ಬೆಂಗಳೂರು: ಬಿಪಿಎಲ್ (ಆದ್ಯತಾ ಪಡಿತರ ಚೀಟಿ) ಕಾರ್ಡ್ಗಳಿಗಾಗಿ ಬಡವರ್ಗಗಳು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗೆ ದುಂಬಾಲು ಬೀಳುವುದು ಸರ್ವೇಸಾಮಾನ್ಯ. ಆದರೆ, ಕಳೆದ ಮೂರ್ನಾಲ್ಕು ದಿನಗಳಿಂದ ಇಲಾಖೆಯೇ ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ತೆಗೆದುಕೊಳ್ಳುವಂತೆ ದುಂಬಾಲು ಬೀಳುತ್ತಿದೆ.
ಕಳೆದೊಂದು ವರ್ಷದಿಂದ ಹೊಸ ಬಿಪಿಎಲ್ ಕಾರ್ಡ್ಗಳ ವಿತರಣೆಯಾಗಿಲ್ಲ. ಅರ್ಜಿ ಸಲ್ಲಿಸಿದ ಬಡತನ ರೇಖೆಗಿಂತ ಕೆಳಗಿರುವ ಲಕ್ಷಾಂತರ ಜನ ಈ ಕಾರ್ಡ್ಗಳನ್ನು ಎದುರುನೋಡುತ್ತಿದ್ದು ನಿತ್ಯ ಆಯಾ ಭಾಗದಲ್ಲಿರುವ ಇಲಾಖೆ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಮತ್ತೂಂದೆಡೆ ಅನರ್ಹರು ಬಿಪಿಎಲ್ ಕಾರ್ಡ್ಗಳನ್ನು ಹೊಂದಿದ್ದು ಅವುಗಳನ್ನು ಪತ್ತೆಹಚ್ಚಿ ರದ್ದುಗೊಳಿಸುವಂತೆ ಸ್ವತಃ ಮುಖ್ಯಮಂತ್ರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಇಲಾಖೆ ಅಧಿಕಾರಿಗಳು, ಅಸಂಘಟಿತ ಕಾರ್ಮಿಕರಿಗೆ ದೂರವಾಣಿ ಕರೆ ಮಾಡಿ ದಯವಿಟ್ಟು ಬನ್ನಿ, ಬಿಪಿಎಲ್ ಕಾರ್ಡ್ ಪಡೆಯಿರಿ ಅಂತ ಕೇಳಿಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಬಾಕಿ ಇರುವ ಇ-ಶ್ರಮ್ ಪೋರ್ಟಲ್ನಲ್ಲಿ ನೋಂದಾಯಿಸಲ್ಪಟ್ಟ ಎಲ್ಲ ಕಾರ್ಮಿಕರಿಗೆ ಬಿಪಿಎಲ್ ನೀಡುವ ಸಂಬಂಧ ಸುಪ್ರೀಂಕೋರ್ಟ್ ನ. 14ರ ಒಳಗೆ ವರದಿ ನೀಡುವಂತೆ ಸೂಚಿಸಿದೆ. ಅದರಂತೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇಲಾಖೆಯು ತನ್ನ ಎಲ್ಲ ಜಿಲ್ಲಾ ಜಂಟಿ ನಿರ್ದೇಶಕರಿಗೆ ನ. 10ರ ಗಡುವು ನೀಡಿದೆ. ಆದರೆ, ರಾಜ್ಯದಲ್ಲಿ 1.31 ಲಕ್ಷ ಅಸಂಘಟಿತ ಕಾರ್ಮಿಕರಿಗೆ ಇನ್ನೂ ಬಿಪಿಎಲ್ ಕಾರ್ಡ್ ತಲುಪಿಲ್ಲ. ಅವರಲ್ಲಿ ಬಹುತೇಕರು ವಲಸಿಗರಾಗಿದ್ದು ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಪತ್ತೆಹಚ್ಚಿ, ಕಾರ್ಡ್ ವಿತರಿಸುವುದೇ ಇಲಾಖೆಗೆ ದೊಡ್ಡ ಸವಾಲಾಗಿದೆ.
ಇ-ಶ್ರಮ್ ಪೋರ್ಟಲ್ನಲ್ಲಿ ನೋಂದಾಯಿಸಲ್ಪಟ್ಟ ಕಾರ್ಮಿಕರ ಪಟ್ಟಿ ಹಿಡಿದು ಪ್ರತಿಯೊಬ್ಬರಿಗೂ ದೂರವಾಣಿ ಕರೆ ಮಾಡಿ ಇಲಾಖೆ ಅಧಿಕಾರಿಗಳು ತಡಕಾಡುತ್ತಿದ್ದಾರೆ. ಪೋರ್ಟಲ್ನಲ್ಲಿ ನೀಡಿದ ವಿಳಾಸದಲ್ಲಿ ಬಹುತೇಕ ಕಾರ್ಮಿಕರು ಇಲ್ಲ. ಇನ್ನು ಕೆಲವರ ದೂರವಾಣಿ ಸಂಖ್ಯೆಗಳು ಚಾಲ್ತಿಯಲ್ಲೇ ಇಲ್ಲ ಅಥವಾ ಸ್ವಿಚ್xಆಫ್ ಆಗಿರುವುದು ಕಂಡುಬರುತ್ತಿದೆ. ಕೆಲವರಿಗೆ ನಿರಂತರವಾಗಿ ಕರೆಗಳು ಬರುತ್ತಿವೆ. ಆದರೆ ಅವರು ಗೋವಾ, ಮಹಾರಾಷ್ಟ್ರ ಸೇರಿದಂತೆ ಬೇರೆ ರಾಜ್ಯಗಳಲ್ಲಿದ್ದು, ಅಲ್ಲಿನ ಆಧಾರ್ ಕಾರ್ಡ್ ಹೊಂದಿದವರೂ ಆಗಿದ್ದಾರೆ. ಅಂಥವರಿಗೆ ಇಲ್ಲಿ ಬಿಪಿಎಲ್ ಕಾರ್ಡ್ ನೀಡುವುದು ಹೇಗೆ ಎಂದು ದಿಕ್ಕುತೋಚುತ್ತಿಲ್ಲ ಎಂದು ಇಲಾಖೆ ಮೇಲಧಿಕಾರಿಗಳ ಮುಂದೆ ಹಲವು ಕೆಳಹಂತದ ಅಧಿಕಾರಿಗಳು ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಒಟ್ಟು 3.62 ಲಕ್ಷ ಇ-ಶ್ರಮ್ ಪೋರ್ಟಲ್ನಲ್ಲಿ ನೋಂದಾಯಿಸಲ್ಪಟ್ಟ ಕಾರ್ಮಿಕರಿದ್ದಾರೆ. ಇದರಲ್ಲಿ ಈಗಾಗಲೇ 2.40 ಲಕ್ಷ ಕಾರ್ಮಿಕ ಕುಟುಂಬಗಳ ಅಗತ್ಯ ಪರಿಶೀಲನೆ ಕಾರ್ಯ ಪೂರ್ಣಗೊಂಡಿದ್ದು ಈ ಪೈಕಿ 1.31 ಲಕ್ಷ ಬಿಪಿಎಲ್ ಕಾರ್ಡ್ಗೆ ಅರ್ಹರಿದ್ದಾರೆ ಎಂದು ನಿರ್ಧರಿಸಲಾಗಿದೆ. ಅವರೆಲ್ಲರನ್ನೂ ಹುಡುಕಿ ಈಗ ಬಿಪಿಎಲ್ ಕಾರ್ಡ್ಗಳನ್ನು ನೀಡಬೇಕಿದ್ದು, ಅದರ ವರದಿಯನ್ನು ಸುಪ್ರೀಂ ಕೋರ್ಟ್ಗೆ ನೀಡಬೇಕಿದೆ.
ಒಟ್ಟು 1.31 ಲಕ್ಷ ಕಾರ್ಮಿಕ ಕುಟುಂಬಗಳಲ್ಲಿ ಬುಧವಾರದವರೆಗೆ ಬರೀ 20 ಸಾವಿರ ಕಾರ್ಮಿಕರನ್ನು ಪತ್ತೆಹಚ್ಚಲು ಇಲಾಖೆಗೆ ಸಾಧ್ಯವಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಈ ಮಧ್ಯೆ ಸ್ವತಃ ಅಸಂಘಟಿತ ಕಾರ್ಮಿಕರು ಅರ್ಜಿ ಸಲ್ಲಿಸಲು ಇಲಾಖೆ ವೆಬ್ಸೈಟ್ ನಲ್ಲಿ ವಿಶೇಷ ಅವಕಾಶ ಕಲ್ಪಿಸಲಾಗಿದೆ.
ಎಷ್ಟು ಕಾರ್ಮಿಕರಿಗೆ ಬಿಪಿಎಲ್ ವಿತರಣೆ?
- 3.62 ಲಕ್ಷ ಒಟ್ಟು ಇ-ಶ್ರಮ್ ನೋಂದಾಯಿತ ಕಾರ್ಮಿಕರ ಸಂಖ್ಯೆ
- 2.40 ಲಕ್ಷ ಪರಿಶೀಲನೆಯಾಗಿರುವ ಕಾರ್ಮಿಕರ ಸಂಖ್ಯೆ
– 14,000 ಈ ಮೊದಲೇ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ
- 1.31 ಲಕ್ಷ ಅರ್ಹರಿದ್ದು, ಬಿಪಿಎಲ್ ಕಾರ್ಡ್ ನೀಡಬೇಕಿದೆ
-27,541 ಇನ್ನೂ ಪತ್ತೆ ಹಚ್ಚಲು ಸಾಧ್ಯವಾಗದ ಕಾರ್ಮಿಕರ ಸಂಖ್ಯೆ
-ವಿಜಯ ಕುಮಾರ ಚಂದರಗಿ