Advertisement

ನಮ್ಮನ್ನೂ ಅಳಿಸಿ ಬಿಡುವ ಪೊನೆಟ್‌

10:03 AM Feb 16, 2020 | sudhir |

ಫ್ರೆಂಚ್‌ ಭಾಷೆಯ ಈ ಸಿನೆಮಾದ ಹೆಸರು ಪೊನೆಟ್‌ (ponette).
ಕಥೆ ಬಹಳ ಸಣ್ಣದು. ಆದರೆ ಸೂಕ್ಷ್ಮವಾದದ್ದು.

Advertisement

ಒಂದು ಪುಟ್ಟ ಮಗು ತನ್ನ ಅಮ್ಮನ ಸಾವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದು. ಅಂದರೆ ತನಗಾದ ನಷ್ಟ ಎಷ್ಟು ಅಮೂಲ್ಯವಾದುದು ಎಂಬುದನ್ನು ಅರಿಯುವಷ್ಟರಲ್ಲಿ ನಮ್ಮ ಕಣ್ಣುಗಳೂ ಹನಿಗೂಡುತ್ತವೆ.
ಜಾಕ್ವೆಸ್‌ ಡಾಲಿಯನ್‌ ಬರೆದು, ನಿರ್ದೇಶಿಸಿದ ಸಿನೆಮಾ ನಿರ್ಮಾಣವಾದದ್ದು 1996ರಲ್ಲಿ. ಒಟ್ಟೂ 97 ನಿಮಿಷಗಳ ಸಿನೆಮಾ. ಆ ದಿನಗಳಲ್ಲಿ ಖರ್ಚಾದ 2.7 ಮಿಲಿಯನ್‌ ಯೂರೋಗಳ ಬದಲಾಗಿ 3.9 ಮಿಲಿಯನ್‌ ಯೂರೋಗಳನ್ನು ಗಳಿಸಿತ್ತು. ಈ ಹಣ ಗಳಿಕೆಯ ಲೆಕ್ಕ ಬರೀ ಲೆಕ್ಕಕ್ಕಷ್ಟೇ. ಗಳಿಸಿದ ಪ್ರಶಸ್ತಿಗಳು ಹಲವಾರು.

ವಿಕ್ಟೋರಿ ತಿವೋಸ್‌ ಎನ್ನುವವಳು ಆ ಪುಟಾಣಿಯ ಪಾತ್ರ ನಿರ್ವಹಿಸಿದ್ದು. ಅವಳ ಅಪ್ಪನಾಗಿ ನಟಿಸಿರುವುದು ಕ್ಸೇವಿಯರ್‌‌ ಬಿವೋರಿಸ್‌.

ಸಿನೆಮಾ ಆರಂಭವಾಗುವಾಗ ಪೊನೆಟ್‌ಳ ಅಮ್ಮ ಕಾರು ಅಪಘಾತದಲ್ಲಿ ಸತ್ತಿರುತ್ತಾಳೆ. ಇವಳ ಕೈಗೂ ತೀವ್ರತರವಾದ ಗಾಯವಾಗಿರುತ್ತದೆ. ಆ ಬಳಿಕ ಕ್ಸೇವಿಯರ್‌ ಪೊನೆಟ್‌ಳನ್ನು ಅವಳ ಚಿಕ್ಕಮ್ಮನಲ್ಲಿ ಬಿಟ್ಟು ಹೋಗುತ್ತಾನೆ. ಕೆಲವು ತಿಂಗಳ ಬಳಿಕ ಬಂದು ಆಕೆಯನ್ನು ಬೋರ್ಡಿಂಗ್‌ ಶಾಲೆಗೆ ಸೇರಿಸಲಾಗುತ್ತದೆ.

ಒಮ್ಮೆ ಆಟದ ಮೈದಾನದಲ್ಲಿ ತನ್ನಮ್ಮನನ್ನು ನೆನಪು ಮಾಡಿಕೊಳ್ಳುವ ಅವಳಿಗೆ ದುಃಖ ಒತ್ತರಿಸಿ ಬರುತ್ತದೆ. ತನ್ನಮ್ಮನ ಕೊರತೆ ಅವಳನ್ನು ಬಾಧಿಸತೊಡಗುತ್ತದೆ. ಆ ಬಳಿಕ ತನ್ನಮ್ಮನ ಹುಡುಕಾಟದಲ್ಲಿ ಮುಂದುವರಿಯುತ್ತಾಳೆ. ಅವಳನ್ನು ಹುಡುಕಲು ಸಹಾಯ ಮಾಡಿ ಎಂದು ತನ್ನ ಸ್ನೇಹಿತೆಯರನ್ನೂ ಕೇಳಿಕೊಳ್ಳುತ್ತಾಳೆ.

Advertisement

ಅಂತಿಮವಾಗಿ ಒಬ್ಬ ಗೆಳತಿಯ ಬಳಿ, ದೇವರ ಮಗುವಾಗುವುದು ಹೇಗೆ? ಅದನ್ನು ನನಗೆ ಕಳಿಸಿಕೊಡು, ನಾನು ನನ್ನಮ್ಮನನ್ನು ನೋಡಬೇಕು, ಅವಳೊಂದಿಗೆ ಮಾತನಾಡಬೇಕು ಎಂದು ಹೇಳುವಾಗ ಆ ಸ್ನೇಹಿತೆಗೂ ಏನೆಂದು ತೋಚುವುದಿಲ್ಲ.

ಅಪ್ಪ ಅವಳಿಗೆ ಅಮ್ಮನ ಸಾವನ್ನು ಯಾವ ರೀತಿಯಲ್ಲಿ ಅರ್ಥ ಮಾಡಿಸಲು ಪ್ರಯತ್ನಿಸಿದರೂ ಪ್ರತಿ ಬಾರಿ ವಿಫ‌ಲನಾಗುತ್ತಾನೆ. ಅಂತಿಮವಾಗಿ, ಅಮ್ಮನ ಸಮಾಧಿ ಬಳಿ ಬಂದು ಬಿಕ್ಕಿ ಬಿಕ್ಕಿ ಅಳುತ್ತಾಳೆ. ಅಂತ್ಯ ಸುಖಾಂತ್ಯದ ರೀತಿಯಲ್ಲಿ ತೋರಿದರೂ ನಮ್ಮಲ್ಲಿ ಉಳಿದುಕೊಳ್ಳುವುದು ಪೊನೆಟ್‌, ಅಮ್ಮನ ಸಮಾಧಿಯ ಮಣ್ಣು ಕೆದಕಿ, ಅಮ್ಮಾ..ಅಮ್ಮಾ..ನಾನಿಲ್ಲಿದ್ದೇನೆ ಎಂದು ಹೇಳುತ್ತಾ ಅಳುವುದೇ.

ಇಡೀ ಕುಟುಂಬ ನೋಡುವ ಕಥಾನಕ. ಈ ವೀಕೆಂಡ್‌ನ‌ಲ್ಲಿ ನೋಡಿ ಮುಗಿಸಿ.

- ರೂಪರಾಶಿ

Advertisement

Udayavani is now on Telegram. Click here to join our channel and stay updated with the latest news.

Next