Advertisement

ಬೀಚನಹಳ್ಳಿ ರಸ್ತೆ ಗುಂಡಿ ಮುಚ್ಚುವವರೇ ಇಲ್ಲ

03:52 PM Oct 06, 2019 | Suhan S |

ಕುದೂರು: ಕುದೂರು- ಬೀಚನಹಳ್ಳಿ ಮಾರ್ಗವಾಗಿ ಮಾಯಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಬೀಚನಹಳ್ಳಿ ರಸ್ತೆ ಸಂಚಾರ ನರಕಯಾತನೆಯಾಗಿದೆ. ಡಾಂಬರು ಕಿತ್ತು ಹೋಗಿ ಮಣ್ಣಿನ ರಸ್ತೆಯಾಗಿದ್ದರೂ ಜಿಪಂ ಆಗಲಿ, ಇಲ್ಲವೇ ಲೋಕೋಪಯೋಗಿ ಇಲಾಖೆಯಾಗಲಿ ಕಣ್ತೆರೆದು ನೋಡಿಲ್ಲ.

Advertisement

ಜಿಪಂ ಸದಸ್ಯರೇ ರಸ್ತೆಯಲ್ಲೇ ಓಡಾಡ್ತಾರೆ: ಈ ರಸ್ತೆ ಕುದೂರು ಜಿಪಂ ಹಾಗೂ ತಿಪ್ಪಸಂದ್ರ ಜಿಪಂ ಎರಡೂ ಕ್ಷೇತ್ರಗಳಿಗೂ ಸಂಬಂಧಿಸಿದೆ. ಕುದೂರು ಕ್ಷೇತ್ರದ ಜಿಪಂ ಸದಸ್ಯರು ಪ್ರತಿ ನಿತ್ಯ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದು ರಸ್ತೆ ಮಾತ್ರ ಸರಿಯಾಗಿಲ್ಲ. ಎರಡೂ ಕ್ಷೇತ್ರಗಳ ಜಿಪಂ ಸದಸ್ಯರು ಗಮನ ಹರಿಸಿ ಜಿಪಂ, ಲೋಕೋಪಯೋಗಿ ಇಲ್ಲವೇ ಶಾಸಕರ ಅನುದಾನದಿಂದ ರಸ್ತೆ ದುರಸ್ತಿಪಡಿಸಬೇಕು ಎಂಬುದು ಸವಾರರ ಆಗ್ರಹವಾಗಿದೆ.

ಕುದೂರಿಗೆ ಹತ್ತಿರದ ಮುಖ್ಯ ರಸ್ತೆ: ತಿಪ್ಪಸಂದ್ರ ಹೋಬಳಿ ಹಿಂದುಳಿದ ಹೋಬಳಿ ಕೇಂದ್ರ. ಕುದೂರಿಗೆ ಹೋಲಿಸಿದ್ದಲ್ಲಿ ಅಷ್ಟೇನು ಪ್ರಗತಿಯಾಗಿಲ್ಲ. ಆದ ಕಾರಣ ನಿತ್ಯ ಸಾವಿರಾರು ಮಂದಿ ಶಿಕ್ಷಣ, ವ್ಯಾಪಾರ, ವೈದ್ಯಕೀಯ ಸೌಲಭ್ಯ ಹಾಗೂ ಇನ್ನಿತರ ಉದ್ದೇಶಗಳಿಗಾಗಿ ಕುದೂರನ್ನೇ ಅವಲಂಬಿಸಿದ್ದಾರೆ.

ನಿತ್ಯ ಗುಂಡಿ ರಸ್ತೆಯಲ್ಲಿ ಜೀವ ಬಿಗಿ ಹಿಡಿದು ಸಂಚರಿಸುತ್ತಿದ್ದಾರೆ. ಈ ರಸ್ತೆಯನ್ನು ಬಿಟ್ಟು ಬೇರೆ ರಸ್ತೆಯಲ್ಲಿ ಹೋಗಲು 5 ಕಿ.ಮೀ. ಹೆಚ್ಚುವರಿ ಚಲಿಸ ಬೇಕು. ಹಾಳಾದ ರಸ್ತೆಯಲ್ಲಿ ವಿಧಿಯಿಲ್ಲದೇ ಸಂಚರಿಸುವ ಸವಾರರು ತೊಂದರೆ ಅನುಭವಿಸಬೇಕಾಗಿದೆ.

ರೈತರಿಗೂ ತಪ್ಪದ ಬಾಧೆ: ಈ ಅತಿವೃಷ್ಟಿ, ಅನಾವೃಷ್ಟಿ ಸಂದರ್ಭಗಳಲ್ಲಿ ಶ್ರಮವಹಿಸಿ ಬೆಳೆದ ಬೆಳೆಗಳನ್ನು ಈ ಗುಂಡಿಗಳಿಂದ ಕೂಡಿದ ರಸ್ತೆಗಳಲ್ಲಿ ಸಾಗಿಸಲಾಗದೇ ಶಪಿಸುವಂತಾಗಿದೆ. ಒಂದು ವೇಳೆ ಸಾಗಿಸಲು ಮುಂದಾದರೂ ಸಾಮಾನ್ಯಕ್ಕಿಂತ ಎರಡು ಮೂರು ಪಟ್ಟು ಹಣ ನೀಡಬೇಕು. ಇಂತಹ ಪರಿಸ್ಥಿತಿ ಎದುರಿಸಿ ರೈತರು ಜೀವನ ನಡೆಸುವುದು ಹೇಗೆ?. ಮಳೆ ಬಂದರಂತೂ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಸ್ವಲ್ಪ ಆಯ ತಪ್ಪಿದರೂ ಬೀಳುವುದು ಶತಸಿದ್ಧ.

Advertisement

ಶಾಲಾಕಾಲೇಜಿಗೆ ದಾಖಲಾಗದ ಮಕ್ಕಳು: ಇಲ್ಲಿನ ಮಕ್ಕಳು ಎಸ್ಸೆಸ್ಸೆಲ್ಸಿ ನಂತರದ ಶಿಕ್ಷಣ ಪಡೆಯಲು ಕುದೂರಿಗೆ ತೆರಳಬೇಕು. ಆದರೆ ಈ ರಸ್ತೆ ಅಧ್ವಾನದಿಂದ ವಿದ್ಯಾರ್ಥಿಗಳು ಬರುವುದಿರಲಿ ಪೋಷಕರೇ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಾರೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಮುಗಿಸಿದ ಮಕ್ಕಳು ಉನ್ನತ ವ್ಯಾಸಂಗಕ್ಕೆ ರಸ್ತೆ ಬಾಧೆಯಿಂದ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ತುರ್ತು ಸಮಯಗಳಲ್ಲಿ ಆ್ಯಂಬುಲೆನ್ಸ್ ಗೆ ಕರೆ ಮಾಡಿದರೆ ರೋಗಿಯನ್ನು ಕರೆದೊಯ್ಯುವುದು “ಆಮೆ ವೇಗದಲ್ಲಿ. ಇದರಿಂದಾಗಿ ರೋಗಿಗಳು ದಾರಿ ಮಧ್ಯೆಯೇ ಸಾವನ್ನಪ್ಪುವ ಸನ್ನಿವೇಶ ಸೃಷ್ಟಿಸುತ್ತಿವೆ.

ಕಣ್ಣಿಗೆ ಕಾಣದ ಕೆರೆ ಏರಿ ಪಕ್ಕದ ರಸ್ತೆ: ತಿಪ್ಪಸಂದ್ರ ಭಾಗದ ಬಹುತೇಕ ಹಳ್ಳಿಗಳ ಜನ ಕುದೂರು ತಲುಪಬೇಕಾದರೆ ಇರುವುದೊಂದೇ ರಸ್ತೆ. ಅದು ಮಾಯಸಂದ್ರದ ಮೂಲಕ ಕೆರೆ ಏರಿ ಪಕ್ಕದಲ್ಲಿ ಬೀಚನಹಳ್ಳಿ ಸೇರಿ ಕುದೂರು ತಲುಪಲಿದೆ. ಇದರಿಂದ ಕೇವಲ ಒಂದು ಊರಿಗೆ ಮಾತ್ರವಲ್ಲದೇ ಹತ್ತಾರು ಹಳ್ಳಿಗಳ ಗ್ರಾಮಸ್ಥರಿಗೆ ಸಹಾಯವಾಗುತ್ತದೆ. ಆದರೆ ದುರಾದೃಷ್ಟವಶಾತ್‌ ಈ ರಸ್ತೆಯನ್ನೇ ನಿರ್ಲಕ್ಷ್ಯ ಮಾಡಲಾಗಿದೆ. ಹೀಗಾಗಿ ಆದಷ್ಟು ಬೇಗ ಈ ರಸ್ತೆ ಡಾಂಬರೀಕರಣ ಆಗಬೇಕು ಎಂಬುದು ಗ್ರಾಮಸ್ಥರ ಮನವಿಯಾಗಿದೆ.

ಕುದೂರಿನಿಂದ ಬೀಚನಹಳ್ಳಿ ಮಾರ್ಗವಾಗಿ ಮಾಯಸಂದ್ರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗಾಗಿ ಬಹಳ ದಿನಗಳಿಂದ ಪ್ರಯತ್ನದಲ್ಲಿದ್ದೇನೆ. ಇನ್ನೆರಡು ತಿಂಗಳಲ್ಲಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಈಗಾಗಲೇ ವರ್ಕ್‌ ಆಡರ್‌ ಆಗಿದ್ದು ಶೀಘ್ರ ಡಾಂಬರೀಕರಣ ಆಗಲಿದೆ.  ಅಣ್ಣೇಗೌಡ, ಜಿಪಂ ಸದಸ್ಯ, ಕುದೂರು

ನಮ್ಮ ರಸ್ತೆಯಲ್ಲಿ ಸಂಚರಿಸಲು ಬಹಳ ವ್ಯಥೆ ಪಡಬೇಕು. ನಾವು ಬೆಳೆದ ಬೆಳೆಗಳನ್ನೂ ಈ ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಕೊಂಡೊಯ್ಯಲು ಎರಡರಷ್ಟು ಹಣ ನೀಡಬೇಕು. ರಸ್ತೆ ಅಧ್ವಾನದಿಂದ ಅಭಿವೃದ್ಧಿ ಕುಂಟಿತಗೊಂಡಿದೆ. ರೈತ ನಾಗರಾಜು, ಮಾಯಸಂದ್ರ, ಕುದೂರ

 

ಕೆ.ಎಸ್‌.ಮಂಜುನಾಥ್

Advertisement

Udayavani is now on Telegram. Click here to join our channel and stay updated with the latest news.

Next