ಬೆಂಗಳೂರು: 2020 ರ ವೇಳೆಗೆ ದೇಶದಲ್ಲಿ ಶೇ. 40 ರಷ್ಟು ಮಾಲಿನ್ಯ ಮುಕ್ತ ಇಂಧನದ ಬಳಕೆಯ ಗುರಿ ಇದೆ ಎಂದು ಕೇಂದ್ರ ಸಚಿವ ಹರ್ಷವರ್ಧನ್ ತಿಳಿಸಿದರು.
ನಗರದ ಐಐಎಸ್ಸಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಂತರಶಾಸ್ತ್ರೀಯ ಶಕ್ತಿ ಸಂಶೋಧನ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಿ ಅವರು ಮಾತನಾಡಿದರು.
ಪ್ರಸ್ತುತ ಒಟ್ಟಾರೆ ಇಂಧನ ಬಳಕೆಯಲ್ಲಿ ಶೇ. 30 ರಷ್ಟು ಈಗಾಗಲೇ ಮಾಲಿನ್ಯ ಮುಕ್ತ ಇಂಧನವನ್ನು ಬಳಕೆ ಮಾಡಲಾಗುತ್ತಿದೆ. ಇದರಲ್ಲಿ ನವೀಕರಿಸಿದ, ಸೌರಶಕ್ತಿ, ಪವನ ವಿದ್ಯುತ್ ಕೂಡ ಸೇರಿದೆ. ಮುಂದುವರಿದ ಭಾಗವಾಗಿ 2020 ರ ವೇಳೆಗೆ ಇದರ ಬಳಕೆ ಶೇ. 40 ರಷ್ಟು ಹೆಚ್ಚಿಸುವ ಗುರಿ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮ ರೂಪಿಸುತ್ತಿದೆ. ಜತೆಗೆ ಪೂರಕ ಸಂಶೋಧನೆಗೆ ಹೆಚ್ಚು ಅನುದಾನ ನೀಡುತ್ತಿದ್ದು, ಐಐಎಸ್ಸಿಗೆ ಕಳೆದ ಮೂರು ವರ್ಷಗಳಲ್ಲಿ 500 ಕೋಟಿ ರೂ. ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ವಿಜ್ಣಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಆಶಿತೋಶ್ ಶರ್ಮ, ಭೂಮಿಯಿಂದ ಕೇವಲ 15 ಸೆಂ.ಮೀ. ಅಂತರದ ರೆಸ್ಯುಲ್ಯೂಷನ್ ನಲ್ಲಿ ಇಡೀ ಭಾರತದ ಭೌಗೋಳಿಕ ಪ್ರದೇಶವನ್ನು ಡಿಜಿಟಲ್ ನಕ್ಷೆಗೆ ಪರಿವರ್ತಿಸುತ್ತಿದ್ದು, ಈ ಮಹತ್ವಾಕಾಂಕ್ಷಿ ಯೋಜನೆಯ ಮೊದಲ ಹಂತದಲ್ಲಿ ಕರ್ನಾಟಕವೂ ಸೇರಿದೆ ಎಂದರು.
ಡ್ರೋಣ್ ಗಳನ್ನು ಬಳಸಿ ಈ ಡಿಜಿಟಲ್ ಆಧಾರಿತ ವೈಜ್ಞಾನಿಕ ಮ್ಯಾಪಿಂಗ್ ಮಾಡಲಾಗುತ್ತಿದೆ. ಪ್ರಸ್ತುತ ಇರುವ ಗೂಗಲ್ ಮ್ಯಾಪಿಂಗ್ ಹಲವು ಮೀಟರ್ ರೆಸ್ಯುಲ್ಯೂಷನ್ ನಲ್ಲಿದೆ. ಎರಡು ವರ್ಷಗಳಲ್ಲಿ ಒಟ್ಟಾರೆ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದರು.