ಮಾತ್ರ ತಪ್ಪದೆ ಬೆಳೆಗಳು ಕೆಂಪು ಬಣ್ಣಕ್ಕೆ ತಿರುಗಿವೆ. ಸಾವಿರಾರು ಮೊತ್ತ ನೀಡಿ ಖರೀದಿ ಮಾಡಿದ ಕೀಟನಾಶಕ ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಸಬ್ಸಿಡಿ ಹೆಸರಲ್ಲಿ ಅಕ್ರಮ: ಕೃಷಿ ಇಲಾಖೆಯಲ್ಲಿ ಸಬ್ಸಿಡಿಯಲ್ಲಿ ನೀಡುತ್ತಿರುವ ಎಲ್ಲ ಸೌಲಭ್ಯಗಳು ಅಕ್ರಮದಿಂದ ಕೂಡಿವೆ. ಕೀಟನಾಶಕದ ಎಂಆರ್‌ಪಿ ಬೆಲೆ 610 ರೂ.ಗಳಿದ್ದು, ಶೇ.75 ರಷ್ಟು (ಸರಕಾರಿ ವಂತಿಕೆ) ಸಬ್ಸಿಡಿ ಎಂದು ಹೇಳಿ 200 ರೂ.
ಗಳಿಗೆ ಒಂದರಂತೆ ಕೀಟನಾಶಕ ನೀಡಲಾಗಿದೆ. ಆದರೆ ನಿಜವಾಗಿ ರೈತರು ನೀಡಬೇಕಾಗಿದ್ದು ಶೇ.25ರಷ್ಟು ಹಣ ಎಂದರೆ ಕೇವಲ 130 ರೂ.ಗಳಾಗುತ್ತದೆ. ಉಳಿದ 75 ಹಣ ಎಲ್ಲಿಗೆ ಹೋಗುತ್ತಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ ಎಂದರು.
ಕಳೆದ ಮೂರ್‍ನಾಲ್ಕು ತಿಂಗಳಿನಿಂದ ಸಾವಿರಾರು ಜನರು ರೈತರ ಸಂಪರ್ಕ ಕೇಂದ್ರದಲ್ಲಿ ಹೇಳಿದಷ್ಟು ಹಣ ನೀಡಿ ಕೀಟನಾಶಕ ಖರೀದಿ ಮಾಡಿದ್ದಾರೆ. ಎಲ್ಲರ ಗೋಳು ಇದೇ ಆಗಿದೆ. ಪ್ರತಿಯೊಬ್ಬ ರೈತರಿಗೂ ಇದೇ ರೀತಿಯ ಮೋಸ ಮಾಡುತ್ತ ಹಗಲು ದರೋಡೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ರಮೇಶ ಜೈಬಲ ಮಾತನಾಡಿ, ಒಂದೆಡೆ ಕಿಟನಾಶಕ ಗತಿ ಹೀಗಾದರೆ ಸರಕಾರ ಪೂರೈಸುತ್ತಿರುವ ಎರೆಹುಳು ಗೊಬ್ಬರ ಕೂಡಾ ಕಳೆಯಾಗಿದ್ದು, ಗೊಬ್ಬರದಲ್ಲಿ ಗಾಜಿನ ಚೂರಿಗಳು, ಬಾಟಲಿಗಳು ಹಾಗೂ ಪ್ಲಾಸ್ಟಿಕ್‌ಗಳೆ ಹೆಚ್ಚಾಗಿ ಸಿಗುತ್ತಿವೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಮಂಜುನಾಥ ನಂದಿಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.