Advertisement

ದಾಳಿಂಬೆ ಧನಂಜಯ

03:45 AM Apr 10, 2017 | Harsha Rao |

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ದಿಬ್ಬದ ಹಳ್ಳಿ ಗ್ರಾಮದ ಜಿ.ಆರ್‌. ಧನಂಜಯ್‌ ರೆಡ್ಡಿ ದಾಳಿಂಬೆಯಿಂದ ಹಸನಾದ ಬದುಕು ಕಟ್ಟಿಕೊಂಡಿದ್ದಾರೆ. ಕೃಷಿಯಲ್ಲಿ ರೈತ ಸಮಯ ಪ್ರಜ್ಞೆ ಹೊಂದಿರಬೇಕು. ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಇವೆರಡೂ ಇದ್ದರೆ ರೈತರು ಯಶಸ್ವಿಯಾಗಲು ಸಾಧ್ಯವಿದೆ ಎನ್ನುತ್ತಾ ಕೃಯಲ್ಲಿನ ಏಳು ಬೀಳುಗಳನ್ನು, ನೋವು ನಲಿವುಗಳನ್ನು ಮೆಲುಕು ಹಾಕುತ್ತಾರೆ ಧನಂಜಯ್‌.

Advertisement

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ದಿಬ್ಬದ ಹಳ್ಳಿ ಗ್ರಾಮದ ಜಿ.ಆರ್‌. ಧನಂಜಯ್‌ ರೆಡ್ಡಿ ದಾಳಿಂಬೆಯಿಂದ ಹಸನಾದ ಬದುಕು ಕಟ್ಟಿಕೊಂಡಿದ್ದಾರೆ. ಕೃಷಿಯಲ್ಲಿನ ಏಳು ಬೀಳುಗಳು ಇವರನ್ನೂ ಧೃತಿಗೆಡಿಸಿವೆ. ಈ ಸಹವಾಸ ಸಾಕೆನ್ನುವ ಮಟ್ಟಿಗೆ ಕಾಡಿದೆ. ಕಳೆದುಕೊಂಡಲ್ಲಿಯೇ ಹುಡುಕಬೇಕು ಎನ್ನುವುದು ಇವರ ಸಿದ್ದಾಂತ. ಅದಕ್ಕಾಗಿ ಭೂ ತಾಯಿ ಇವರನ್ನು ಕೈ ಬಿಡಲಿಲ್ಲ.

ಅಚ್ಚರಿ ಪಯಣ
ಕೂಡು ಕುಟುಂಬದಿಂದ ಹೊರ ಬಂದಾಗ ಇಪ್ಪತ್ತು ಎಕರೆ ಜಮೀನು ಹಾಗೂ ಒಂದು ಮುಕ್ಕಾಲು ಲಕ್ಷ ಸಾಲ ತೀರಿಸುವ ಹೊಣೆಗಾರಿಕೆ ಇವರಿಗೆ ಒಲಿದಿತ್ತು. 2007 ರಲ್ಲಿ ತಮ್ಮ ಪಾಲಿನ ಜಮೀನಿನಲ್ಲಿ ಸ್ವತಃ ತಾವೇ ಕೃಷಿ ಮಾಡಲು ತೊಡಗಿದಾಗ ಎರಡು ಎಕರೆ ಬದನೆ, ಎಂಟು ಎಕರೆ ಈರುಳ್ಳಿ, ಹತ್ತು ಎಕರೆ ಶೇಂಗಾ ಬೆಳೆದಿದ್ದರು. ಬದನೆ ಭರ್ಜರಿ ಇಳುವರಿ ನೀಡಿತ್ತು. ಐದು ಲಕ್ಷ ರೂ. ಗಳಿಕೆ ತಂದುಕೊಟ್ಟಿತ್ತು. ಈರುಳ್ಳಿಯೂ ಅಷ್ಟೇ ಪ್ರಮಾಣದ ಆದಾಯ ಗಿಟ್ಟಿಸಿತ್ತು. ಶೇಂಗಾ ಕೈಹಿಡಿದಿತ್ತು.  ಇದೇ ಖುಷಿಯಲ್ಲಿ ತಮ್ಮ ಜಮೀನಿನೊಂದಿಗೆ ಬೇರೆಯವರ ಹದಿನೈದು ಎಕರೆಯನ್ನು ಲೀಸ್‌ ಪಡೆದರು.

ಗೆಲುವಿನ ಹುಮ್ಮಸ್ಸಿನಲ್ಲಿದ್ದ ಇವರು ಮುಂದಿನ ಬೆಳೆಯಾಗಿ ಹತ್ತು ಎಕರೆಯಲ್ಲಿ ಈರುಳ್ಳಿ ಬೆಳೆದರು. 23 ಎಕರೆ ಶೇಂಗಾ ಬಿತ್ತಿದರು. ಉತ್ತಮ ಆದಾಯ ಕೈ ಸೇರಿತು. ಸಾಲ ಮುಕ್ತರಾದರು. ಕೈಯಲ್ಲೊಂದಿಷ್ಟು ಕಾಸು ಉಳಿದುಕೊಂಡಿತು.
ಈ ಮಧ್ಯೆ ಕೈ ಹಿಡಿಯುತ್ತಾ ಬಂದಿದ್ದ 10 ಎಕರೆಯಲ್ಲಿನ ಈರುಳ್ಳಿ ಉತ್ತಮ ಇಳುವರಿಯನ್ನೇ ನೀಡಿತ್ತು. ಆದರೆ ದರ ಕೈ ಕೊಟ್ಟಿತ್ತು. 500 ರೂ. ಇದ್ದ ಪ್ರತಿ ಬ್ಯಾಗ್‌ ಈರುಳ್ಳಿ ಬೆಲೆ 100 ರೂ. ಗೆ ಬಿದ್ದಿತು. ಬೆಳೆದು ಸಂಗ್ರಸಿಟ್ಟ 1300ಕ್ಕೂ ಹೆಚ್ಚು ಬ್ಯಾಗ್‌ ಈರುಳ್ಳಿಯನ್ನು ತಿಪ್ಪೆಗೆ ಎಸೆದೇ ಬಿಟ್ಟರು. ನಾಲ್ಕು ಲಕ್ಷ ರೂ. ಸಾಲದ ಹೊರೆ ಬಿತ್ತು. ಇದರ ಜೊತೆಯಲ್ಲಿಯೇ ಬೆಳೆದಿದ್ದ 18 ಎಕರೆಯಲ್ಲಿನ ಸೂರ್ಯಕಾಂತಿ ಬೆಳೆಯೂ ಕೈಕೊಟ್ಟಿತ್ತು. 

ಸೋಲಿನಲ್ಲಿ ಭರವಸೆಯಾಗಿದ್ದು  ಇವರ ಪತ್ನಿ ಪುಷ್ಪಾ ಧನಂಜಯ್‌. ದೈರ್ಯ ತುಂಬಿದ್ದರು. ಸಣ್ಣ ಬಂಡವಾಳದಲ್ಲಿ ತರಕಾರಿ ಕೃಷಿ ಮಾಡುವ ಸಲಹೆ ಮುಂದಿಟ್ಟರು. ಇನ್ನೊಬ್ಬರಿಂದ ಸಾಲ ಪಡೆದು ಎರಡು ಎಕರೆ ಬದನೆ ಗಿಡಗಳನ್ನು ತಂದು ನಾಟಿ ಮಾಡಿದರು. ಅಲ್ಪಾವಧಿಯ ಬೆಳೆ, ಬಿರು ಬೇಸಿಗೆಯಲ್ಲೂ ಆಪತ್‌ ಬಾಂಧವನಂತೆ ಕೈ ಹಿಡಿಯಿತು. 

Advertisement

ಊರುಗೋಲಾದ ದಾಳಿಂಬೆ 
ಆಪ್ತ ಸ್ನೇಹಿತರೊಬ್ಬರು ದಾಳಿಂಬೆ ಕೃಷಿ  ಸಲಹೆ ನೀಡಿದರು. ಅರಸಿಕೆರೆಯ ದಾಳಿಂಬೆ ಕೃಷಿಕರೊಬ್ಬರನ್ನು ಭೇಟಿ ಮಾಡಿಸಿದರು. ಅವರಿಂದಲೇ ಭಗವಾ ತಳಿಯ ದಾಳಿಂಬೆ ಗಿಡಗಳನ್ನು ಖರೀದಿಸಿಯೂ ಆಯಿತು. ನಾಲ್ಕು ಎಕರೆಯಲ್ಲಿ ಗಿಡದಿಂದ ಗಿಡಕ್ಕೆ ಹತ್ತು ಅಡಿ, ಸಾಲಿನಿಂದ ಸಾಲಿಗೆ ಹನ್ನೆರಡು ಅಡಿ ಅಂತರಟ್ಟು 1,200 ದಾಳಿಂಬೆ ಗಿಡಗಳನ್ನು ನಾಟಿ ಮಾಡಿದರು.

ಜಮೀನನ್ನು ಹದವಾಗಿ ಉಳುಮೆ ಮಾಡಿ 13 ಟ್ರಾಕ್ಟರ್‌ ಲೋಡ್‌ ಕೊಟ್ಟಿಗೆ ಗೊಬ್ಬರವನ್ನು ಸೇರಿಸಿದರು. ಡಿಗ್ಗರ್‌ ಸಹಾಯದಿಂದ ಎರಡು ಅಡಿ ಘನಾಕ್ರತಿಯ ಗುಂಡಿ ತೋಡಿ ಪ್ರತಿ ಗುಂಡಿಯಲ್ಲಿ ಒಂದು ಬುಟ್ಟಿಯಂತೆ ಕಾಂಪೋಸ್ಟ್‌ ಗೊಬ್ಬರ ಹಾಕಿ, ಗಿಡ ನಾಟಿ ಮಾಡಿದರು. ಕಣ್ಣಲ್ಲಿ ಕಣ್ಣಿಟ್ಟು ಗಮನಿಸಿದರು. ಉಪಚಾರದಲ್ಲಿ ಕೊರತೆಯಾಗದಂತೆ ನೋಡಿಕೊಂಡರು. ಆದಾಗ್ಯೂ ಮೂರು ತಿಂಗಳವರೆಗೂ ನಿರೀಕ್ಷಿತ ಏಳಿಗೆ ಗಿಡಗಳಲ್ಲಿ ಕಂಡು ಬರಲಿಲ್ಲ. ಪುನಃ ಜೈವಿಕ ಗೊಬ್ಬರ ಮಿಶ್ರಿತ ಕೊಟ್ಟಿಗೆ ಗೊಬ್ಬರವನ್ನು ಪ್ರತಿ ಗಿಡಗಳಿಗೆ ಎರಡು ಬುಟ್ಟಿಯಂತೆ ಹಾಕಿದರು. ಅದ್ಬುತ ಬೆಳವಣಿಗೆ ಕಂಡು ಬಂತು. ಸಮಯಕ್ಕನುಗುಣವಾಗಿ ನೀರುಣಿಸುಕೆ, ಕಾಲ ಕಾಲಕ್ಕೆ ಔಷಧಿ ಸಿಂಪರಣೆಯ ಪರಿಣಾಮ ಪ್ರತಿ ಗಿಡಗಳು ಸರಾಸರಿ ಮೂವತ್ತು ಕಿಲೋಗ್ರಾಂ ದಾಳಿಂಬೆ ಇಳುವರಿ ಹೊತ್ತು ನಿಂತವು. ನಾಲ್ಕು ಎಕರೆಯಿಂದ 18 ಲಕ್ಷ ರೂ. ಆದಾಯ ಕೈ ಸೇರಿತು. ಪಕ್ಕದಲ್ಲಿಯೇ ಬೆಳೆದಿರುವ ಮೂರು ಎಕರೆಯಲ್ಲಿನ ಬದನೆ ಆರು ಲಕ್ಷ ಆದಾಯ ತಂದು ಕೊಟ್ಟಿತು. ಪುನಃ ಬೆಳೆದ ಈರುಳ್ಳಿ ಹದಿನೈದು ಲಕ್ಷ ಕೊಟ್ಟಿತು.

ದಾಳಿಂಬೆ ಭರವಸೆ ಮೂಡಿಸಿದ ಕಾರಣ ಬೆಳೆ ವಿಸ್ತರಿಸಿಕೊಂಡಿದ್ದಾರೆ. ಸ್ವಂತ ಜುàನಿನಲ್ಲಿ ಏಳು ಎಕರೆ ಹಾಗೂ ಲೀಸ್‌ ಆಧಾರದಲ್ಲಿ ಪಡೆದ 28 ಎಕರೆ, ಹೀಗೆ 35 ಎಕರೆಯಲ್ಲಿ ದಾಳಿಂಬೆ ವ್ಯಾಪಿಸಿದೆ. 9,000 ದಾಳಿಂಬೆ ಗಿಡಗಳನ್ನು ಪೋಷಿಸುತ್ತಿದ್ದಾರೆ. ಆರಂಭದಲ್ಲಿ ನಾಟಿ ಮಾಡಿದ 1,200 ಗಿಡಗಳನ್ನು ಬೇರೆಡೆಯಿಂದ ತರಿಸಿಕೊಂಡಿದ್ದರು. ಉಳಿದ ಗಿಡಗಳನ್ನು ತಾವೇ ನರ್ಸರಿ ಮಾಡಿಕೊಂಡು ಗಿಡ ತಯಾರಿಸಿ ನಾಟಿ ಮಾಡಿದ್ದಾರೆ.

ನಿರ್ವಹಣೆ ಜಾಗರೂಕತೆ:
ಸಾವಯವ ಗೊಬ್ಬರ ಬಳಕೆಯಲ್ಲಿ ಇವರಿಗೆ ಅತಿ ವಿಶ್ವಾಸ. 13 ಎಕರೆ ದಾಳಿಂಬೆ ತೋಟಕ್ಕೆ 118 ಲೋಡ್‌ ಕೊಟ್ಟಿಗೆ ಗೊಬ್ಬರ ಏರಿಸಿದ್ದಾರೆ. ಪ್ರತಿ ಲೋಡ್‌ನ‌ಲ್ಲಿ 4-5 ಟನ್‌ ಗೊಬ್ಬರತ್ತು. ಗಿಡ ನಾಟಿ ಮಾಡಿದ ಮೊದಲ ವರ್ಷಕ್ಕೆ ಗಿಡದ ಬುಡದಿಂದ ಒಂದು ಅಡಿ ದೂರದಲ್ಲಿ ಗಿಡದ ಸುತ್ತಲೂ ಒಂದು ಅಡಿ ಅಗಲ, ಅರ್ದ ಅಡಿ ಅಳದ ಪಾತಿ ಮಾಡಿ ಗೊಬ್ಬರ ಹಾಕಬೇಕು. ಎರಡನೆಯ ವರ್ಷದಲ್ಲಿ ಎರಡು ಅಡಿ ಅಂತರದಲ್ಲಿ, ಮೂರನೆಯ ವರ್ಷದಲ್ಲಿ ಮೂರು ಅಡಿ ಅಂತರದಲ್ಲಿ, ನಾಲ್ಕನೆಯ ವರ್ಷದಲ್ಲಿ ಮೂರುವರೆ ಅಡಿ ಅಂತರದಲ್ಲಿ ಹೀಗೆ ವರ್ಷದಿಂದ ವರ್ಷಕ್ಕೆ ಅರ್ದ ಅಡಿ ಹೆಚ್ಚು ಅಂತರಟ್ಟು ಪಾತಿ ಮಾಡಿ ಗೊಬ್ಬರವನ್ನು ಹಾಕಬೇಕು ಎನ್ನುತ್ತಾರೆ.

ಭರ್ತಿ ಇಳುವರಿ
ಇವರ ತೋಟದಲ್ಲಿರುವ ಗಿಡಗಳಲ್ಲಿರುವ ಹಣ್ಣುಗಳ ಗಾತ್ರ ಅಚ್ಚರಿ ಮೂಡಿಸುತ್ತದೆ. ಹೆಚ್ಚಿನ ಹಣ್ಣುಗಳು ಒಂದು ಕಾಲು ಕಿಲೋಗ್ರಾಂ ತೂಕ ಹೊಂದಿವೆ. ಹಣ್ಣುಗಳ ಸರಾಸರಿ ತೂಕ 800 ಗ್ರಾಂ ಇದೆ. ಈಗಾಗಲೇ ಮಾರಾಟ ಮಾಡಿರುವ ಪ್ರತಿ ಟನ್‌ ದಾಳಿಂಬೆಗೆ 90,000 ರೂ. ದರ ಸಿಕ್ಕಿದೆ. ಕಳೆದ ವರ್ಷದ ಸಪ್ಟೆಂಬರ್‌ ತಿಂಗಳಿನಲ್ಲಿ  ನಾಟಿ ಮಾಡಿರುವ 22 ಎಕರೆಯಲ್ಲಿ ಬೆಳೆದ 5200 ದಾಳಿಂಬೆ ಗಿಡಗಳು ಬೆಳವಣಿಗೆಯ ಹಂತದಲ್ಲಿದೆ.  

ಕೃಷಿಯಲ್ಲಿ ರೈತ ಸಮಯ ಪ್ರಜ್ಞೆ ಹೊಂದಿರಬೇಕು. ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಇವೆರಡೂ ಇದ್ದರೆ ರೈತರು ಯಶಸ್ವಿಯಾಗಲು ಸಾಧ್ಯವಿದೆ ಎನ್ನುತ್ತಾ ಕೃಯಲ್ಲಿನ ಏಳು ಬೀಳುಗಳನ್ನು, ನೋವು ನಲಿವುಗಳನ್ನು ಮೆಲುಕು ಹಾಕುತ್ತಾರೆ ಧನಂಜಯ್‌ ರೆಡ್ಡಿ.

ಸಂಪರ್ಕಿಸಲು: 9945014696

– ಕೋಡಕಣಿ ಜೈವಂತ ಪಟಗಾರ

Advertisement

Udayavani is now on Telegram. Click here to join our channel and stay updated with the latest news.

Next