Advertisement

Poonam Kaur: ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ವಿರುದ್ಧ ನಟಿ ಪೂನಂ ಗಂಭೀರ ಆರೋಪ

01:12 PM Sep 18, 2024 | Team Udayavani |

ಹೈದರಾಬಾದ್:‌ ಮಾಲಿವುಡ್‌ ನಲ್ಲಿ ಹೇಮಾ ಸಮತಿ ವರದಿ(Hema Committee Report) ಬಳಿಕ ಇತರೆ ಸಿನಿಮಾರಂಗದಲ್ಲೂ ಇದೇ ರೀತಿಯ ಸಮಿತಿಯನ್ನು ರಚಿಸಬೇಕೆಂದು ಅನೇಕರು ಧ್ವನಿ ಎತ್ತಿದ್ದಾರೆ.

Advertisement

ಇತ್ತೀಚೆಗೆ ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ (Jani Master) ವಿರುದ್ಧ 21 ವರ್ಷದ ಯುವತಿಯೊಬ್ಬಳು ಲೈಂಗಿಕ ದೌರ್ಜನ್ಯ ಹಾಗೂ ಕಿರುಕುಳದ ಆರೋಪವನ್ನು ಮಾಡಿ ದೂರು ದಾಖಲಿಸಿದ್ದಾರೆ. ಈ ಕುರಿತು ವಿಚಾರಣೆ ನಡೆಯುತ್ತಿದೆ.

ಈ ನಡುವೆ ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ (Trivikram Srinivas) ವಿರುದ್ಧ ತಾನು ಕೊಟ್ಟ ದೂರಿಗೆ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಬಹುಭಾಷಾ ನಟಿ ಪೂನಂ ಕೌರ್ (Actress Poonam Kaur) ಚಲನಚಿತ್ರ ಕಲಾವಿದರ ಸಂಘ (MAA)ಕ್ಕೆ ಪ್ರಶ್ನೆ ಮಾಡಿದ್ದಾರೆ.

ಜಾನಿ ಮಾಸ್ಟರ್ ಪ್ರಕರಣದ ಬಗ್ಗೆ ಪ್ರಸ್ತಾಪಿಸಿರುವ ಅವರು ತನ್ನ ʼಎಕ್ಸ್ʼ ಖಾತೆಯಲ್ಲಿ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Advertisement

“ನಾನು ಚಲನಚಿತ್ರ ಕಲಾವಿದರ ಸಂಘಕ್ಕೆ ಹಾಗೂ ಹಿರಿಯರಿಗೆ ​​ತ್ರಿವಿಕ್ರಮ್ ಶ್ರೀನಿವಾಸ್ ವಿರುದ್ಧ ದೂರು ನೀಡಿದ್ದೆ. ಆದರೆ ನನ್ನನು ನಿರ್ಲಕ್ಷ್ಯ ಮಾಡಲಾಯಿತು. ದೂರು ಕೊಟ್ಟ ಬಳಿಕವೂ ಯಾವ ಪ್ರಯೋಜವೂ ಆಗಲಿಲ್ಲ. ಈಗಲಾದರೂ ಇಂಡಸ್ಟ್ರಿಯ ದೊಡ್ಡವರು ತ್ರಿವಿಕ್ರಮ್ ಶ್ರೀನಿವಾಸ್ ಅವರನ್ನು ಪ್ರಶ್ನೆ ಮಾಡಬೇಕು” ಎಂದು ಪೂನಂ ಆಗ್ರಹಿಸಿದ್ದಾರೆ.

ಪೂನಂ ಇಲ್ಲಿ ತ್ರಿವಿಕ್ರಮ್ ಶ್ರೀನಿವಾಸ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿಲ್ಲ. ಆದರೆ ಅವರು ಪರೋಕ್ಷವಾಗಿ ಲೈಂಗಿಕ ಆರೋಪದ ಬಗ್ಗೆಯೇ ಹೇಳುತ್ತಿದ್ದಾರೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪೂನಂ ಅವರಿಗೆ ತ್ರಿವಿಕ್ರಮ್ ಶ್ರೀನಿವಾಸ್ ಅವರಿಂದ ಯಾವ ರೀತಿಯ ತೊಂದರೆ ಆಗಿದೆ ಎನ್ನುವುದರ ಬಗ್ಗೆ ಅವರು ಇಲ್ಲಿ ಉಲ್ಲೇಖ ಮಾಡಿಲ್ಲ.

ತ್ರಿವಿಕ್ರಮ್ ಶ್ರೀನಿವಾಸ್ ವಿರುದ್ಧ ನಟಿ ಪೂನಂ ಈ ರೀತಿಯ ಆರೋಪ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ತ್ರಿವಿಕ್ರಮ್ ಶ್ರೀನಿವಾಸ್ ಅವರ ಹೆಸರು ಹೇಳದೆ ಪರೋಕ್ಷವಾಗಿ ಅವರ ವಿರುದ್ದವೇ ಬೇರೆಯವರ ವೃತ್ತಿ ಜೀವನವನ್ನು ಹಾಳು ಮಾಡಿರುವ ನಿರ್ದೇಶಕ ಎಂದು ಆರೋಪಿಸಿದ್ದರು. ನನ್ನನ್ನು ಬಳಸಿಕೊಂಡು ಮೋಸ ಮಾಡಿದ್ದಾರೆ ಎಂದು ಆರೋಪಿಸಿ 2019ರಲ್ಲಿ ಸೈಬರ್ ಕ್ರೈಂಗೆ ತ್ರಿವಿಕ್ರಮ್ ಶ್ರೀನಿವಾಸ್ ವಿರುದ್ಧ ದೂರು ನೀಡಿದ್ದರು.

ತೆಲುಗು, ತಮಿಳು ಹಿಂದಿ ಜತೆಗೆ ಕನ್ನಡದಲ್ಲೂ ಪೂನಂ ಅವರು ನಟಿಸಿದ್ದಾರೆ. ಕನ್ನಡದಲ್ಲಿ ಡಾ.ಶಿವರಾಜ್ ಕುಮಾರ್ ಅಭಿನಯದ ʼಬಂಧು ಬಳಗʼ ಚಿತ್ರದಲ್ಲಿ ಕೂಡ ಪೂನಂ ಕೌರ್ ನಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next