Advertisement

ಬಹುರೂಪಿ ನಾಟಕೋತ್ಸವಕ್ಕೆ “ಪರಾಕ್ರಮ’ಚಾಲನೆ

12:04 PM Jan 10, 2017 | |

ಮೈಸೂರು: ರಂಗಾಯಣದ ಬಹುರೂಪಿ ಅಂತಾರಾಷ್ಟ್ರೀಯ ಬಹುಭಾಷಾ ನಾಟಕೋತ್ಸವಕ್ಕೆ ಸಿದ್ಧತೆಗಳು ಭರದಿಂದ ನಡೆದಿದ್ದು, ಆರು ದಿನಗಳ ಕಾಲ ನಡೆಯಲಿರುವ ನಾಟಕೋತ್ಸವಕ್ಕೆ ಜನವರಿ 13ರಂದು ಕಲಾಮಂದಿರದಲ್ಲಿ ಸಂಜೆ 5ಕ್ಕೆ ಶ್ರೀಲಂಕಾದ ರಂಗ ನಿರ್ದೇಶಕ ಪರಾಕ್ರಮ ನಿರಿಯೆಲ್ಲ ಚಾಲನೆ ನೀಡಲಿದ್ದಾರೆ ಎಂದು ರಂಗಾಯಣದ ಪ್ರಭಾರ ನಿರ್ದೇಶಕ ಕೆ.ಎ.ದಯಾನಂದ ತಿಳಿಸಿದರು.

Advertisement

ಸೋಮವಾರ ರಂಗಾಯಣದಲ್ಲಿ ಬಹುರೂಪಿ ನಾಟಕ ಪ್ರದರ್ಶನಗಳ ಟಿಕೆಟ್‌ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಬಹುರೂಪಿ-2017 ಉದ್ಘಾಟನೆಗೆ ಬಾಲಿವುಡ್‌ ನಟ ಓಂಪುರಿ ಅವರನ್ನು ಆಹ್ವಾನಿಸಲಾಗಿತ್ತು. ಆದರೆ, ಇತ್ತೀಚೆಗೆ ಅವರು ನಿಧನರಾದ ಹಿನ್ನೆಲೆಯಲ್ಲಿ ಪರಾಕ್ರಮ ನಿರಿಯೆಲ್ಲ ಅವರನ್ನು ಕೋರಲಾಗಿದ್ದು, ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ಪರಾಕ್ರಮ ಪರಿಚಯ: ನಾಲ್ಕು ದಶಕಗಳಿಂದ ಶ್ರೀಲಂಕಾ ರಂಗಭೂಮಿ ಯಲ್ಲಿ ನಿರಂತರವಾಗಿ ದುಡಿಯುತ್ತಿರುವ ಪರಾಕ್ರಮ ನಿರಿಯೆಲ್ಲ, ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ರಂಗ ಭೂಮಿ ಮೊದಲ ಹಾಗೂ ಮಹತ್ವದ ಪಾತ್ರವಹಿಸುತ್ತದೆ ಎಂದು ಬಲವಾಗಿ ನಂಬಿದವರು. ಈ ನಿಟ್ಟಿನಲ್ಲಿ ಶ್ರೀಲಂಕಾದಲ್ಲಿ ಬೀದಿ ನಾಟಕವನ್ನು ಮನೆ – ಮನೆ, ಗಲ್ಲಿ – ಗಲ್ಲಿಗಳಲ್ಲಿ ಏರ್ಪಡಿಸಿ ಶ್ರೀಲಂಕಾದಲ್ಲೇ ಮೊದಲ ಬಾರಿಗೆ ಬೀದಿನಾಟಕ ಪ್ರಕಾರವನ್ನು ಪ್ರಚುರ ಪಡಿಸಿದವರು.

ಕೊಲೊಂಬೋದ ಲಿಯೋನಲ್‌ ವೆಂಟ್‌ ಮೆಮೋರಿಯಲ್‌ ಸೆಂಟರ್‌ನ ಆರ್ಟ್‌ ಥಿಯೇಟರ್‌ ಅಕಾಡೆಮಿಯಲ್ಲಿ ರಂಗಭೂಮಿಯ ಬಗ್ಗೆ ಅಧ್ಯಯನ ನಡೆಸಿದ ಪರಾಕ್ರಮ ನಿರಿಯೆಲ್ಲ ಚಲನಚಿತ್ರ ಹಾಗೂ ದೂರದರ್ಶನ ಮಾಧ್ಯಮಗಳಲ್ಲೂ ದುಡಿದಿದ್ದಾರೆ. ಸತತ 7 ಬಾರಿ ಅತ್ಯುತ್ತಮ ರಂಗ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ.

ಇವರು ಸ್ಥಾಪಿಸಿದ ಜನಕರಾಲಿಯ ರಂಗಸಂಸ್ಥೆ ಶ್ರೀಲಂಕಾದ ಬೇರೆ ಬೇರೆ ಪ್ರದೇಶ, ಭಾಷೆ, ಧರ್ಮ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಯುವಕರನ್ನು ಒಂದುಗೂಡಿಸಿ ಅವರಿಗೆ ಸೂಕ್ತ ತರಬೇತಿ ನೀಡಿ ಮತ್ತೆ ಶ್ರೀಲಂಕಾದ ಮೂಲೆ ಮೂಲೆಗಳಲ್ಲಿ ಸಂಚಾರಿ ನಾಟಕಗಳನ್ನು ಏರ್ಪಡಿಸುವ ಮೂಲಕ ತಮ್ಮಲ್ಲಿ ತರಬೇತಿ ಪಡೆದ ಯುವಕರನ್ನು ಮಾನವೀಯತೆಯ ರಾಯಭಾರಿಗಳನ್ನಾಗಿ ಮಾಡುತ್ತಿದ್ದಾರೆ.

Advertisement

ತಮಿಳು ಹಾಗೂ ಸಿಂಹಳಿ ಭಾಷೆಯಲ್ಲಿ ನಾಟಕಗಳನ್ನು ರಚಿಸಿದ್ದಾರೆ. ಬೀದಿನಾಟಕ ಪ್ರಕಾರವಷ್ಟೇ ಅಲ್ಲದೆ, ಬ್ರೆಕ್ಟ್‌ನ ನಾಟಕಗಳನ್ನೂ ಒಳಗೊಂಡಂತೆ ಶ್ರೀಲಂಕಾದ ಹಲವಾರು ಜಾನಪದ ಕಥೆಗಳನ್ನು ನಿರಿಯೆಲ್ಲ ರಂಗಕ್ಕೆ ತಂದಿದ್ದಾರೆ.

ಏಕರೂಪ ದರ: ಈ ವರ್ಷ ಪ್ರವೇಶ ದರವನ್ನು ಏಕರೂಪಗೊಳಿಸಲಾಗಿದ್ದು, ಹೊರ ದೇಶದ ನಾಟಕಗಳಿಗೆ 100 ರೂ. ದೇಶಿ ನಾಟಕಗಳಿಗೆ 50 ರೂ. ಟಿಕೆಟ್‌ ದರ ನಿಗದಿಪಡಿಸಲಾಗಿದೆ. ಟಿಕೆಟ್‌ಗಳು ರಂಗಾಯಣದ ಕೌಂಟರ್‌ ಹಾಗೂ ಬ್ಲೂ ಟಿಕೆಟ್‌ ಡಾಟ್‌ ಕಾಮ್‌ನಲ್ಲಿ ಆನ್‌ಲೈನ್‌ನಲ್ಲೂ ಖರೀದಿಸಬಹುದು. 

ನಾಟಕೋತ್ಸವದ ಜತೆಗೆ ವಿಚಾರಗೋಷ್ಠಿಗಳು, ರಂಗಸಂಗೀತ ಕಾರ್ಯಕ್ರಮ, ವಸ್ತುಪ್ರದರ್ಶನ, ಪುಸ್ತಕ ಮೇಳ, ಫ‌ುಡ್‌ಕೋರ್ಟ್‌ ಎಲ್ಲವೂ ಇರಲಿದೆ ಎಂದು ಅವರು ತಿಳಿಸಿದರು. ರಂಗಾಯಣ ಉಪ ನಿರ್ದೇಶಕಿ ನಿರ್ಮಲ ಮಠಪತಿ, ರಂಗ ಸಮಾಜದ ಸದಸ್ಯ ಮಂಡ್ಯರಮೇಶ್‌, ಬಹುರೂಪಿ – 2017 ಸಂಚಾಲಕ ರಾಮನಾಥ್‌ ಉಪಸ್ಥಿತರಿದ್ದರು.

ಇನ್ನಿತರ ಕಾರ್ಯಕ್ರಮ
ರಂಗ ಸಂಗೀತ ಕಾರ್ಯಕ್ರಮಗಳು: ರಂಗಾಯಣದ ದುಂಡುಕಣದಲ್ಲಿ ಪ್ರತಿ ದಿನ ಸಂಜೆ 5ಕ್ಕೆ ರಂಗ ಸಂಗೀತ ಕಾರ್ಯಕ್ರಮ, ಜ.13ರಂದು ಬಿ.ಜಯಶ್ರೀ ಮತ್ತು ತಂಡದಿಂದ ಕನ್ನಡ ರಂಗಸಂಗೀತ, ಜ.14ರಂದು ಕಲ್ಯಾಣಿ ಮತ್ತು ತಂಡದಿಂದ ಸಂಸ್ಕೃತ ಮತ್ತು ಮಲಯಾಳಂ, ಜ.15ರಂದು ನಾಗೇಶ್ವರರಾವ್‌ ಮತ್ತು ತಂಡದಿಂದ ತೆಲುಗು, ಜ.16ರಂದು ವೈ.ಎಂ.ಪುಟ್ಟಣ್ಣಯ್ಯ ಮತ್ತು ತಂಡದಿಂದ ಕನ್ನಡ, ಜ.17ರಂದು ರಾಜೇಶ್‌ ಬಡೋರಿಯಾ ಮತ್ತು ತಂಡದಿಂದ, ಜ.18ರಂದು ಅಮೋದ್‌ ಭಟ್‌ ಮತ್ತು ತಂಡ ಹಿಂದಿ ರಂಗ ಸಂಗೀತ ಕಾರ್ಯಕ್ರಮ ನೀಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next