“ಒಂದು ವರ್ಷ ಒಂದಷ್ಟು ಸಮಸ್ಯೆಗಳು ಎದುರಾಗಿದ್ದವು. ಆಮೇಲೆ ಆರೋಗ್ಯ ಕೈ ಕೊಟ್ಟಿತ್ತು. ಸಿಕ್ಕಾಪಟ್ಟೆ ಖರ್ಚಾಗಿದೆ. ಸಾಲವೂ ಆಗಿದೆ. ಚಿತ್ರ ಬಿಡುಗಡೆಗೆ ತಡವಾಗಿದೆ. ಅದಕ್ಕೆ ಹಲವು ಕಾರಣಗಳಿವೆ…’ ಹೀಗೆ ಮೆಲುದನಿಯಲ್ಲೇ ಹೇಳುತ್ತ ಹೋದರು ನಿರ್ದೇಶಕ ಕಾರಂಜಿ ಶ್ರೀಧರ್. ಅವರು ಹೇಳಿದ್ದು, ತಮ್ಮ ನಿರ್ದೇಶನದ “ಜಾಲಿ ಬಾರು ಮತ್ತು ಪೋಲಿ ಹುಡುಗರು’ ಚಿತ್ರದ ಬಗ್ಗೆ.
ಶುಕ್ರವಾರ ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗಿದೆ. ಚಿತ್ರ ಬಿಡುಗಡೆ ಕುರಿತು ಹೇಳಲೆಂದೇ ಸಂಗೀತ ನಿರ್ದೇಶಕ ವೀರ್‌ಸಮರ್ಥ್ ಜತೆ ಬಂದಿದ್ದರು ಶ್ರೀಧರ್. ಮಾತುಕತೆ ಎಲ್ಲ ಮುಗಿದ ಮೇಲೆ ನಾಯಕಿ ಮಾನ್ಸಿ ಪತ್ರಿಕಾಗೋಷ್ಠಿಗೆ ಸೇರಿಕೊಂಡರು. “ಚಿತ್ರ ತಡವಾಗಿದೆ. ಯಾವತ್ತೋ ಬಿಡುಗಡೆಯಾಗಬೇಕಿತ್ತು. ಆದರೆ, ಬಿಡುಗಡೆಗೆ ಹಲವು ಅಡಚಣೆಗಳು ಎದುರಾದವು. ದಿನಾಂಕ ಮುಂದಕ್ಕೆ ಹೋಗಿ ಹೋಗಿ, ಈಗ ರಿಲೀಸ್ ಆಗುತ್ತಿದೆ.
ಮಲ್ಟಿಪ್ಲೆಕ್ಸ್ ಸೇರಿ ಸುಮಾರು 150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಓಂ ಸಾಯಿ ವಿತರಣೆ ಸಂಸ್ಥೆ ಜತೆ ಸೇರಿ ನಾನೇ ರಿಲೀಸ್ ಮಾಡುತ್ತಿದ್ದೇನೆ. ಕಾರಣ, ಸಕ್ಸಸ್ ಹೀರೋ ಇರಬೇಕು, ಇಲ್ಲಾ, ಹೀರೋ ಹಿಂದೆ ಸಕ್ಸಸ್ ಇರಬೇಕು. ಅಂತಹ ಚಿತ್ರಗಳಿಗೆ ವಿತರಣೆ ಸಮಸ್ಯೆ ಇರೋದಿಲ್ಲ. ಮಾರ್ಕೆಟ್ ಇಲ್ಲದಿದ್ದರೆ, ನಿರ್ಮಾಪಕರಿಗೆ ಸಮಸ್ಯೆ ಇದ್ದೇ ಇರುತ್ತೆ.
ನಾನೇ ಓಂ ಸಾಯಿ ವಿತರಣೆ ಸಂಸ್ಥೆಯ ಸಹಕಾರ ಪಡೆದು ವಿತರಣೆ ಮಾಡುತ್ತಿದ್ದೇನೆ. ಇದೊಂದು ಮನರಂಜನೆ ಚಿತ್ರ. ಬಿ.ಆರ್.ಲಕ್ಷ್ಮಣರಾವ್ ಅವರು ಬರೆದ “ಜಾಲಿ ಬಾರಿನಲ್ಲಿ ಪೋಲಿ ಗೆಳೆಯರು..’ ಹಾಡು ಚಿತ್ರಕ್ಕೆ ಸ್ಪೂರ್ತಿ. ಆ ಪಾತ್ರ ಕಟ್ಟಿಕೊಂಡು ಚಿತ್ರ ಮಾಡಿದ್ದೇನೆ. ಒಂದು ರೊಮ್ಯಾಂಟಿಕ್ ಕಾಮಿಡಿ ಇಲ್ಲಿದೆ’ ಅಂದರು ಅವರು. ಸಂಗೀತ ನಿರ್ದೇಶಕ ವೀರ್‌ಸಮರ್ಥ್ ಅವರು “ಕಾರಂಜಿ’ ಬಳಿಕ ಶ್ರೀಧರ್ ಜತೆ ಮಾಡುತ್ತಿರುವ ಸಿನಿಮಾ ಇದು.
“ಈಗಾಗಲೇ ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಲಕ್ಷ್ಮಣ್‌ರಾವ್ ಅವರಿಲ್ಲಿ “ಸಾಲ ಬೇಕ ಸಾಲ’ ಎಂಬ ಹಾಡು ಬರೆದಿದ್ದಾರೆ. ಕನ್ನಡ ಗಾಯಕರು ಹಾಡಿದ್ದಾರೆ’ ಎಂದರು ವೀರ್‌ಸಮರ್ಥ್. ಅಂದು “ಮದರಂಗಿ’ ಕೃಷ್ಣ ಬಂದಿರಲಿಲ್ಲ. ಕಾರಣ, ಮೈಸೂರಲ್ಲಿದ್ದರಂತೆ. ಇನ್ನು, ನಾಯಕಿ ಮಾನ್ಸಿ ಕೂಡ ತಡವಾಗಿ ಆಗಮಿಸಿದರು. ಅಷ್ಟೊತ್ತಿಗೆ ಮಾತುಕಥೆಗೆ ಬ್ರೇಕ್ ಬಿದ್ದಿತ್ತು.