Advertisement

ದಾಳಿಂಬೆ ಸವಿರುಚಿ

06:00 AM Dec 07, 2018 | |

ಅಪಾರ ಔಷಧೀಯ ಗುಣಗಳನ್ನು ಹೊಂದಿರುವ ದಾಳಿಂಬೆ ಹಣ್ಣು ಸ್ವಾದಿಷ್ಟಕರ ರುಚಿ ಹೊಂದಿದ್ದು, ಅತ್ಯಧಿಕ ಪ್ರಮಾಣದ ವಿಟಮಿನ್‌ಗಳನ್ನು ಹೊಂದಿದೆ. ದಾಳಿಂಬೆ ಆರೋಗ್ಯಕ್ಕೆ ಉತ್ತಮ ದಿವ್ಯಔಷಧ. ಇದರ ಕಾಳುಗಳನ್ನು ಹಾಗೆಯೇ ತಿನ್ನಬಹುದು ಇಲ್ಲವೆ ಜ್ಯೂಸ್‌ ತಯಾರಿಸಿಯೂ ಸೇವಿಸಬಹುದು. ದಾಳಿಂಬೆ ಕಾಳುಗಳು ಮಾತ್ರವಲ್ಲದೆ ಸಿಪ್ಪೆ ಸಹ ಆರೋಗ್ಯವರ್ಧಕ ಮತ್ತು ಸೌಂದರ್ಯವರ್ಧಕ ಗುಚಣಗಳನ್ನು ಹೊಂದಿದೆ.

Advertisement

ದಾಳಿಂಬೆ ಜೂಸ್‌
ಬೇಕಾಗುವ ಸಾಮಗ್ರಿ:
ದಾಳಿಂಬೆ ಕಾಳು- ಒಂದು ಕಪ್‌, ನಿಂಬೆರಸ- ಎರಡು ಚಮಚ, ಪುದೀನಾ ಎಲೆ- ನಾಲ್ಕು, ಬೇಕಷ್ಟು ಸಕ್ಕರೆ, ಕಾಳುಮೆಣಸಿನ ಹುಡಿ- 1/2 ಚಮಚ.

ತಯಾರಿಸುವ ವಿಧಾನ: ದಾಳಿಂಬೆಯನ್ನು ಬಿಡಿಸಿ ಕಾಳುಗಳನ್ನು ತೆಗೆದುಕೊಂಡು ಮಿಕ್ಸರ್‌ನಲ್ಲಿ ರುಚಿಗೆ ತಕ್ಕಷ್ಟು ಸಕ್ಕರೆ ಮತ್ತು ಸ್ವಲ್ಪ$ ನೀರು ಬೆರೆಸಿ ರುಬ್ಬಿಕೊಳ್ಳಿ. ನಂತರ ಇದನ್ನು ಸೋಸಿಕೊಳ್ಳಿ. ಸೋಸಿದ ನೀರಿಗೆ ನಿಂಬೆರಸ, ಕಾಳುಮೆಣಸಿನ ಪುಡಿ, ಚಿಟಿಕೆ ಉಪ್ಪು ಬೆರೆಸಿ. ಚೆನ್ನಾಗಿ ಕಲಕಿದ ಮೇಲೆ ಪುದೀನಾ ಎಲೆಯನ್ನು ಸಣ್ಣದಾಗಿ ಹೆಚ್ಚಿ ಉದುರಿಸಿದರೆ ರುಚಿಕರ ಜ್ಯೂಸ್‌ ಕುಡಿಯಲು ಸಿದ್ಧ . ಇದು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ.

ದಾಳಿಂಬೆ ಮೊಸರನ್ನ
ಬೇಕಾಗುವ ಸಾಮಗ್ರಿ:
ಬೆಂದ ಅನ್ನ – 2 ಕಪ್‌, ಮೊಸರು- 2 ಕಪ್‌, ಮಜ್ಜಿಗೆ- 1 ಕಪ್‌, ಜೋಳ- 1/4  ಕಪ್‌, ದಾಳಿಂಬೆ ಕಾಳುಗಳು- 1/4 ಕಪ್‌, ಶುಂಠಿ- ಸಣ್ಣ ತುಂಡು, ಹಸಿಮೆಣಸು- 2, ಕೊತ್ತಂಬರಿಸೊಪ್ಪು , ಉಪ್ಪು ರುಚಿಗೆ ತಕ್ಕಷ್ಟು , ಒಗ್ಗರಣೆಗೆ: ಸಾಸಿವೆ, ಕಡಲೇಬೇಳೆ, ಇಂಗು, ಕರಿಬೇವಿನ ಸೊಪ್ಪು .

ತಯಾರಿಸುವ ವಿಧಾನ: ಮೊದಲು ಅನ್ನ ಮಾಡಿಕೊಳ್ಳಿ. ಅದು ತಣ್ಣಗಾದ ಬಳಿಕ ಮೊಸರು, ದಾಳಿಂಬೆ, ಜೋಳ ಮತ್ತು ಶುಂಠಿರಸ ಬೆರೆಸಿರಿ. ಬೇಕಾದಷ್ಟು ಉಪ್ಪು ಸೇರಿಸಿ ಮುಚ್ಚಿಡಿ. ಊಟದ ಸ್ವಲ್ಪ ಮೊದಲು ಒಗ್ಗರಣೆ ಸಿಡಿಸಿ ಕೊಚ್ಚಿದ ಹಸಿಮೆಣಸು ಸೇರಿಸಿ ಪುನಃ ಒಂದು ಬಾರಿ ಚೆನ್ನಾಗಿ ಕಲಸಿ ಬೆರೆಸಿ. ಬೇಕಿದ್ದಲ್ಲಿ ಕೊನೆಗೆ ಮಜ್ಜಿಗೆ ಸೇರಿಸಿ ಸವಿಯಿರಿ.

Advertisement

ದಾಳಿಂಬೆ ಸಲಾಡ್‌ 
ಬೇಕಾಗುವ ಸಾಮಗ್ರಿ:
ದಾಳಿಂಬೆ ಬೀಜಗಳು- 1/2 ಕಪ್‌, ಮೊಳಕೆಯೊಡೆದ ಹೆಸರುಕಾಳು- 1/2 ಕಪ್‌, ನೆನೆಸಿದ ಕಡಲೆಬೇಳೆ- 1/4 ಕಪ್‌, ಹೆಚ್ಚಿದ ಕೊತ್ತಂಬರಿ ಸೊಪ್ಪು  ಸ್ವಲ್ಪ , ಹಸಿಮೆಣಸು- 2, ನಿಂಬೆರಸ- ಒಂದು ಚಮಚ, ಗೋಡಂಬಿ- ನಾಲ್ಕು.

ತಯಾರಿಸುವ ವಿಧಾನ: ಮೊಳಕೆಯೊಡೆದ ಹೆಸರುಕಾಳು, ನೆನೆಸಿದ ಕಡಲೆಬೇಳೆ, ದಾಳಿಂಬೆ ಬೀಜಗಳು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು , ಉದ್ದಕ್ಕೆ ಹೆಚ್ಚಿದ ಹಸಿಮೆಣಸು ಇವುಗಳನ್ನು ಮಿಶ್ರ ಮಾಡಿ. ಇದಕ್ಕೆ ನಿಂಬೆರಸ, ಉಪ್ಪು , ಗೋಡಂಬಿ ಹಾಕಿ ಕಲಸಿ ಒಂದು ಬೌಲ್‌ಗೆ ಹಾಕಿದರೆ ರುಚಿಕರ ಹೆಸರು, ದಾಳಿಂಬೆ, ಕಡಲೆ ಬೇಳೆ ಸಲಾಡ್‌ ಸವಿಯಲು ಸಿದ್ಧ.

ದಾಳಿಂಬೆ ರಾಯತ
ಬೇಕಾಗುವ ಸಾಮಗ್ರಿ:
ದಾಳಿಂಬೆ- ಬೀಜಗಳು 2 ಕಪ್‌, ಮೊಸರು 500 ಗ್ರಾಂ, ಜೀರಿಗೆ- 1 ಚಮಚ, ಉಪ್ಪು$ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಮೊದಲಿಗೆ ಮೊಸರನ್ನು ಮಿಕ್ಸಿಗೆ ಹಾಕಿ ಸ್ವಲ್ಪ ಹೊತ್ತು ತಿರುವಿರಿ. ಇದರಿಂದ ಮೊಸರು ಸ್ವಲ್ಪ ತೆಳುವಾಗುತ್ತದೆ. ಇದಕ್ಕೆ ಉಪ್ಪು ಮತ್ತು ದಾಳಿಂಬೆ ಬೀಜಗಳನ್ನು ಸೇರಿಸಿ. ಚೆನ್ನಾಗಿ  ಮಿಶ್ರಣ ಮಾಡಿ. ನಂತರ ಜೀರಿಗೆಯನ್ನು ಸ್ವಲ್ಪ ಹುರಿದು ಪುಡಿ ಮಾಡಿ ಬೆರೆಸಿ. ಈಗ ತಂಪಾದ ಆರೋಗ್ಯಭರಿತ ದಾಳಿಂಬೆ ರಾಯತ ರೆಡಿ.

ದಾಳಿಂಬೆ ಸಿಪ್ಪೆ ಕಡಿ
ಬೇಕಾಗುವ ಸಾಮಗ್ರಿ:
ದಾಳಿಂಬೆ ಸಿಪ್ಪೆ- 2 ತುಂಡು, ತುಪ್ಪ – 2 ಚಮಚ, ಕೆಂಪುಮೆಣಸು 2-3, ಕಾಳುಮೆಣಸು 5-6, ಜೀರಿಗೆ- 1/2 ಚಮಚ, ಕಾಯಿತುರಿ- 1 ಕಪ್‌, ಹುಣಸೆಹಣ್ಣು- ನೆಲ್ಲಿಗಾತ್ರ, ರುಚಿಗೆ ಬೇಕಷ್ಟು ಉಪ್ಪು, ಒಗ್ಗರಣೆಗೆ: ಕರಿಬೇವು, ಇಂಗು ಮತ್ತು ಸಾಸಿವೆ.

ತಯಾರಿಸುವ ವಿಧಾನ: ತುಪ್ಪದಲ್ಲಿ ಕೆಂಪು ಮೆಣಸು, ಜೀರಿಗೆ, ಕಾಳುಮೆಣಸು ಹಾಕಿ ಹುರಿಯಿರಿ. ನಂತರ ಇದಕ್ಕೆ ಸಣ್ಣಗೆ ಪೀಸ್‌ ಮಾಡಿದ ದಾಳಿಂಬೆ ಸಿಪ್ಪೆ ಬೆರೆಸಿ ಘಮ್‌ ಅಂತ ಪರಿಮಳ ಬರುವ ತನಕ ಹುರಿಯಿರಿ. ತಣ್ಣಗಾದ ಮೇಲೆ ಕಾಯಿತುರಿ, ಹುಣಸೆಹಣ್ಣಿನೊಂದಿಗೆ ಉಪ್ಪು ಹಾಕಿ ನಯವಾಗಿ ರುಬ್ಬಿರಿ. ನಂತರ ಒಂದು ಬಾಣಲೆಯಲ್ಲಿ ಸಾಸಿವೆ, ಇಂಗು, ಕರಿಬೇವಿನ ಒಗ್ಗರಣೆ ತಯಾರಿಸಿ ಇದಕ್ಕೆ ರುಬ್ಬಿಟ್ಟ ಮಸಾಲೆಯನ್ನು ಹಾಕಿ ಐದು ನಿಮಿಷ ಮುಚ್ಚಿಟ್ಟರೆ ರುಚಿಕರ ಕಡಿ ತಯಾರು. ಇದು ಊಟದೊಂದಿಗೆ ಚೆನ್ನಾಗಿರುತ್ತದೆ ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.

ದಾಳಿಂಬೆ ಸಿಪ್ಪೆಯ ಹುಡಿಯನ್ನು ನೀರಿನಲ್ಲಿ ನೆನೆಸಿ ಇದಕ್ಕೆ ಸ್ವಲ್ಪ ಜೀರಿಗೆ ಹಾಗೂ ಮಜ್ಜಿಗೆಯನ್ನು ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ಅತಿಸಾರ ಹಾಗೂ ಆಮಶಂಕೆಗೆ ಉತ್ತಮ ಮನೆಮದ್ದು.

ಸ್ವಾತಿ

Advertisement

Udayavani is now on Telegram. Click here to join our channel and stay updated with the latest news.

Next