ವರದಿ: ಶಶಿಧರ್ ಬುದ್ನಿ
ಧಾರವಾಡ: ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪಾಲಿ ಕ್ಲಿನಿಕ್‌ಗೆ ಮಂಜೂರಾಗಿದ್ದ ಹೊಸ ಕಟ್ಟಡ ಕಾಮಗಾರಿ ನಾಲ್ಕು ವರ್ಷಗಳ ಬಳಿಕ ಮುಕ್ತಾಯಗೊಂಡಿದ್ದು, ಅಂತೂ ಪಾಲಿ ಕ್ಲಿನಿಕ್ ಕಾರ್ಯಾರಂಭಕ್ಕೆ ಸಜ್ಜಾಗಿದೆ.
ನಗರದ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರ ಕಚೇರಿ ಎದುರು 2.17 ಕೋಟಿ ಅನುದಾನದಲ್ಲಿ ಪಾಲಿ ಕ್ಲಿನಿಕ್ ನ ಹೊಸ ಕಟ್ಟಡ ನಿರ್ಮಾಣಗೊಂಡಿದ್ದು, ಇದೀಗ ಕ್ಲಿನಿಕ್ ಕಾರ್ಯಾರಂಭಕ್ಕೆ ಬೇಕಿರುವ ಸಣ್ಣಪುಟ್ಟ ಕೆಲಸಗಳಷ್ಟೇ ಬಾಕಿ ಉಳಿದಿದೆ. ಆದರೆ ಹೊಸ ಕಟ್ಟಡ ಕಾರ್ಯರಂಭ ಜತೆಗೆ ತಜ್ಞ ಪರಿಣಿತರು-ಸಿಬ್ಬಂದಿಗಳ ನೇಮಕವೂ ಆಗಬೇಕಿದೆ.
ಪಾಲಿಕ್ಲಿನಿಕ್‌ನ ಏಳು-ಬೀಳು: 2014ರಿಂದ ಜಿಲ್ಲಾಸ್ಪತ್ರೆಯ ಪರಿಕಲ್ಪನೆ ರೂಪದಲ್ಲಿ ಪಾಲಿ ಕ್ಲಿನಿಕ್ ಆರಂಭಗೊಂಡು ಏಳು ವರ್ಷಗಳೇ ಸಂದಿವೆ. ಆದರೆ ಸುಸಜ್ಜಿತ ಕಟ್ಟಡ, ತಜ್ಞ ವೈದ್ಯರ ಹಾಗೂ ಎಕ್ಸರೆಯಂತಹ ಯಂತ್ರಗಳ ಕೊರತೆ ಇತ್ತು. ಅದಕ್ಕಾಗಿ 2017ರಲ್ಲಿ ಪಾಲಿ ಕ್ಲಿನಿಕ್‌ಗೆ ಹೊಸ ಸುಸಜ್ಜಿತ ಕಟ್ಟಡ ಮಂಜೂರು ಮಾಡಿ, 100 ಅಡಿ ಉದ್ದ ಹಾಗೂ 135 ಅಗಲದ ಜಾಗದಲ್ಲಿ ನಿರ್ಮಿಸಲು 2.17 ಕೋಟಿ ಅನುದಾನ ಒದಗಿಸಿತ್ತು. 2018ರಲ್ಲಿ ಈ ಕಟ್ಟಡ ನಿರ್ಮಾಣ ಹೊಣೆಯನ್ನು ಕರ್ನಾಟಕ ಗೃಹ ಮಂಡಳಿಗೆ ನೀಡಲಾಗಿತ್ತು. ಆದರೆ ಈ ಮಂಡಳಿ ಇಂಜಿನಿಯರ್ ತಂಡದಿಂದ ಇಲ್ಲಿ ಕಟ್ಟಡ ನಿರ್ಮಾಣ ಮಾಡಬಹುದೆಂಬ ಬಗ್ಗೆ ಸರ್ವೇ ಹಾಗೂ ತಪಾಸಣೆ ಮಾಡಿಸಿ ಪ್ರಮಾಣ ಪತ್ರ ಪಡೆದ ಬಳಿಕ 2019ರ ಜನವರಿ ತಿಂಗಳಲ್ಲಿ ಕಾಮಗಾರಿಗೆ ಚಾಲನೆ ನೀಡಿದರೂ ಕಟ್ಟಡ ಕಾಮಗಾರಿ ಆರಂಭ ಆಗಲೇ ಇಲ್ಲ. ಇದಲ್ಲದೇ ಆ ವರ್ಷ ಸುರಿದ ಮಳೆಯಿಂದ ಈ ಜಾಗದ ತಗ್ಗು ಪ್ರದೇಶದಲ್ಲಿ ನೀರು ತುಂಬಿದ್ದರಿಂದ ಆರು ತಿಂಗಳ ಕಾಲ ಕಾಮಗಾರಿಯೇ ಆಗಲಿಲ್ಲ. ಇದಾದ ಬಳಿಕ ಇದೀಗ ಹೊಸ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಸುಸಜ್ಜಿತ ಕಟ್ಟಡದಲ್ಲಿ ಸೇವೆ ನೀಡಲು ಸಿದ್ಧಗೊಂಡು ನಿಂತಿದೆ.
ಮೂರಕ್ಕೆ ಒಂದೇ ಹುದ್ದೆ: ಪಶುಗಳಿಗೆ ಔಷಧ ಶಾಸ್ತ್ರ, ಶಸ್ತ್ರಚಿಕಿತ್ಸೆ ಹಾಗೂ ಬಂಜೆತನ ನಿವಾರಣೆ ಮತ್ತು ಪ್ರಸೂತಿ ಶಾಸ್ತ್ರ ಈ ಮೂರೂ ವಿಭಾಗದಲ್ಲಿ ತಜ್ಞ ವೈದ್ಯರನ್ನು ಕೊಡಬೇಕೆಂಬುದೇ ಈ ಪಾಲಿ ಕ್ಲಿನಿಕ್ ಉದ್ದೇಶ. ತಜ್ಞರ ಸೇವೆ ನೀಡುವುದೇ ಈ ಕ್ಲಿನಿಕ್‌ನ ಪರಿಕಲ್ಪನೆ ಆಗಿದ್ದು, ಸದ್ಯ ಹಳೆಯ ಕೊಠಡಿಯಲ್ಲಿ ನಡೆದಿರುವ ಈ ಕ್ಲಿನಿಕ್‌ನಲ್ಲಿ ಹುದ್ದೆಗಳ ಮರು ವಿನ್ಯಾಸ ಆಗಿರುವ ಕಾರಣ ಮೂರು ಹುದ್ದೆಗಳು ಇಲ್ಲದಂತಾಗಿದೆ. ಈ ಹಿಂದೆ ಇದ್ದ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಯನ್ನೇ ಮರು ವಿನ್ಯಾಸ ಮಾಡಿ ಈಗಿರುವ ಪಾಲಿ ಕ್ಲಿನಿಕ್‌ಗೆ ಮುಖ್ಯ ಪಶು ವೈದ್ಯಾಧಿಕಾರಿಯನ್ನಾಗಿ ನೀಡಲಾಗಿದೆ. ಹೀಗಾಗಿ ಈಗ ನಿರ್ಮಾಣ ಆಗಿರುವ ಸುಸಜ್ಜಿತ ಕಟ್ಟಡದಲ್ಲಿ ಔಷಧಶಾಸ್ತ್ರ, ಶಸ್ತ್ರಚಿಕಿತ್ಸೆ ಹಾಗೂ ಪ್ರಸೂತಿ ಶಾಸ್ತ್ರ ವಿಭಾಗದಲ್ಲಿ ಪ್ರತ್ಯೇಕ ತಜ್ಞ ವೈದ್ಯರ ಹುದ್ದೆ ಸೃಷ್ಟಿಯಾಗಲಿದ್ದು, ಆ ಮೂಲಕ ಈ ಮೂರು ವಿಭಾಗದಲ್ಲೂ ತಜ್ಞ ವೈದ್ಯರ ಸೇವೆ ಸಿಗುವ ನಿರೀಕ್ಷೆ ಇದೆ.
ಹೊಸ ಕಟ್ಟಡವಿಲ್ಲದೇ ತೊಂದರೆ: ಕೋವಿಡ್ ಕಾರಣದಿಂದ ಉದ್ಘಾಟನೆಗೆ ವಿಳಂಬ ಆಗಿದೆ ಎಂಬ ಕಾರಣ ಅಧಿಕಾರಿ ವರ್ಗ ನೀಡುತ್ತಿದ್ದು, ಆದರೆ ಇದರಿಂದ ಹಳೇ ಕಟ್ಟಡದಲ್ಲಿಯೇ ಸಾಗಿರುವ ಪಾಲಿಕ್ಲಿನಿಕ್‌ನಿಂದ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ತೊಂದರೆ ಅನುಭವಿಸುವಂತಾಗಿದೆ. ಈ ಹಿಂದೆ ತಾತ್ಕಾಲಿಕವಾಗಿ ಇದ್ದ ಶಸ್ತ್ರಚಿಕಿತ್ಸೆ ಕೊಠಡಿಯನ್ನು ಹೊಸ ಕಟ್ಟಡಕ್ಕಾಗಿ ನೆಲಸಮ ಮಾಡಿರುವ ಕಾರಣ ಈಗ ಶಸ್ತ್ರಚಿಕಿತ್ಸೆಯ ಕೊಠಡಿಯ ಕೊರತೆ ಇದೆ. ಹೀಗಾಗಿ ಕ್ಲಿನಿಕ್‌ನ ಆವರಣದ ಗಿಡಗಳಿಗೆ ಜಾನುವಾರು ಕಟ್ಟಿ ಚಿಕಿತ್ಸೆ ನೀಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೇ ಪಾಲಿಕ್ಲಿನಿಕ್‌ನ ಮುಖ್ಯ ವೈದ್ಯಾಧಿಕಾರಿ ಹೊರತುಪಡಿಸಿ, ಸಹಾಯಕ ಸಿಬ್ಬಂದಿ ಕೊರತೆಯಿಂದ ತೊಂದರೆ ಉಂಟಾಗಿದೆ. ಹೀಗಾಗಿ ಹೊಸ ಕಟ್ಟಡದಲ್ಲಿ ಕಾರ್ಯಾರಂಭ ಜತೆಗೆ ಸಿಬ್ಬಂದಿ ಕೊರತೆ ನಿವಾರಣೆಯಾದರೆ ಜಾನುವಾರುಗಳಿಗೆ ಗುಣಮಟ್ಟದ ಚಿಕಿತ್ಸೆ ಸಿಗಲಿದೆ.