Advertisement
ಪೋರ್ಟಲ್ ಮೂಲಕ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ನ.15 ಕೊನೆಯ ದಿನವಾಗಿತ್ತು. ಆದರೆ, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಈವರೆಗೂ ಶೇ.39ರಷ್ಟು ಮಕ್ಕಳು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಕೆ ಕಡ್ಡಾಯ ಮಾಡಿರುವುದೂ ಸೇರಿ ಹಲವು ತಾಂತ್ರಿಕ ತೊಡಕುಗಳಿಂದಾಗಿ ಬಡ ವಿದ್ಯಾರ್ಥಿಗಳು ಯೋಜನೆಯಿಂದ ವಂಚಿತರಾಗಿದ್ದಾರೆ.
Related Articles
Advertisement
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಶಿಕ್ಷಕರೇ ಮುಂದೆ ನಿಂತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ನೆರವಾಗುತ್ತಿದ್ದಾರೆ. ಆದರೆ ಈ ವಿದ್ಯಾರ್ಥಿಗಳ ಪೋಷಕರ ಬಳಿ ಜಾತಿ ಪ್ರಮಾಣಪತ್ರ, ಆಧಾರ್ ಕಾರ್ಡ್, ಆದಾಯ ಪ್ರಮಾಣಪತ್ರ ಇಲ್ಲ. ಇದು ಯೋಜನೆ ಜಾರಿಗೆ ತೊಡಕಾಗಿದೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ರಜೆ ಮಾಡದೇ ಕೆಲಸ ಮಾಡಿದ ಶಿಕ್ಷಕರು: ಪೋಷಕರು ಮತ್ತು ಮಕ್ಕಳಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಬಗ್ಗೆ ಅಷ್ಟಾಗಿ ಮಾಹಿತಿ ಇರಲಿಲ್ಲ. ಹೀಗಾಗಿ ಶಿಕ್ಷಕರು ಮತ್ತು ಕ್ಷೇತ್ರ ಶಿಕ್ಷಣ ಸಂಯೋಜನಾಧಿಕಾರಿಗಳು ದಸರಾ ಸೇರಿದಂತೆ ಇನ್ನಿತರ ರಜೆ ದಿನಗಳಲ್ಲೂ ಕೆಲಸ ಮಾಡಿದ್ದಾರೆ. ಆದರೆ ಸರ್ವರ್‌ಗಳಲ್ಲಿ ಕಂಡು ಬರುತ್ತಿದ್ದ ತಾಂತ್ರಿಕ ದೋಶಗಳಿಂದಾಗಿ ಶಿಕ್ಷಕರ ಶ್ರಮ ವ್ಯರ್ಥವಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಹಿಂದೆ ಕೂಡ ಹೀಗೇ ಆಗಿತ್ತು: ಈ ಹಿಂದೆ “ರಾಷ್ಟ್ರೀಯ ಸ್ಕಾಲರ್‌ಶಿಪ್ ಪೋರ್ಟಲ್’ ಯೋಜನೆ ಜಾರಿಗೆ ಮುಂದಾದಗಲೂ ಇದೇ ಸಮಸ್ಯೆ ಎದುರಾಗಿತ್ತು. ವಿದ್ಯಾರ್ಥಿಗಳು ಮತ್ತು ಪೋಷಕರು ಆದಾಯ ಮತ್ತು ಜಾತಿ ಪ್ರಮಾಣಪತ್ರ ಪಡೆಯಲು ನಗರ ಜಿ.ಪಂ ಕಚೇರಿಯಲ್ಲಿ ಸಾಲುಗಟ್ಟಿ ನಿಂತಿದ್ದರು. ಈಗ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ ಯೋಜನೆಗೂ ಅದೇ ಸಮಸ್ಯೆ ಕಾಡುತ್ತಿದೆ. ಇದು ಸಾವಿರಾರು ಮಕ್ಕಳ ವಿದ್ಯಾರ್ಥಿವೇತನದ ಕನಸಿಗೆ ತಣ್ಣೀರೆರಚಿದೆ.
ಸ್ಟೇಟ್ ಸ್ಕಾಲರ್‌ಶಿಪ್ ಪೋರ್ಟಲ್ ಯೋಜನೆ ಯಶಸ್ವಿ ಜಾರಿ ಸಂಬಂಧ ನಗರ ಜಿ.ಪಂ ಕ್ರಿಯಾ ಯೋಜನೆ ಸಿದ್ಧಪಡಿಸಿತ್ತು. ಆದರೆ ಬಹುತೇಕ ಪೋಷಕರ ಬಳಿ ಅಗತ್ಯ ದಾಖಲೆಗಳೇ ಇಲ್ಲದಿರುವುದು ಯೋಜನೆ ಜಾರಿ ಹಿನ್ನಡೆಗೆ ಕಾರಣ.-ಸಯ್ಯದ್ ಸಾಜಿದ್, ನಗರ ದಕ್ಷಿಣ ಶಿಕ್ಷಣ ಸಂಯೋಜನಾಧಿಕಾರಿ * ದೇವೇಶ ಸೂರಗುಪ್ಪ