ನೀನು ಟ್ರೇನ್ ಅಂತ ಹೇಳಕ್ಕೆ ಟ್ರ್ಯಾಮ್ ಅಂಥ ತಪ್ಪು ಹೇಳ್ತಾ ಇದ್ದೀಯಾ. ಅದು ಟ್ರೇಮ್ ಅಲ್ಲ “ಟ್ರೇನ್’ “ಟ್ರೇನ್’ ಪುಟ್ಟ ಭರತ ಟ್ರ್ಯಾಮ್ ಹಿಡಿಯಲು ಓಡುತ್ತಿದ್ದ ನನ್ನನ್ನು ತಿದ್ದಿದ್ದ. ನಮಗೆ ದೊಡ್ಡವರಿಗೂ ಟ್ರ್ಯಾಮ್ ಸ್ವಲ್ಪ ಹೊಸತೇ ಆಗಿತ್ತು. ಬಸ್ಸು -ರೈಲುಗಳಷ್ಟು ಪರಿಚಿತವಾದ ವಾಹನ. ಆಸ್ಟ್ರೇಲಿಯಾದ ಮೆಲ್ಬರ್ನ್ನಲ್ಲಿ ನೋಡಿದರೆ ಟ್ರ್ಯಾಮೋ ಟ್ರ್ಯಾಮ್. ವೈದ್ಯಕೀಯ ಓದುವಾಗ “ಸ್ಟರ್ಜ್‌ವೆಬರ್’ ಸಿಂಡ್ರೋಮ್ ಎಂಬ ಕಾಯಿಲೆಯಲ್ಲಿ “ಟ್ರ್ಯಾಮ್ ಟ್ರ್ಯಾಕ್’ ಹಾಗೆ ಎಕ್ಸ್‌ರೇಯಲ್ಲಿ ಕಾಣುತ್ತದೆ ಎಂಬ ವಿಷಯ ಅರ್ಥವಾಗಲು ಟ್ರ್ಯಾಮ್ ನೋಡಿದ್ದರೆ ತಾನೆ?! ನಂತರ ಕೊಲ್ಕತಾದಲ್ಲಿ ನೋಡಿದ ಒಂದೆರಡು ಟ್ರ್ಯಾಮ್ ಎತ್ತಿನ ಗಾಡಿಗಿಂತ ನಿಧಾನ, ಹಳೆಯದು ಎರಡೂ. ಇದು ಬಿಟ್ಟರೆ ನಾನೂ ಮಕ್ಕಳೊಂದಿಗೆ ಟ್ರ್ಯಾಮ್ ಸರಿಯಾಗಿ ನೋಡಿದ್ದೇ ಮೆಲ್ಬರ್ನ್ ನಲ್ಲಿ.
ಮುಂಬಯಿಯ “ಲೋಕಲ್’ ಮುಂಬಯಿಕರ್‌ರ ಜೀವನಾಡಿ ಇದ್ದಂತೆ ಮೆಲ್ಬರ್ನ್ನಲ್ಲಿ “ಟ್ರ್ಯಾಮ್’ ವ್ಯವಸ್ಥೆ. ನೋಡಲು ರೈಲಿನಂತೆ ಕಂಡರೂ, ಓಡಾಡಲು ತನ್ನದೇ ಟ್ರ್ಯಾಕ್ ಇದಕ್ಕೆ ಬೇಕಾದರೂ ಟ್ರ್ಯಾಮ್ ಎಲ್ಲಿ ಬೇಕಾದರೂ ನಿಲ್ಲುವಂತಹದ್ದು. ಟ್ರ್ಯಾಮ್ ಸ್ಟೇಷನ್‌ಗಾಗಿ ನೀವು ನೆಲಮಾಳಿಗೆಯ ನಿಲ್ದಾಣಕ್ಕೆ ಮೆಟ್ಟಿಲಿಳಿದು ಓಡಬೇಕಿಲ್ಲ. “ಟ್ರ್ಯಾಮ್ ಸ್ಟಾಪ್’ ಗಳನ್ನು ಹುಡುಕಿ, “ಟ್ರ್ಯಾಮ್’ ಹಿಡಿದರಾಯಿತು.
ಮೆಲ್ಬರ್ನ್ನ ಟ್ರ್ಯಾಮ್‌ಗಳ ಇತಿಹಾಸವೂ ದೀರ್ಘವೇ. ಇಂದು ವಿಶ್ವದ ಅತಿದೊಡ್ಡ “ಟ್ರ್ಯಾಮ್ ನೆಟ್‌ವರ್ಕ್’ ವ್ಯವಸ್ಥೆ ಮೆಲ್ಬರ್ನ್ನಲ್ಲಿದೆ. 1885ರಲ್ಲಿ ಆರಂಭಗೊಂಡ ಏಟ್ಟsಛಿಠಿrಚಞ- ಕುದುರೆಗಳಿಂದ ಎಳೆಯಲ್ಪಡುತ್ತಿದ್ದ ಟ್ರ್ಯಾಮ್ ಕುದುರೆಗಳ ಮಲಮೂತ್ರದಿಂದ ಮೆಲ್ಬರ್ನ್ “ಸೆ¾ಲ್‌ಬೋರ್ನ್’ ಎಂದು ಕರೆಸಿಕೊಂಡಿತು. ಕ್ರಮೇಣ ಕುದುರೆಗಳಿಂದ ಕೇಬಲ್‌ಗೆ, ಕೇಬಲ್‌ನಿಂದ ಇಲೆಕ್ಟ್ರಿಕ್‌ಗೆ ಟ್ರ್ಯಾಮ್‌ಗಳ ಶಕ್ತಿ ಬದಲಾಯಿತು. ಇಂದು ಮೆಲ್ಬರ್ನ್ನ ಟ್ರ್ಯಾಮ್ ವ್ಯವಸ್ಥೆ 250ಕಿ. ಮೀ. ಗಳಷ್ಟು ಹಳಿ, 493 ಟ್ರ್ಯಾಮ್‌ಗಳು, 1763 ನಿಲುಗಡೆಗಳನ್ನು ಹೊಂದಿದೆ. 2016-17 ರಲ್ಲಿ 204 ಮಿಲಿಯನ್ ಪ್ರಯಾಣಿಕರನ್ನು ಸಾಗಿಸಿದೆ.
ಟ್ರ್ಯಾಮ್ ವ್ಯವಸ್ಥೆಯನ್ನು ಖಾಸಗೀ ಕಂಪೆನಿಯೊಂದಕ್ಕೆ ಗುತ್ತಿಗೆ ನೀಡುವ ಸರ್ಕಾರ ಅದರ ಆಡಳಿತ ವ್ಯವಸ್ಥೆಯನ್ನು ಮಾತ್ರ ತಾನೇ ನಿರ್ವಹಿಸುತ್ತದೆ. ಹಾಗಾಗಿ, ನೀವು ಒಂದು ಟಿಕೆಟ್ ತೆಗೆದುಕೊಂಡರೆ ರೈಲು, ಬಸ್ಸು, ಟ್ರ್ಯಾಮ್ ಎಲ್ಲಕ್ಕೂ ಇಡೀ ದಿನ ಉಪಯೋಗಿಸಬಹುದು. “ಫ್ರೀ ಜೋನ್’ ನಲ್ಲಿ ನೀವು ಟ್ರ್ಯಾಮ್ ಉಪಯೋಗಿಸಿದರೆ ಟಿಕೆಟ್ಟೇ ಬೇಡ! ಪ್ರವಾಸಿಗರೇ ಇರುವ “ಸಿಟಿ ಸರ್ಕಲ್ ಟ್ರ್ಯಾಮ್’ ನಗರದ ಪ್ರಮುಖ ಆಕರ್ಷಣೆಗಳನ್ನು ಸಂದರ್ಶಿಸಲು ಅನುಕೂಲವಾಗುವಂತೆ ಇಡೀ ನಗರವನ್ನು ಸುತ್ತು ಹಾಕುತ್ತಲೇ ಇರುತ್ತದೆ. ಈ ಟ್ರ್ಯಾಮ್ ಕೆಂಪು-ಹಸಿರು ಬಣ್ಣಗಳಲ್ಲಿದ್ದು, ಹಳೆಯ ಮೆಲ್ಬರ್ನ್ ಚಿತ್ರಣವನ್ನು ಕಣ್ಣ ಮುಂದೆ ತರುತ್ತದೆ. ಇದು “ಫ್ರೀ ಟ್ರ್ಯಾಮ್’ – ಟಿಕೆಟ್ಟು ಖರೀದಿಸಬೇಕಾಗಿಯೇ ಇಲ್ಲ ಎಂಬುದು ಪ್ರವಾಸಿಗರಿಗೆ ಸಂತಸವನ್ನು ದುಪ್ಪಟ್ಟು ಮಾಡುತ್ತದೆ!
“ಮೈಕಿ’ ಕಾರ್ಡ್ ತೆಗೆದುಕೊಂಡು ನೀವು ಟ್ರ್ಯಾಮ್ ಹತ್ತಬೇಕಷ್ಟೆ. ಟಿಕೆಟ್ ತೆಗೆದುಕೊಂಡಿದ್ದೀರೆಂದು ಚೆಕ್ ಮಾಡುವವರು ಯಾರು? ಒಂದು ಮೇನ್‌ಗೆ ಟಿಕೆಟ್ ಮುಟ್ಟಿಸಬೇಕು- ಇದು “ಟಚ್ ಆನ್’ “ಟಚ್ ಆಫ್’. ಒಂದೊಮ್ಮೆ ಮಾಡದಿದ್ದರೆ? ಮಾಡದಿರುವವರು, ಟಿಕೆಟ್ ತೆಗೆದುಕೊಳ್ಳದಿರುವವರು ಎಲ್ಲಿಯೂ ಇರುತ್ತಾರಷ್ಟೆ! ಆದರೂ ಟಿಕೆಟ್ ಚೆಕ್ ಮಾಡಲು ಯಾವಾಗಲೂ “ಟಿಸಿ’ ಇಲ್ಲಿ ಬರುವುದಿಲ್ಲ. ಕೆಲವೊಮ್ಮೆ “ಮಫ್ತಿ’ ಯಲ್ಲಿ ಚೆಕಿಂಗ್ ಇನ್ಸ್‌ಫೆಕ್ಟರ್ “ಟ್ರ್ಯಾಮ್’ನಲ್ಲಿ ಇರಬಹುದು.
ಇದ್ದಕ್ಕಿದ್ದಂತೆ ಟಿಕೆಟ್ ಕೇಳಲಾರಂಭಿಸಬಹುದು. ನೀವು ಟಿಕೆಟ್ಟು ಕೊಂಡಿದ್ದರೆ ನಿಮ್ಮ ನಡವಳಿಕೆಯನ್ನು ಹೊಗಳಲು, ಟಿಕೆಟ್ಟು ಕೊಂಡೇ ಪ್ರಯಾಣಿಸುವ ನಡವಳಿಕೆಯನ್ನು ಪೋÅತ್ಸಾಹಿಸಲು ನಿಮಗೊಂದು ಪಿಜ್ಜಾ ಕೂಪನ್/ ಸ್ಟಾರ್ ಬಕ್ಸ್ ಕಾಫಿ ಕೂಪನ್ ನೀಡಬಹುದು! ಹೀಗೆ “ಚೆಕ್’ ಮಾಡದಿದ್ದರೂ, ಕೂಪನ್ ಕೊಡದಿದ್ದರೂ ಹೆಚ್ಚಿನವರು ಟೆಕೆಟ್ ಕೊಳ್ಳುತ್ತಾರೆ. ಏಕೆ? ಇಲ್ಲಿಯ ಜನರಿಗೆ “ಅಪಮಾನ’ ದ ಭಾವನೆ, “ಜವಾಬ್ದಾರಿ’ ಯ ಕಾಳಜಿ ಹೆಚ್ಚು. ಹಾಗೆಯೇ ಜನಸಂಖ್ಯೆ ಕಡಿಮೆ, ಸೌಲಭ್ಯ ಹೆಚ್ಚು, ಸರ್ಕಾರಕ್ಕೆ ನಿಯಂತ್ರಣ ಸುಲಭ. ಇವೂ ಕಾರಣಗಳು ಎಂದು ನನಗನ್ನಿಸಿತು.
ಮೆಲ್ಬರ್ನ್ ಟ್ರ್ಯಾಮ್ ಕಥೆ ಇಷ್ಟಕ್ಕೇ ಮುಗಿಯುವುದಿಲ್ಲ. ಚಿಕ್ಕದ್ದನ್ನೂ ವೈಭವೀಕರಿಸಿ, “ಪ್ರೇಕ್ಷಣೀಯ’ವಾಗಿ ಮಾಡುವ ಪಾಶ್ಚಾತ್ಯ ಜಗತ್ತಿನ ಎಲ್ಲದರಂತೆ ಹಳೇ ಟ್ರ್ಯಾಮ್‌ಗಳನ್ನು “ಜಂಕ್’ ಎಂದು ಎಸೆದು ಬಿಡುವ ಬದಲು “ಕೊಲೋನಿಯಲ್ ಟ್ರ್ಯಾಮ್ ಕಾರ್’ ಊಟದ ಅನುಭವವಾಗಿಸಿಬಿಟ್ಟಿ¨ªಾರೆ! ಮೊದಲೇ “ಬುಕ್’ ಮಾಡಿದರೆ “ಮೆಲ್ಬರ್ನ್’ ನೋಡುತ್ತ¤, ದೃಶ್ಯಗಳನ್ನು ಸವಿಯುತ್ತ ಊಟ ಮಾಡಬಹುದು, ವೈನ್ ಸವಿಯಬಹುದು. ಸಾಕಷ್ಟು ದುಬಾರಿಯಾದ ಅನುಭವವಾದರೂ, ಸ್ಮರಣೀಯವೂ ಹೌದು. ಧಾರವಾಡದ ಕಾಮತ್ ಯಾತ್ರಿ ನಿವಾಸದಲ್ಲಿ ರೈಲ್ವೇ ಸ್ಟೇಷನ್‌ನಲ್ಲಿ ಹೋಟೆಲ್ ಆರಂಭಿಸಿದ್ದರ ನೆನಪಿಗೆ ಹಳೆಯ ರೈಲೊಂದನ್ನು ಇಟ್ಟಿದ್ದು ನೆನಪಿಗೆ ಬಂತು. ಅದರಲ್ಲಿಯೂ “ಹೀಗೇ ಹೋಟೆಲ್ ಆರಂಭಿಸಿದರೆ?’ ಎನಿಸಿತು.
ಮೆಲ್ಬರ್ನ್ನ “ಟ್ರ್ಯಾಮ್’ ಗಳು ಮೆಲ್ಬರ್ನ್ ಜನರ ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ನಮಗೂ ಮೆಲ್ಬರ್ನ್ ನಲ್ಲಿ ಇದ್ದ ಒಂದು ವಾರ ಟ್ರ್ಯಾಮ್ ಸ್ಟಾಪ್ ಹುಡುಕುವುದು, ಮೈರೆ ಕಾರ್ಡ್‌ನ “ಟಚ್ ಆಫ್’ “ಟಚ್ ಆನ್’ ಮಕ್ಕಳಿಗೂ ಉತ್ಸಾಹದ, ಮಜಾ ತರುವ ಚಟುವಟಿಕೆಯಾಯಿತು. ಕೊನೆಗೆ ಪುಟ್ಟ ಭರತ, “ಓ ಇದು ಟ್ರ್ಯಾಮ್! ನೀನು ಹೇಳಿದ್ದು ತಪ್ಪಾಗಿರಲಿಲ್ಲ ಅಲ್ವಾ! ಟ್ರೇನ್‌ಗಿಂತ ಇದು ಚೆನ್ನಾಗಿದೆ!’ ಎನ್ನುವಷ್ಟು “ಟ್ರ್ಯಾಮ್’ ನಮಗೆ ಪ್ರಿಯವಾಯಿತು.
– ಕೆ. ಎಸ್. ಪವಿತ್ರಾ