ಮುಂಬಯಿ: ಇತ್ತೀಚೆಗಷ್ಟೇ ಗರ್ಭಕಂಠ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದೇನೆ ಎಂದು ವದಂತಿ ಹಬ್ಬಿಸಿಕೊಂಡು ವಿವಾದಕ್ಕೆ ಗುರಿಯಾಗಿದ್ದ ನಟಿ ಪೂನಂ ಪಾಂಡೆಗೆ ಈಗ ಕಾನೂನು ಸಂಕಷ್ಟ ಎದುರಾಗಿದೆ.
ಪೂನಂ ಪಾಂಡೆ ಹಾಗೂ ಅವರ ಮಾಜಿ ಪತಿ ಸ್ಯಾಮ್ ಬಾಂಬೆ ಅವರ ಮೇಲೆ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.
ಫೈಜಾನ್ ಅನ್ಸಾರಿ ಎಂಬುವರು”ಕ್ಯಾನ್ಸರ್ ನಂತಹ ಕಾಯಿಲೆಯನ್ನು ತನ್ನ ಲಾಭಕ್ಕಾಗಿ ಬಳಸಿಕೊಂಡು ಅದರ ಗಂಭೀರತೆಯನ್ನು ಕ್ಷುಲ್ಲಕವಾಗಿಸಿ ಲಕ್ಷಾಂತರ ಜನರ ಭಾವನೆಗಳು ಮತ್ತು ನಂಬಿಕೆಗೆ ಧಕ್ಕೆ ತಂದ ಆರೋಪವನ್ನು ಮಾಡಿ ಪೂನಂ ಪಾಂಡೆ ಮತ್ತು ಆಕೆಯ ಮಾಜಿ ಪತಿಯ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿ, ಅವರ ಬಂಧನಕ್ಕೆ ಆಗ್ರಹಿಸಿದ್ದಾರೆ ಎಂದು ʼಪಿಂಕ್ ವಿಲ್ಲಾʼ ವರದಿ ಮಾಡಿದೆ.
ಕಾನ್ಪುರ ಪೊಲೀಸ್ ಕಮಿಷನರ್ ಬಳಿಯೂ ಎಫ್‌ಐಆರ್ ದಾಖಲಿಸಿದ್ದಾರೆ. ಪೂನಂ ಪಾಂಡೆ ಮತ್ತು ಆಕೆಯ ಪತಿ ಸ್ಯಾಮ್ ಬಾಂಬೆ ಅವರು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಯನ್ನು ಅಪಹಾಸ್ಯ ಮಾಡುವ ಮೂಲಕ ಆಕೆಯ ಸಾವಿನ ವದಂತಿ ಹಬ್ಬಿಸಿದ್ದರು. ಪೂನಂ ಪಾಂಡೆ ತನ್ನ ವೈಯಕ್ತಿಕ ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದಾರೆ. ಲಕ್ಷಾಂತರ ಭಾರತೀಯರು ಮತ್ತು ಇಡೀ ಬಾಲಿವುಡ್ ಉದ್ಯಮದ ನಂಬಿಕೆಗೆ ದ್ರೋಹ ಬಗೆದಿದ್ದಾರೆ ಎಂದು ಎಫ್‌ಐಆರ್ ನಲ್ಲಿ ಹೇಳಿರುವುದಾಗಿ ವರದಿ ತಿಳಿಸಿದೆ.
ಪೂನಂ ಅವರು ಗರ್ಭಕೋಶದ ಕ್ಯಾನ್ಸರ್ ನಿಂದ ಕಾನ್ಪುರದಲ್ಲಿ ನಿಧನ ಹೊಂದಿದ್ದಾರೆ ಎಂದು ಅವರ ಅಧಿಕೃತ ಇನ್ಸ್ಟಾಗ್ರಾಮ್ ನಲ್ಲಿ ಫೆ.2 ರಂದು ಪೋಸ್ಟ್ ಮಾಡಲಾಗಿತ್ತು. ಇದಾದ ಒಂದು ದಿನದ ಬಳಿಕ ಸ್ವತಃ ಪೂನಂ ಅವರೇ ವಿಡಿಯೋ ಮಾಡಿ ಸ್ಪಷ್ಟನೆ ನೀಡಿದ್ದರು.
“ನಾನು ಈ ರೀತಿ ಮಾಡಿದ್ದಕ್ಕೆ ಕ್ಷಮೆ ಕೇಳುತ್ತೇನೆ. ಯಾರಿಗಾದರೂ ಇದರಿಂದ ನೋವು ಆಗಿದ್ದರೆ ಕ್ಷಮೆ ಇರಲಿ. ಹೌದು ನಾನು ಸತ್ತಿದ್ದೇನೆ ಎಂದು ಎಲ್ಲರಿಗೂ ಶಾಕ್ ಆಗುವಂತೆ ಮಾಡಿದೆ. ನನ್ನ ಸಾವು ಆಗಿದೆ ಎಂದು ಸುಳ್ಳು ಹೇಳಿದೆ. ಸಾವಿನ ಬಗ್ಗೆ ಸುದ್ದಿ ಹಬ್ಬಿಸಿದ್ದಕ್ಕೆ ಹೆಮ್ಮೆಯಿದೆ. ಗರ್ಭಕಂಠದ ಕ್ಯಾನ್ಸರ್ ನಿಧನವಾಗಿ ಕೊಲ್ಲುವ ಕಾಯಿಲೆ. ಇದರ ಬಗ್ಗೆ ನಾವು ಹೆಚ್ಚಾಗಿ ಮಾತನಾಡುತ್ತಿಲ್ಲ. ಇದರ ಜಾಗೃತಿಗಾಗಿ ನಾನು ಹೀಗೆ ಮಾಡಿದೆ. ಇದರ ಬಗ್ಗೆ ನಾವು ಹೆಚ್ಚಾಗಿ ಮಾತನಾಡಬೇಕು” ಎಂದು ಹೇಳಿದ್ದರು.