Advertisement

ದಾಳಿಂಬೆ ನಾ ನಿನ್ನ ನಂಬಿದೆ…

02:14 PM Feb 27, 2017 | |

ಕೊಪ್ಪಳ ಜಿಲ್ಲೆಯಲ್ಲಿ ದಾಳಿಂಬೆ ಎಂದರೆ ರೈತರು ಸಾಕಪ್ಪ ಸಾಕು, ಈ ದಾಳಿಂಬೆ ಸಹವಾಸ ಎನ್ನುವಂತಾಗಿದೆ. ಇಂಥ ಪರಿಸ್ಥಿತಿಯಲ್ಲಿ ದಾಳಿಂಬೆ ಬೆಳೆಯನ್ನು ಬೆಳೆದು ಸೈ ಎನಿಸಿಕೊಂಡಿರುವ ರೈತ ವೀರೇಶ ತುರಕಾಣಿ ಸಹಾಸಗಾಥೆ ದೊಡ್ಡದು. 

Advertisement

ಕುಷ್ಟಗಿ ಪಟ್ಟಣಕ್ಕೆ ಹೊಂದಿಕೊಂಡಿರುವ 10 ಎಕರೆಯ ಹುಲ್ಲು ಕಡ್ಡಿ ಬೆಳೆಯದ ಜವುಳು ಭೂಮಿಯಲ್ಲಿ ಎರಡೂವರೆ ಅಡಿ ಉದ್ದ-ಅಗಲ ಹಾಗೂ ಮೂರು ಅಡಿ ಆಳದ ಗುಂಡಿಯಲ್ಲಿ ಫ‌ಲವತ್ತಾದ ಮಣ್ಣು, ಜೊತೆಗೆ ಮರಳು, ತಿಪ್ಪೆ ಗೊಬ್ಬರ, ಜೊತೆಗೆ ಲಘು ಪೋಷಕಾಂಶ ಸಮ್ಮಿಶ್ರಣದೊಂದಿಗೆ 3,200 ಗಿಡಗಳನ್ನು ನಾಟಿ ಮಾಡಿದರು. ಆದರೆ ಸೊರಗು ರೋಗಕ್ಕೆ (ಡೈ ಬ್ಯಾಕ್‌) 800 ಗಿಡ ಅಹುತಿಯಾಯಿತು. ಇದನ್ನು ಹೊರತಾಗಿ ಇವರ ತೋಟಕ್ಕೆ ದುಂಡಾಣು ಅಂಗಮಾರಿಗೆ ರೋಗವನ್ನು ಯಶಸ್ವಿಯಾಗಿ ಔಷಧೋಪಚಾರದಿಂದ ನಿರ್ವಹಿಸಿ, ನಿಭಾಯಿಸಿ ಈ ಬೆಳೆಯನ್ನು ರಕ್ಷಿಸಿಕೊಂಡಿದ್ದಾರೆ.

ಒಮ್ಮೆ ನಾಟಿ ಮಾಡಿದ ದಾಳಿಂಬೆ ಬೆಳೆಯಿಂದ ಸತತ 12 ವರ್ಷ ಇಳುವರಿ ತೆಗೆದಿದ್ದು, ಪ್ರತಿ ವರ್ಷ ಮಾರುಕಟ್ಟೆ ಏರಿಳಿತ, ರೋಗ ತೀವ್ರತೆ ಎದುರಿಸಿ ಸರಾಸರಿ ಕ್ರಮೇಣ ಹೆಚ್ಚಿಸಿಕೊಂಡಿದ್ದಾರೆ. ಈ ತೋಟದಲ್ಲಿಯೇ ಇನ್ನೆರಡು ಇಳುವರಿ ತೆಗೆದ ಬಳಿಕ, ಈ ಗಿಡಗಳನ್ನೆಲ್ಲಾ ತೆರವುಗೊಳಿಸಿ, ಪುನಃ ದಾಳಿಂಬೆ ನಾಟಿ ಮಾಡುವ ಯೋಚನೆ ಇವರದಾಗಿದೆ.

ಬೇಸಿಗೆಯಲ್ಲಿ ಬಿಸಿಲಿನ ಪ್ರಖರಕ್ಕೆ ಹಣ್ಣುಗಳು ಕಪ್ಪಾಗದಂತೆ ಗೋಣಿ ಚೀಲ, ಸೀರೆ, ಹಳೆಯ ಚೀಲ ಇಲ್ಲವೇ ರದ್ದಿ ಪೇಪರ್‌ಗಳಿಂದ ದಾಳಿಂಬೆ ನೈಜ ಬಣ್ಣ ಹಾಳಗದಂತೆ ನಿಗಾವಹಿಸಿದ್ದು ಅವರ ಈ ಅನುಭವವೇ ಪ್ರಗತಿಪರ ರೈತರನ್ನಾಗಿಸಲು ಸಾಧ್ಯವಾಗಿದೆ. 

ಕೂಲಿ ಕಾರ್ಮಿಕರ ಖರ್ಚು ಸೇರಿ ಔಷಧೋಪಚಾರಕ್ಕೆ ಪ್ರತಿ ವರ್ಷ ಏನಿಲ್ಲವೆಂದರೂ 8ರಿಂದ 10ಲಕ್ಷ ರು. ಖರ್ಚಾಗುತ್ತಿದೆ.  ಆದರೂ ಅವರ ಪ್ರತಿವರ್ಷದ ಸರಾಸರಿ ಆದಾಯ 30ರಿಂದ 55 ಲಕ್ಷ ರೂ. ಆಗಿದ್ದು, ಈ ವರ್ಷ ನೀರೀಕ್ಷೆಗೂ ಮೀರಿ ಹುಲುಸಾದ ಬೆಳೆ ಬಂದಿರುವುದರಿಂದ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಲಭಿಸಿದಲ್ಲಿ ಸರಾಸರಿ 80 ಲಕ್ಷ ರು.ವರೆಗಿನ ಆದಾಯದ ಗುರಿ ಇಟ್ಟುಕೊಂಡೇ ಕಾರ್ಯಪ್ರವೃತ್ತರಾಗುತ್ತಾರೆ.  ವೀರೇಶ ತುರಕಾಣಿ ಒಮ್ಮೊಮ್ಮೆ ಮಾರುಕಟ್ಟೆಯ ಏರಿಳಿತ, ಹವಮಾನದ ವೈಪರಿತ್ಯ ಇವುಗಳಿಂದಲೇ ನೀರೀಕ್ಷಿತ ಆದಾಯ ಇಲ್ಲದಿದ್ದರೂ ಅದರ ಆಸುಪಾಸಿನಲ್ಲಿ ಆದಾಯ ಲೆಕ್ಕಚಾರ ತಪ್ಪದು  ಎನ್ನುವುದು ವೀರೇಶ ತುರಕಾಣಿ ವಿಶ್ವಾಸ. 

Advertisement

ದಾಳಿಂಬೆ ಕೃಷಿಯಲ್ಲಿ ಕಷ್ಟಪಟ್ಟರೆ ಆದಾಯ ಸಾಧ್ಯವಿದೆ ಎಂದು ಕಂಡು ಕೊಂಡಿರುವ ವೀರೇಶ್‌ ಅವರು, ಕಳೆದ ಎರಡು ವರ್ಷಗಳ ಹಿಂದೆ ಕಂದಕೂರು ರಸ್ತೆಯಲ್ಲಿ ಆರೂವರೆ ಎಕರೆ ಕಪ್ಪು ಜಮೀನಿಲ್ಲಿ ದಾಳಿಂಬೆ ಬೆಳೆದಿದ್ದಾರೆ. ಈ ಬೆಳೆಯನ್ನು ವೈಜಾnನಿಕವಾಗಿ ಅಷ್ಟೇ ತಾಂತ್ರಿಕವಾಗಿ ಕೈಗೊಳ್ಳಲಾಗಿದ್ದು, ಸಾಲಿನಿಂದ ಸಾಲಿಗೆ 8 ಅಡಿಯಂತೆ ದಾಳಿಂಬೆ ನಾಟಿ ಮಾಡಿದ್ದು ಕಪ್ಪು 

ಭೂಮಿಯಾಗಿರುವ ಹಿನ್ನೆಲೆಯಲ್ಲಿ ನೀರು ಸರಾಗವಾಗಿ ಇಂಗಲು, ಇಂಗಿದ ನೀರು ಆಯಾಗದಿರಲು ಲಕ್ಷಾಂತರ ರೂ. ಏರು ಮಡಿಯಾಗಿ ಮರಂ ಮಣ್ಣಿನ ಬೆಡ್‌ ಹಾಕಲಾಗಿದೆ. ದುಂಡಾಣು, ಅಂಗಮಾರಿ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತೋಟದ ಸುತ್ತಲು ನೆರಳು ಪರದೆ (ಸೇಡ್‌ ನೆಟ್‌) ರಕ್ಷಣಾ ಬೇಲಿ ಹಾಕಿಕೊಂಡಿದ್ದು, ಈ ಬೆಳೆಯ ಮಧ್ಯೆ ಮೋಸಂಬಿ, ಕಿನೋ, ನುಗ್ಗೆ, ನೆಲ್ಲಿ ಇತರೇ ಬೆಳೆಗಳನ್ನು ಬೆಳೆದಿದ್ದಾರೆ. 

ದಾಳಿಂಬೆ ಬೆಳೆಯಿಂದ ಸದ್ಯ 100 ಟನ್‌.  ಪ್ರತಿ ಕೆ.ಜಿಗೆ 70 ರೂ. ಕೂಲಿ, ಔಷಧಿ, ನಿರ್ವಹಣೆ ಖರ್ಚು ಸೇರಿದಂತೆ ವರ್ಷಕ್ಕೆ 12 ಲಕ್ಷ ರೂ. ಒಟ್ಟಾರೆ 58ರಿಂದ 60 ಲಕ್ಷ ರೂ. ಗ್ಯಾರಂಟಿಯಾಗಿದೆ. ದಾಳಿಂಬೆಯಲ್ಲಿ ಉತ್ತಮ ನಿರ್ವಹಣೆಯಿಂದಾಗಿ ತೋಟಗಾರಿಕೆ ವಿಶ್ವ ವಿದ್ಯಾಲಯ, ತೋಟಗಾರಿಕೆ ಕಾಲೇಜು ವಿದ್ಯಾರ್ಥಿಗಳು ಪ್ರತಿ ವರ್ಷ ಅಧ್ಯಯನಕ್ಕಾಗಿ ಈ ತೋಟಕ್ಕೆ ಭೇಟಿ ನೀಡುತ್ತಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಇವರ ತೋಟ ಮಾದರಿ ಎನಿಸಿದೆ. ಹೊಸದಾಗಿ ನಾಟಿ ಮಾಡುವ ರೈತರು ರೋಗಮುಕ್ತ ಸಸಿಗಳನ್ನು ನಾಟಿ ಮಾಡಿರಬೇಕು. ದಿನದ 24 ತಾಸು ದಾಳಿಂಬೆ ತೋಟದಲ್ಲಿ ನಿಗಾವಹಿಸಿದರೆ ಮಾತ್ರ, ನೀರಿಕ್ಷೆಯಂತೆ ಬೆಳೆ ತೆಗೆಯಬಹುದು ಎನ್ನುತ್ತಾರೆ ತುರಕಾಣಿ. 

– ಮಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next